ತುಮಕೂರು: ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ನಾಯಕರು, ಮುಖಂಡರು ಅಗ್ರೆಸ್ಸಿವ್ ಆಗಿ ಮಾತನಾಡುತ್ತಿಲ್ಲವಾ? ಕಾಂಗ್ರೆಸ್ ನಾಯಕರಿಗೆ ಬಿಜೆಪಿ ನಾಯಕರು ಸರಿಯಾಗಿ ತಿರುಗೇಟು ಕೊಡುತ್ತಿಲ್ಲವಾ? ಹೀಗಾಗಿಯೇ ಬಿಜೆಪಿಗೆ ಹಿನ್ನಡೆ ಆಗುತ್ತಿದ್ದೆಯಾ? ಎಂಬ ಕುರಿತು ಬಿಜೆಪಿಯ ವಲಯದಲ್ಲೇ ಚರ್ಚೆ ಶುರುವಾದ ರೀತಿ ಕಾಣುತ್ತಿದೆ. ಇದಕ್ಕೆ ಇಂಬು ನೀಡುವಂತೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (J C Madhuswamy) ಅವರು ಮಾತನಾಡಿರುವುದು ಕಂಡುಬಂದಿದೆ.
ಹೌದು, ಗಟ್ಟಿಧ್ವನಿಯಲ್ಲಿ ಆಕ್ರಮಣಕಾರಿಯಾಗಿ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಪ್ರಸ್ತಾಪಿಸಿರುವುದು ಕಂಡುಬಂದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಮತ್ತಿಘಟ್ಟದಲ್ಲಿ ತಮ್ಮ ಪಕ್ಷದ ದೌರ್ಬಲ್ಯ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ನಾವೆಲ್ಲಾ ಮತ್ತೆ ಬಿಜೆಪಿ ಸರ್ಕಾರ ತರಲೇ ಬೇಕು ಎಂದು ಶ್ರಮಿಸುತ್ತಿದ್ದೇವೆ. ಆದರೆ, ಮೂಕ ಪ್ರೇಕ್ಷಕರಾಗಿರುವುದು ನಮ್ಮ ದೌರ್ಭಾಗ್ಯವಾಗಿದೆ. ಯಾರೋ ಬಾಯಿಗೆ ಬಂದ ಹಾಗೆ ಸರ್ಕಾರದ ವಿರುದ್ಧ ಮಾತನಾಡಿದಾಗ ನಾವೇ ಜಿಜ್ಞಾಸೆಗೆ ಒಳಗಾಗುತಿದ್ದೇವೆ. ನೀವೇನು ಎಂದು ಅವರನ್ನು ನಾವು ವಾಪಸ್ ಕೇಳುತ್ತಿಲ್ಲ. ವಿರುದ್ಧ ಮಾತನಾಡಿದವರಿಗೆ ಮರು ಪ್ರಶ್ನೆ ಹಾಕುತ್ತಿಲ್ಲ. ಕಾಂಗ್ರೆಸ್‌ನವರ ರೀತಿ ಅಗ್ರೆಸಿವ್ ಆಗಿ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ.
ನಾವು ಗಟ್ಟಿ ಧ್ವನಿಯಲ್ಲಿ ನಮ್ಮ ಸಾಧನೆಯನ್ನು ಹೇಳಿಕೊಳ್ಳಬೇಕಾಗಿದೆ. ಆಗ ಅವರು ಬಾಯಿ ಮುಚ್ಚಿಕೊಳ್ಳುತ್ತಾರೆ. ವಿರೋಧಿಗಳನ್ನು ಆಡೋಕೆ ಬಿಟ್ಟರೆ ಅವರು ಆಡ್ತಾನೆ ಇರುತ್ತಾರೆ. ಅಮಾಯಕ ಜನರಿಗೆ ವಿರೋಧಿಗಳು ಹೇಳುವುದು ಸತ್ಯ ಎನ್ನಿಸುತ್ತದೆ. ಕೋರ್ಟ್‌ನಲ್ಲಿ ಪ್ರತಿವಾದಿಗಳ ವಿಚಾರಣೆ ವೇಳೆ ಹಾಜರಾಗದಿದ್ದರೆ, ಅವರ ಪರ ಆದೇಶವಾಗುತ್ತದೆ. ನಮ್ಮ ಪಕ್ಷದಲ್ಲಿ ಎಕ್ಸ್ ಪಾರ್ಟಿ ಡಿಸಿಷನ್ ಆಗಬಾರದು. ಹಗಲು ಕಳ್ಳರು, ರಾತ್ರಿ ಕಳ್ಳನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.
ಚಿಕ್ಕನಾಯಕನಹಳ್ಳಿಯಲ್ಲಿ ಅಭಿವೃದ್ಧಿ ಪದದ ಕಾಗುಣಿತ ಗೊತ್ತಿಲ್ಲದ ವ್ಯಕ್ತಿ ನನ್ನ ಎದುರಾಳಿಯಾಗಿದ್ದಾರೆ. ಹಾಗಾಗಿ ನೀವೇ ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧೆ ಮಾಡಿ ಎಂದು ಸಿದ್ದರಾಮಯ್ಯನವರ ಬಳಿ ಕೇಳಿದ್ದೇನೆ. ಆಗ ಸಮಬಲದ ಹೋರಾಟ ನಡೆಯುತ್ತದೆ, ಇಬ್ಬರೂ ಸೆಣಸಾಡಲು ಗೌರವ ಇರುತ್ತದೆ. ಇಬ್ಬರು ಸರಿಯಾಗಿ ಕುಸ್ತಿ ಆಡಬಹುದು. ಆದರೆ, ಏನೂ ಗೊತ್ತಿಲ್ಲದವರ ಜತೆ ನಾನು ಸ್ಪರ್ಧೆ ಮಾಡಲು ನಿಂತಿದ್ದು ಯಾವ ಜನ್ಮದ ಪಾಪವೋ. ಇಂಥ ಕೆಟ್ಟ ಸ್ಥಿತಿ ನನಗೆ ಬರಬಾರದಿತ್ತು ಎಂದು ಮಾಜಿ ಶಾಸಕ ಸಿ.ಬಿ. ಸುರೇಶ್ ಬಾಬು ತಮಗೆ ಸರಿಸಮಾನನಲ್ಲ ಎಂದು ಹೇಳಿದರು.
ಇದನ್ನೂ ಓದಿ | Sumalatha Ambareesh: ಸಂಸದೆ ಸುಮಲತಾ ಆಗಮನಕ್ಕೆ ವಿರೋಧ; ಬೆಂಬಲಿಗರು, ವಿರೋಧಿ ಬಣದ ನಡುವೆ ವಾಗ್ವಾದ, ಘರ್ಷಣೆ
ಇನ್ನು ಜೆ.ಡಿ.ಎಸ್ ವಿರುದ್ಧವೂ ಕಿಡಿಕಾರಿದ ಅವರು, ದೇವೇಗೌಡರು ತುಮಕೂರಿಗೆ ಹೇಮಾವತಿ ನೀರನ್ನು ಕೊಡದೆ ಮೋಸ ಮಾಡಿದರು. ನಾನು ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಹೇಳಿಕೆಯ ಹಳೇ ಪೇಪರ್ ಕಟಿಂಗ್ ತೋರಿಸಿದ್ದೆ. ಹಾಗಾಗಿಯೇ ಜಿಲ್ಲೆಯ ಜನರು ದೇವೇಗೌಡರನ್ನು ಸೋಲಿಸಿದರು. ಇಷ್ಟೆಲ್ಲ ಮಾಡಿಯೂ ಕುಮಾರಸ್ವಾಮಿಯವರು ಚಿಕ್ಕನಾಯಕನಹಳ್ಳಿಗೆ ಟೂರ್ ಹಾಕುತ್ತಾರೆ. ಮಾನ ಮರ್ಯಾದೆ ಇದ್ದವರು ಯಾರಾದರೂ ಚಿಕ್ಕನಾಯಕನಹಳ್ಳಿಗೆ ಬರಬಹುದಾ? ಇಲ್ಲಿಗೆ ಬಂದು ಪಂಚರತ್ನ ಯಾತ್ರೆಯಲ್ಲಿ ನನ್ನ ವಿರುದ್ಧ ಭಾಷಣ ಮಾಡುತ್ತಾರೆ ಎಂದು ಕುಟುಕಿದರು.
ತಾಲೂಕು ಅಭಿವೃದ್ಧಿ ಆಗಿಲ್ಲವಂತೆ, ನಾನು ಅಭಿವೃದ್ಧಿ ಆಗಿದ್ದೇನಂತೆ. ಹೊಳೆ ನರಸೀಪುರದಲ್ಲಿ ಇವರಪ್ಪಗೆ ೫೦ ರೂಪಾಯಿ ಕೊಟ್ಟು ಅಯ್ನೋರು ಕಂಟ್ರ್ಯಾಕ್ಟರ್ ಕೆಲಸ ಶುರುಮಾಡಿಸಿದರು. ನನಗೇನೂ ಆಸ್ತಿ ಕೊರತೆ ಇರಲಿಲ್ಲ, ನಮ್ಮಪ್ಪ ಚೆನ್ನಾಗಿ ಇಟ್ಟಿದ್ದ. ನಮ್ಮಪ್ಪ ನಮ್ಮಜ್ಜ ಚೆನ್ನಾಗಿ ಬಾಳಿದವರೇ. ಇವರ ಹಾಗೆ ದೋಚಿದ್ದು, ಬಾಚಿದ್ದು ಪ್ರಕರಣಗಳಿಲ್ಲ. ಅಪ್ಪ ಮಕ್ಕಳು, ಮೊಮ್ಮಕ್ಕಳು ಎಲ್ಲ ದೋಚಲು ಶುರುಮಾಡಿದವರು ಎಂದು ಆರೋಪಿಸಿದರು.