ಕೋಲಾರ: ವಿಧಾನಸಭಾ ಚುನಾವಣೆ (Srinivaspur Election Results) ಫಲಿತಾಂಶ ಹೊರಬಿದ್ದಿದ್ದು, ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಗೆಲುವು ಸಾಧಿಸಿದ್ದಾರೆ. ಇವರು 10,443 ಮತಗಳ ಅಂತರದಿಂದ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಗೆಲುವು ಪಡೆದಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ 95,463 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಮೇಶ್ ಕುಮಾರ್ 85,020 ಮತ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಗುಂಜೂರು ಶ್ರೀನಿವಾಸರೆಡ್ಡಿ 6664 ಮತ ಪಡೆದಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಆರ್.ರಮೇಶ್ ಕುಮಾರ್ 93,571 ಮತ ಪಡೆದು ಸಮೀಪದ ಪ್ರತಿಸ್ಪರ್ಧಿ ವಿರುದ್ಧ 10,552 ಮತಗಳ ಅಂತರದಲ್ಲಿ ಜಯಶೀಲರಾಗಿದ್ದರು. ಜೆಡಿಎಸ್ ಅಭ್ಯರ್ಥಿ ಜಿ. ಕೆ. ವೆಂಕಟಶಿವಾರೆಡ್ಡಿ 83,019 ಪಡೆದಿದ್ದರು.
ಇದನ್ನೂ ಓದಿ | Chikkaballapur Election Results : ಚಿಕ್ಕಬಳ್ಳಾಪುರದಲ್ಲಿ ಡಾ. ಕೆ ಸುಧಾಕರ್‌ರನ್ನು ಹೀನಾಯವಾಗಿ ಸೋಲಿಸಿದ ಪ್ರದೀಪ್ ಈಶ್ವರ್
40 ವರ್ಷದಿಂದ ಇಬ್ಬರ ನಡುವೆಯೇ ಸ್ಪರ್ಧೆ!
ಶ್ರೀನಿವಾಸಪುರ ಕ್ಷೇತ್ರದಲ್ಲಿ 1983ರಿಂದ ಸತತ 10 ಚುನಾವಣೆಗಳಲ್ಲಿ (40 ವರ್ಷ) ಕೆ. ಆರ್. ರಮೇಶ್ ಕುಮಾರ್ ಮತ್ತು ಜಿ.ಕೆ.ವೆಂಕಟಶಿವಾರೆಡ್ಡಿ ನಡುವೆಯೇ ಪೈಪೋಟಿ ನಡೆಯುತ್ತಾ ಬಂದಿದೆ. ಪ್ರತಿ ಬಾರಿ ಇವರಿಬ್ಬರೇ ಮೊದಲು ಹಾಗೂ ಎರಡನೇ ಸ್ಥಾನ ಪಡೆಯುತ್ತಿದ್ದಾರೆ. ಪಕ್ಷಗಳು ಬದಲಾಗಿವೆ, ಆದರೆ ವ್ಯಕ್ತಿಗಳು ಅವರಿಬ್ಬರೆ. ಮೂರನೇ ವ್ಯಕ್ತಿಗೆ ಪ್ರವೇಶವನ್ನೇ ನೀಡಿಲ್ಲ.
1978ರಲ್ಲಿ ರಮೇಶ್ ಕುಮಾರ್ ಮೊದಲಿಗೆ ಜಯಗಳಿಸಿದರು. 1983ರಿಂದ ವೆಂಕಟಶಿವಾರೆಡ್ಡಿ ಜತೆಯಾಗಿದ್ದಾರೆ. ಇಬ್ಬರೂ ಮೊದಲಿಗೆ ಎದರುಬದರು ಸ್ಪರ್ಧಿಸಿದಾಗ ರಮೇಶ್ ಕುಮಾರ್‌ಗೆ 33 ವರ್ಷ, ವೆಂಕಟಶಿವಾರೆಡ್ಡಿಗೆ 36 ವರ್ಷ. ಈಗ ರಮೇಶ್ ಕುಮಾರ್‌ಗೆ 73 ವರ್ಷ, ವೆಂಕಟಶಿವಾರೆಡ್ಡಿಗೆ 76 ವರ್ಷ. ಇವರಿಬ್ಬರ ನಡುವೆ ಈ ಬಾರಿಯೂ ಸೇರಿ 10 ಬಾರಿ ಸ್ಪರ್ಧೆ ನಡೆದಿದ್ದು, ಸ್ವಾಮಿ 5 ಹಾಗೂ ರೆಡ್ಡಿ 5 ಬಾರಿ ಮೇಲುಗೈ ಸಾಧಿಸಿದ್ದಾರೆ.