Site icon Vistara News

Karnataka Election 2023: ಜೆಡಿಎಸ್‌ ಅಭ್ಯರ್ಥಿ ಪ್ರೊ. ನಾಗೇಶ ಎಚ್‌. ನಾಯ್ಕ ಕಾಗಾಲ ನಾಮಪತ್ರ ಸಲ್ಲಿಕೆ

JDs candidate Prof Nagesh Naik Kagala files nomination Karnataka Election 2023 updates

ಯಲ್ಲಾಪುರ: ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರೊ. ನಾಗೇಶ ಎಚ್‌. ನಾಯ್ಕ ಕಾಗಾಲ ಅವರು ಬುಧವಾರ (ಏಪ್ರಿಲ್‌ 19) ತಮ್ಮ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ನಂತರ ಅಲ್ಲಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತಮ್ಮ ನೂರಾರು ಬೆಂಬಲಿಗರೊಂದಿಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ಬಂದರು. ಅಲ್ಲಿಂದ ನೂತನ ತಾಲೂಕು ಆಡಳಿತ ಕೇಂದ್ರಕ್ಕೆ ತೆರಳಿ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಪುಷ್ಪಾ ನಾಯ್ಕ, ತಾಲೂಕಾಧ್ಯಕ್ಷ ಬೆನಿತ್‌ ಸಿದ್ದಿ, ಜಿಲ್ಲಾ ಕಾರ್ಯಾಧ್ಯಕ್ಷ ಮುನಾಫ್‌ ಮಿರ್ಜಾನಕರ್‌ ಜತೆಗಿದ್ದರು.

ನಂತರ ಮಾತನಾಡಿದ ಅವರು, ಇಂದಿನ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿರುವುದು ಕ್ಷೇತ್ರದಲ್ಲಿ ಇನ್ನೂ ಜೆಡಿಎಸ್‌ ಪರ ಒಲವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈಗಲೂ ಸಹ ಗ್ರಾಮೀಣ ಭಾಗಗಳಲ್ಲಿ ಕುಮಾರಸ್ವಾಮಿಯವರ ಅಭಿವೃದ್ಧಿ ಪರ ಕಾರ್ಯಗಳು ಜನಮಾನಸದಲ್ಲಿ ಉಳಿದಿದೆ. ಯಲ್ಲಾಪುರ ಮುಂಡಗೋಡ ಕ್ಷೇತ್ರವನ್ನು ಈ ಬಾರಿಯ ಮಿಷನ್‌ 123ಯ ಭಾಗವಾಗಿ ಪರಿಗಣಿಸಲಾಗಿದ್ದು, ಗೆಲ್ಲಬಹುದಾದ ಕ್ಷೇತ್ರವಾಗಿ ವರಿಷ್ಠರು ಪರಿಗಣಿಸಿದ್ದಾರೆ. ಹಾಗಾಗಿ ಕಾರ್ಯಕರ್ತರೆಲ್ಲರೂ ಪಕ್ಷದ ಗೆಲುವಿಗಾಗಿ ಪರಿಶ್ರಮದಿಂದ ದುಡಿಯುತ್ತೇವೆ. ಈ ಬಾರಿ ಹಿಂದೆಂದಿಗಿಂತ ಹೆಚ್ಚಿನ ಚೈತನ್ಯವೂ ಸಹ ನಮ್ಮೆಲ್ಲರಲ್ಲಿದೆ. ಈ ಬಾರಿ ಪ್ರಾದೇಶಿಕ ಪಕ್ಷದ ಗೆಲುವು ನಿಶ್ಚಿತ ಎಂದರು.

ಇದನ್ನೂ ಓದಿ: Karnataka Elections : ಲಿಂಗಾಯತ ಡ್ಯಾಮೇಜ್‌ ಕಂಟ್ರೋಲ್‌ಗಾಗಿ ಅಖಾಡಕ್ಕಿಳಿದ ಬಿಎಸ್‌ವೈ, ಮಠಾಧೀಶರನ್ನು ಭೇಟಿ ಮಾಡಿದ ನಡ್ಡಾ

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮೋಹಿನಿ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಜಿ. ಕೆ. ಪಟಗಾರ, ಹಿಂದುಳಿದ ವರ್ಗದ ಅಧ್ಯಕ್ಷ ರಮೇಶ ನಾಯ್ಕ ಕರ್ಕಿ, ಕ್ಷೇತ್ರಾಧ್ಯಕ್ಷ ಮುತ್ತಣ್ಣ ಸಂಗೂರಮಠ, ಬನವಾಸಿ ಬ್ಲಾಕ್ ಅಧ್ಯಕ್ಷ ಮಹಾದೇವ ಈಳಿಗೇರ್, ಗೌರವಾಧ್ಯಕ್ಷ ಸೋಮೇಶ್ವರ ಗೌಡ ಉಂಚಳ್ಳಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ಪ ಚೆನ್ನಯ್ಯ, ಮಹಿಳಾ ಜಿಲ್ಲಾ ಕಾರ್ಯದರ್ಶಿ ಮೇರಿ ರೆಬೆಲ್ಲೊ, ಬ್ಲಾಕ್ ಕಾರ್ಯದರ್ಶಿ ದೇವರಾಜ ನಾಯ್ಕ, ಯುವಾಧ್ಯಕ್ಷ ವಿಜಯ ಕಲ್ಕರ್ಡಿ ಮುಂತಾದವರಿದ್ದರು.

Exit mobile version