ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರ ವಿರುದ್ಧ ಕೀಳು ಅಭಿರುಚಿಯ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ನಗರದ ವಿವಿಧೆಡೆ ಅಂಟಿಸಿದ ಕಾಂಗ್ರೆಸ್ ಪಕ್ಷದ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ಜೆಡಿಎಸ್ ಪಕ್ಷದಿಂದ ಬುಧವಾರ ದೂರು ನೀಡಲಾಯಿತು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಹಾಗೂ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ ಅವರಿಗೆ ದೂರು ನೀಡಿದರು.
ಪೋಸ್ಟರ್ ಅಂಟಿಸುವಲ್ಲಿ ಪ್ರಮುಖ ಪಾತ್ರಧಾರಿಯಾದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ನೀಡಲಾಗಿದ್ದು, ಜತೆಗೆ ಡಿ.ಎಸ್.ಕಾರ್ತಿಕ್ ಗೌಡ, ಎಚ್.ಡಿ.ದರ್ಶನ್ ಗೌಡ, ಅರ್ಜುನ್ ಡಿ.ಗೌಡ, ಸಂತೋಷ್ ಎಂಬುವವರ ವಿರುದ್ಧ ಆಯುಕ್ತರಿಗೆ ದೂರು, ನೀಡಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ಎಂದು ಜೆಡಿಎಸ್ ಮುಖಂಡರು ಒತ್ತಾಯಿಸಿದರು.
ಇದನ್ನೂ ಓದಿ | Caste Census : ಜಾತಿ ಗಣತಿ ವರದಿ ಮೂಲ ಪ್ರತಿ ಕಾಣೆ ಬಗ್ಗೆ ಗೊತ್ತಿಲ್ಲವೆಂದ ಸಿಎಂ ಸಿದ್ದರಾಮಯ್ಯ!
ಎಸ್.ಮನೋಹರ್ ಹಿಂದಿನಿಂದಲೂ ಇದೇ ರೀತಿಯಲ್ಲಿ ಕೀಳು ಅಭಿರುಚಿಯ ಪೋಸ್ಟರ್‌ಗಳನ್ನು ಅಂಟಿಸಿ ತೇಜೋವಧೆ ಮಾಡುವ ಚಾಳಿಯುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಇಂತಹ ಅನೇಕ ಆರೋಪಗಳು ಇವೆ ಎಂದು ಮುಖಂಡರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿಕೊಟ್ಟರು. ಮನವಿ ಸ್ವೀಕರಿಸಿದ ಆಯುಕ್ತರು, ಸೂಕ್ತ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ಮನವಿ ಪತ್ರ ನೀಡಿದ ನಂತರ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಮೇಶ್ ಗೌಡ ಅವರು, ಮನೋಹರ್ ಒಬ್ಬ ಕೊಳಕು ಮನಸ್ಥಿತಿಯ ವ್ಯಕ್ತಿ. ಸಮಾಜಕ್ಕೆ ಇಂತಹವರು ದೊಡ್ಡ ಬೆದರಿಕೆ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪೊಲೀಸ್ ಆಯುಕ್ತರಿಗೆ ಮನವಿ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್ ಕಚೇರಿ, ಮತ್ತಿತರ ಭಾಗದಲ್ಲಿ ಕುಮಾರಸ್ವಾಮಿ ಅವರ ಬಗ್ಗೆ ಕೆಟ್ಟ ಪೋಸ್ಟರ್‌ಗಳನ್ನು ಅಂಟಿಸಿದ್ದು ಆತನೇ. ಹೀಗಾಗಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ಸುನಿಲ್ ಕನಗೋಳ್ ಎಂಬಾತ ಸಿಎಂ ವಿರುದ್ಧ ಪೋಸ್ಟರ್ ಅಂಟಿಸಿದ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಆತನ ವಿರುದ್ಧವೂ ಕ್ರಮ ಆಗಬೇಕು ಎಂದು ಅವರು ಆಗ್ರಹಿಸಿದರು.
ಪೊಲೀಸರು ಈ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಎಲ್ಲಾ ಸಚಿವರ ಕಚೇರಿ ಮುಂದೆ ನಾವು ಕೂಡ ಪೋಸ್ಟರ್‌ಗಳನ್ನು ಅಂಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ ಅವರು, ಕಾಂಗ್ರೆಸ್ ಮತ್ತೆ ಇದೇ ಚಾಳಿ ಮುಂದುವರಿಸಿದರೆ ನಮ್ಮ ಪಕ್ಷ ಕೂಡ ಇದನ್ನೇ ಮಾಡುತ್ತದೆ ಎಂದರು.
ಹಿಂದಿರುವ ವ್ಯಕ್ತಿ ಯಾರು?
ಬೆಂಗಳೂರಿನಲ್ಲಿ ಈ ಹಿಂದೆ ಗೋಡೆಗಳ ಮೇಲೆ ಕಾಣಿಸಿಕೊಂಡ ಕೀಳು ಅಭಿರುಚಿಯ ಪೋಸ್ಟರ್‌ಗಳ ಹಿಂದೆ ಕಾಂಗ್ರೆಸ್ ಪಕ್ಷದ ಪ್ರಭಾವಿಯೊಬ್ಬರ ಮೆದುಳು ಕೆಲಸ ಮಾಡಿದೆ. ಮೊದಲು ಆ ಕಾಣದ ಕೈ ಯಾವುದು ಎಂದು ಪತ್ತೆ ಹಚ್ಚಿ ಕ್ರಮ ಜರುಗಿಸಿ ಎಂದು ಜೆಡಿಎಸ್ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಒತ್ತಾಯ ಮಾಡಿದರು.
ಇದನ್ನೂ ಓದಿ | Caste Census : ಡಿಸೆಂಬರ್ ಒಳಗೆ ಜಾತಿ ಗಣತಿ ವರದಿ ಸಲ್ಲಿಕೆ; ರಿಪೋರ್ಟ್ ಮಿಸ್ ಆಗಿಲ್ಲವೆಂದ ಜಯಪ್ರಕಾಶ್ ಹೆಗ್ಡೆ
ಗೋಡೆಗಳ ಮೇಲೆ ಯಾರೋ ಕಿಡಿಗೇಡಿಗಳು ಬಂದು ಪೋಸ್ಟರ್ ಅಂಟಿಸಿದರು ಎಂದು ಲಘುವಾಗಿ ಪರಿಗಣಿಸಬೇಡಿ. ಇದು ಬಹಳ ಸೂಕ್ಷ್ಮ ವಿಷಯ. ಇದರ ವಿರುದ್ಧ ಸೂಕ್ತ ಕ್ರಮ ವಹಿಸದಿದ್ದರೆ ಪೊಲೀಸರೇ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ