Site icon Vistara News

HD Devegowda: ಜೆಡಿಎಸ್‌ ಆತ್ಮಾವಲೋಕನ ಸಭೆ; ಮತ್ತೆ ಪುಟಿದೇಳುವ ಪ್ರತಿಜ್ಞೆ; ಹೋರಾಟ ಗ್ಯಾರಂಟಿ ಅಂದ್ರು ಎಚ್‌ಡಿಕೆ

JDS Meeting in palace ground

ಬೆಂಗಳೂರು: ಈ ಬಾರಿ ನಡೆದ ಚುನಾವಣೆಯಲ್ಲಿ ಪಂಚರತ್ನ ಯಾತ್ರೆ ಹೊರತಾಗಿಯೂ ಜೆಡಿಎಸ್‌ (JDS) ನಿರೀಕ್ಷಿತ ಸಾಧನೆ ಮಾಡದಿರುವ ಬಗ್ಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (HD Devegowda) ಅವರ ನೇತೃತ್ವದಲ್ಲಿ ಪಕ್ಷದ ಆತ್ಮಾವಲೋಕನ ಸಭೆ ನಡೆಸಲಾಯಿತು. ಈ ವೇಳೆ ಪಕ್ಷ ಮತ್ತೆ ಪುಟಿದೇಳುತ್ತದೆ, ಪುಟಿದೇಳಲೇಬೇಕು ಎಂದು ವರಿಷ್ಠರು ಹೇಳಿದ್ದಾರೆ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡುವುದು ಬೇಡ ಎಂಬ ಸಂದೇಶವನ್ನು ರವಾನೆ ಮಾಡಲಾಯಿತು. ಜತೆಗೆ ಕಾಂಗ್ರೆಸ್‌ ಗ್ಯಾರಂಟಿಯನ್ನು ಈಡೇರಿಸದಿದ್ದರೆ ಪ್ರತಿಭಟನೆ ಗ್ಯಾರಂಟಿ ಎಂದು ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಗುಡುಗಿದ್ದಾರೆ.

ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮುಖಂಡರಾದ ಸಿ.ಎಂ.ಇಬ್ರಾಹಿಂ, ವಿಧಾನ ಪರಿಷತ್‌ ಸದಸ್ಯರಾದ ಟಿ.ಎ. ಶರವಣ ಸೇರಿದಂತೆ ಇನ್ನಿತರ ಹಿರಿಯ ಮುಖಂಡರು, ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ತಾಲೂಕು, ಜಿಲ್ಲಾ ಘಟಕಗಳ ಅಧ್ಯಕ್ಷರು, ಮಾಜಿ ಶಾಸಕರು ಸಭೆಯಲ್ಲಿ ಹಾಜರಿದ್ದರು.

ಜೆಡಿಎಸ್‌ ಆತ್ಮಾವಲೋಕನ ಸಭೆಯನ್ನು ಉದ್ಘಾಟಿಸಲಾಯಿತು.

ಈ ವೇಳೆ ಪಕ್ಷದ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಾಯಿತು. ಜತೆಗೆ ಈಗ ಸಾಲು ಸಾಲು ಚುನಾವಣೆಗಳು ಬರಲಿದ್ದು, ಅದರ ಬಗ್ಗೆ ಯಾವ ರೀತಿ ಸಿದ್ಧತೆಗಳನ್ನು ಮಾಡಬೇಕು? ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗಾಗಿ ಕೈಗೊಳ್ಳಬೇಕಾದ ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಲಾಯಿತು.

ಇದನ್ನೂ ಓದಿ: Inspiring Story : ಬಲಗೈ ಇಲ್ಲದಿದ್ದರೂ ಎಡಗೈನಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್‌ ಆದ ಅಖಿಲಾ!

ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಮಾತನಾಡಿದರು.

ಪಕ್ಷವನ್ನು ಉಳಿಸುತ್ತೇನೆ: ದೇವೇಗೌಡ

ಪಕ್ಷಕ್ಕಾಗಿ ನನ್ನ ಜೀವವನ್ನು ಸವೆಸಿದ್ದೇನೆ. ನಾನು ಬದುಕಿರುವಷ್ಟು ಕಾಲವೂ ಪಕ್ಷಕ್ಕಾಗಿಯೇ ಬದುಕುತ್ತೇನೆ. ನನ್ನ ಕೊನೇ ಉಸಿರು ಇರುವ ತನಕ ನಾನು ಪಕ್ಷಕ್ಕೇ ಮೀಸಲು ಎಂದು ಎಚ್.ಡಿ. ದೇವೇಗೌಡ ಅವರು ಭಾವುಕರಾಗಿ ನುಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತಿದೆ ಎಂಬುದಕ್ಕೆ ನನಗೆ ಬಹಳ ನೋವಿದೆ. ಅದೇ ನೋವಿನಿಂದ ಕಾಲ ದೂಡಲು ಸಾಧ್ಯವೇ? ಪುಟಿದೆದ್ದು ಪಕ್ಷ ಕಟ್ಟಬೇಕು, ಅಧಿಕಾರಕ್ಕೆ ಬರಲು ಶ್ರಮಿಸಬೇಕು. ಸೋತಿದ್ದಕ್ಕೆ ಪ್ರಾಮಾಣಿಕವಾಗಿ ಕಾರಣಗಳನ್ನು ಹುಡುಕೋಣ. ಅವುಗಳಿಗೆ ಪರಿಹಾರಗಳನ್ನು ಕಂಡು ಹಿಡಿಯೋಣ. 1989ರಲ್ಲಿ ನಮ್ಮ ಪಕ್ಷ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. ಅದಾದ ಮೇಲೆ ಐದು ವರ್ಷಗಳ ನಂತರ ನಮ್ಮ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ನಾನೇ ಮುಖ್ಯಮಂತ್ರಿ ಆದೆ. ಆಮೇಲೆ ಪ್ರಧಾನಿಯೂ ಆದೆ. ಜನರ ಆಶೀರ್ವಾದದಿಂದ ಅದು ಸಾಧ್ಯವಾಯಿತು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಹೇಳಿದರು.

ಸೋತಾಗ ನಿರಾಸೆ, ನೋವು ಸಹಜ. ನಾನು ಈ ಎಲ್ಲ ಹಂತಗಳನ್ನು ದಾಟಿಕೊಂಡು ಮುಂದೆ ಬಂದಿದ್ದೇನೆ. ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಈ ಪಕ್ಷವನ್ನು ಉಳಿಸುವ ಕೆಲಸ ನಾನು ಮಾಡಿಯೇ ಮಾಡುತ್ತೇನೆ ಎಂದು ಎಚ್.ಡಿ. ದೇವೇಗೌಡ ಅವರು ಹೇಳಿದರು.

ಜಿಪಂ, ತಾಪಂ ಚುನಾವಣೆಗೆ ಸಜ್ಜಾಗಿ: ಎಚ್‌ಡಿಕೆ

ಕಾಂಗ್ರೆಸ್ ಕೊಟ್ಟಿರುವ ಗ್ಯಾರಂಟಿಯನ್ನು ಈಡೇರಿಸಲ್ಲ. ಇದನ್ನು ಹಳ್ಳಿ ಹಳ್ಳಿಗೂ ತೆಗೆದುಕೊಂಡು ಹೋಗಬೇಕು. ಹೇಳುವಾಗ ಷರತ್ತು ಹಾಕಿರಲಿಲ್ಲ, ಈಗ ಷರತ್ತು ಅಂತ ಹೇಳುತ್ತಿದ್ದಾರೆ. ಪ್ರತಿ ತಾಲೂಕಿನಲ್ಲಿ ಈ ಬಗ್ಗೆ ಪ್ರತಿಭಟನೆ ಆಗಬೇಕು. ಪಕ್ಷ ಸಂಘಟನೆಗೆ ಇದು ಒಳ್ಳೆಯ ಅವಕಾಶ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಇದಕ್ಕೆ ಎಲ್ಲರೂ ಸಜ್ಜಾಗಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು.

ಗ್ಯಾರಂಟಿ ಜಾರಿಯಾಗದಿದ್ದರೆ ಅಧಿವೇಶನದಲ್ಲಿ ಅಹೋರಾತ್ರಿ ಧರಣಿ

ಎರಡು, ಮೂರು ಕ್ಯಾಬಿನೆಟ್ ಸಭೆ ಒಳಗೆ ಎಲ್ಲ ಗ್ಯಾರಂಟಿ ಜಾರಿ ಆಗಬೇಕು. ಇಲ್ಲದಿದ್ದರೆ ಮುಂದಿನ ಅಧಿವೇಶನದಲ್ಲಿ ಅಹೋರಾತ್ರಿ ಧರಣಿ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸಹಿ ಹಾಕಿ ಕೊಟ್ಟಿದ್ದಾರೆ. ನಾವು ಇದನ್ನು ಬಳಸಿಕೊಳ್ಳಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಹೇಳುವ ಮೂಲಕ ಸರ್ಕಾರಕ್ಕೆ ಗ್ಯಾರಂಟಿ ಜಾರಿ ಮಾಡಲು ಡೆಡ್‌ಲೈನ್ ಕೊಟ್ಟರು.

ಇದನ್ನೂ ಓದಿ: H.D. Kumaraswamy: ಅತ್ತೂ ಕರೆದು ಟಿಕೆಟ್‌ ತೊಗೊತೀರ; ಆಮೇಲೆ ಮ್ಯಾಚ್‌ ಫಿಕ್ಸ್‌ ಮಾಡ್ಕೊತೀರ: ಪಕ್ಷದ ಅಭ್ಯರ್ಥಿಗಳ ಬಗ್ಗೆ ಕುಮಾರಸ್ವಾಮಿ ಆಕ್ರೋಶ

15 ದಿನದಲ್ಲಿ ಜೆಡಿಎಸ್ ಜಿಲ್ಲಾ ಘಟಕ ಪುನರ್ ಸಂಘಟನೆ

ಹದಿನೈದು ದಿನಗಳ ಒಳಗೆ ಜೆಡಿಎಸ್ ಜಿಲ್ಲಾ ಘಟಕವನ್ನು ಪುನರ್ ಸಂಘಟನೆ ಮಾಡಲಾಗುವುದು. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ, ಹಾಸನ, ತುಮಕೂರು, ಕೋಲಾರ ಕ್ಷೇತ್ರಗಳಲ್ಲಿ ನಾವು ಗೆಲ್ಲಬಹುದು. ಈ ಕ್ಷೇತ್ರಗಳಲ್ಲಿ ಯಾರ ಜತೆ ಮೈತ್ರಿ ಮಾಡಿಕೊಳ್ಳದೆ ನಾವು ಗೆಲ್ಲಬಹುದು. ಇಂದಿನಿಂದಲೇ ನಾವು ಸಂಘಟನೆಯನ್ನು ಚುರುಕು ಮಾಡೋಣ ಎಂದು ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು.

Exit mobile version