ಬೆಂಗಳೂರು: ಸೆಪ್ಟೆಂಬರ್ 12 ರಂದು ಬಸವನಗುಡಿಯ ನ್ಯಾಷನಲ್ ಮೈದಾನದಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಿದ್ದ ಜೆಡಿಎಸ್‌ನ ಜನತಾ ಮಿತ್ರ ಸಮಾರೋಪ ಸಮಾವೇಶವನ್ನು ಮುಂದೂಡಲಾಗಿದೆ.
ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿರುವುದು ಮತ್ತು ರಾಜ್ಯದ ಜನತೆ ಮಳೆ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಸಮಾವೇಶವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಇದರ ಬದಲು ಅಂದೇ ಬೆಳಗ್ಗೆ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ಆಯೋಜಿಸಲಾಗಿದೆ.
ಜನತಾ ಮಿತ್ರ ಕಾರ್ಯಕ್ರಮದ ಸಮಾರೋಪ ಹಿಂದೆಯೇ ನಡೆಯಬೇಕಾಗಿತ್ತು. ಆದರೆ, ಕುಮಾರಸ್ವಾಮಿ ಅನಾರೋಗ್ಯದ ಕಾರಣದಿಂದಾಗಿ ಒಂದು ಬಾರಿ ರದ್ದಾಗಿತ್ತು. ಆಗ ಕುಮಾರಸ್ವಾಮಿ ಅವರಿಗೆ ಕೊರೊನಾ ಸಮಸ್ಯೆ ಕಾಡಿತ್ತು. ಇದೀಗ ಎರಡನೇ ಬಾರಿ ಮುಂದೂಡಲ್ಪಟ್ಟಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಿಗದಿ
ಸಮಾರೋಪ ಸಮಾರಂಭ ನಡೆಯಬೇಕಾಗಿದ್ದ ದಿನ ಶಾಸಕಾಂಗ ಪಕ್ಷ ಸಭೆಯನ್ನು ಕರೆದಿದ್ದಾರೆ ಎಚ್.ಡಿ. ಕುಮಾರಸ್ವಾಮಿ ಅವರು. ಸೆ.೧೨ರಂದೇ ರಾಜ್ಯ ವಿಧಾನಸಭೆ ಅಧಿವೇಶನ ಕೂಡಾ ಆರಂಭವಾಗಲಿದೆ. ಹೀಗಾಗಿ ಈ ಹಿನ್ನೆಲೆಯನ್ನು ಇಟ್ಟುಕೊಂಡು ಶಾಸಕಾಂಗ ಪಕ್ಷ ಸಭೆ ಆಯೋಜನೆಗೊಂಡಿದೆ.
ಸೋಮವಾರ ಬೆಳಿಗ್ಗೆ 9.30 ಕ್ಕೆ ವಿಧಾನಸೌಧದ ಜೆಡಿಎಸ್ ಕಚೇರಿಯಲ್ಲಿ ಶಾಸಕಾಂಗ ಪಕ್ಷ ಸಭೆ ನಡೆಯಲಿದೆ. ಅಧಿವೇಶನದಲ್ಲಿ ಎತ್ತಬೇಕಾಗಿರುವ ವಿಚಾರಗಳ ಬಗ್ಗೆ ಇಲ್ಲಿ ಚರ್ಚೆ ನಡೆಯಲಿದೆ.
ಅಧಿವೇಶನ ಕರೆಯಿರಿ, ರಾಜ್ಯದ ಸಮಸ್ಯೆ ಗಳ ಬಗ್ಗೆ ಚರ್ಚೆ ಮಾಡಬೇಕಿದೆ ಎಂದು ಎಚ್‌ಡಿಕೆ ಆಗ್ರಹಿಸಿದ್ದರು. ಈ ವಿಚಾರದಲ್ಲಿ ಎಚ್ ಡಿಕೆ ಮತ್ತು ಅಶ್ವಥ್ ನಾರಾಯಣ ನಡುವೆ ಮಾತಿನ ಚಕಮಕಿ ಕೂಡಾ ನಡೆದಿತ್ತು. ಹೀಗಾಗಿ ಜೆಡಿಎಸ್ ಈ ಅಧಿವೇಶನವನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗಿದೆ. ಪ್ರಮುಖವಾಗಿ ಬೆಂಗಳೂರಿನ ಮಳೆ ವಿಚಾರ, ಮಂಗಳೂರಿನ ಕೋಮು ಗಲಭೆ ವಿಚಾರ, ೪೦ ಪರ್ಸೆಂಟ್ ಕಮಿಷನ್ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ನಿರ್ಧರಿಸುವ ಸಾಧ್ಯತೆ ಕಂಡುಬಂದಿದೆ.
ಇದನ್ನೂ ಓದಿ| ದಿಲ್ಲಿಯಲ್ಲಿ ಕುಮಾರಸ್ವಾಮಿ-ನಿತೀಶ್ ಕುಮಾರ್ ಭೇಟಿ: ಮತ್ತೆ ಚಿಗುರಿತು ಜನತಾ ಪರಿವಾರ ಒಗ್ಗೂಡಿಸುವ ಕನಸು