ದೇವದುರ್ಗ: ರಾಯಚೂರು ಜಿಲ್ಲೆ ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ (Karemma G Nayak) ಅವರ ಪುತ್ರ ಹಾಗೂ ಅವರ ಬೆಂಬಲಿಗರು ಪೊಲೀಸ್ ಪೇದೆ (Police Constable) ಮೇಲೆ ಹಲ್ಲೆ ನಡೆಸಿದ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾದ ಬೆನ್ನಲ್ಲೇ, ಶಾಸಕಿಯ ಕಡೆಯವರಿಂದ ರಕ್ಷಣೆ ಕೋರಿ ದೇವದುರ್ಗ ಪೊಲೀಸ್ ಠಾಣೆ ಹಾಗೂ ಸಂಚಾರ ಠಾಣೆ ಸಿಬ್ಬಂದಿಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ.
ದೇವದುರ್ಗದ ಸುಮಾರು 59 ಪೊಲೀಸ್ ಸಿಬ್ಬಂದಿಯು ಪ್ರಮುಖ ಐದು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಎಸ್‌ಪಿಗೆ ಪತ್ರ ಬರೆದಿದ್ದಾರೆ. “ಜೆಡಿಎಸ್ ಕಾರ್ಯಕರ್ತರಿಂದ ನಿತ್ಯವೂ ಪೊಲೀಸ್ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ. ಶಾಸಕಿಯ ಮನೆ ಹಾಗೂ ಪೊಲೀಸ್ ಕಾಲೋನಿಗೆ ಹೊಂದಿಕೊಂಡಂತಿದ್ದು, ಜೆಡಿಎಸ್ ಕಾರ್ಯಕರ್ತರು ಪೊಲೀಸರಿಗೆ ಕಿರುಕುಳ ನೀಡುತ್ತಿದ್ದಾರೆ. ಇನ್ನು, ಹೆಡ್ ಕಾನ್‌ಸ್ಟೆಬಲ್ ಹನುಮಂತ್ರಾಯ ಅವರ ಮೇಲೆ ಶಾಸಕಿಯ ಆಪ್ತ ಸಹಾಯಕ ಸೇರಿ ಹಲವರು ಹಲ್ಲೆ ನಡೆಸಿದ್ದಾರೆ. ಇದರಿಂದ ಪೊಲೀಸರು ಹಾಗೂ ಅವರ ಕುಟುಂಬಗಳಿಗೆ ಭದ್ರತೆ ಇಲ್ಲದಂತಾಗಿದೆ. ದಯಮಾಡಿ ಪೊಲೀಸ್ ಕುಟುಂಬಗಳಿಗೆ ರಕ್ಷಣೆ ಒದಗಿಸಿ” ಎಂದು ಪೊಲೀಸ್ ಸಿಬ್ಬಂದಿ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದವರು ಎಷ್ಟೇ ಪ್ರಭಾವಿಗಳಾದರೂ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು. ದೇವದುರ್ಗದಲ್ಲಿ ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಅಡ್ಡಿಯಾಗಿರುವ ರಾಜಕೀಯ ಒತ್ತಡವನ್ನು ತಡೆಯಬೇಕು. ಮೂವರು ಪೊಲೀಸರ ಮೇಲೆ ದಾಖಲಾದ ಮೂರು ಸುಳ್ಳು ಕೇಸ್‌ಗಳನ್ನು ರದ್ದುಗೊಳಿಸಬೇಕು. ಆ ಮೂಲಕ ಪೊಲೀಸರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕು” ಎಂದು ಕೋರಿ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಮರಳು ದಂಧೆ ತಡೆದ ಪೇದೆ ಮೇಲೆ ಹಲ್ಲೆ; ಜೆಡಿಎಸ್ ಶಾಸಕಿಯ ಪುತ್ರನ ವಿರುದ್ಧ ಆರೋಪ
ಏನಿದು ಪ್ರಕರಣ?
ಕಳೆದ ಭಾನುವಾರ (ಫೆಬ್ರವರಿ 11) ಮಧ್ಯಾಹ್ನ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಆರೋಪದಲ್ಲಿ 2 ಟ್ರ್ಯಾಕ್ಟರ್ ಮರಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಆದರೆ, ಆ ಟ್ರ್ಯಾಕ್ಟರ್ ಶಾಸಕಿ ಪುತ್ರನಿಗೆ ಸಂಬಂಧಿಸಿದ್ದಾಗಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಪೊಲೀಸ್ ಪೇದೆ ಹನುಮಂತ್ರಾಯ ಅವರನ್ನು ಕರೆಸಿ, ಅವರ ಮೇಲೆ ಶಾಸಕಿ ಪುತ್ರ ಸಂತೋಷ ಮತ್ತು ಆಪ್ತ ಸಹಾಯಕ ಇಲಿಯಾಸ್ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗೆಯೇ, ಪೊಲೀಸ್ ಪೇದೆಗಳಾದ ಮಹೇಶ್ ಸೇರಿ ಮೂವರ ಮೇಲೆ ಕೇಸ್ ದಾಖಲಿಸಲಾಗಿದೆ. ಹಲ್ಲೆ ವಿಡಿಯೊ ಕೂಡ ವೈರಲ್ ಆಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ