Site icon Vistara News

JDS Pancharatna | ಕುತಂತ್ರ ರಾಜಕಾರಣದಿಂದ ಎಲೆಕ್ಷನ್‌ ಗೆಲ್ಲಲು ಬಿಜೆಪಿ ಯತ್ನ: ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ

JDS Pancharatna

ಕೋಲಾರ: ಕೆಲವು ಕ್ಷೇತ್ರಗಳಲ್ಲಿ ಉದ್ದೇಶಪೂರ್ವಕವಾಗಿ 39-40 ಸಾವಿರ ಮಂದಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಇದೊಂದು ವ್ಯವಸ್ಥಿತವಾದ ಪಿತೂರಿಯಾಗಿದೆ. ಮತದಾರರ ಪಟ್ಟಿ ಅಕ್ರಮ ಎಸಗಿರುವ ಸರ್ಕಾರದ ವಿರುದ್ಧ ಕೇಂದ್ರ ಚುನಾವಣಾ ಆಯೋಗ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನಾಯಕರಹಳ್ಳಿ ಗ್ರಾಮದಲ್ಲಿ ಶನಿವಾರ ಜೆಡಿಎಸ್‌ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿ, ಮತದಾರರ ದತ್ತಾಂಶ ಕಳವು ಮಾಡಿರುವ ಚಿಲುಮೆ ಸಂಸ್ಥೆ ಕಚೇರಿಯ ಮೇಲೆ ಪೊಲೀಸರ ದಾಳಿ ವೇಳೆ, ವಿವಿಧ ಪತ್ರ, ಐಡಿ ಕಾರ್ಡ್‌, ಬ್ಲಾಂಕ್ ಚೆಕ್‌ಗಳು ಸೇರಿ ಹಲವು ದಾಖಲೆಗಳು ಸಿಕ್ಕಿವೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಹೆಚ್ಚಿನ ಮತಗಗಳು ಹೊಂದಿರುವ ಕಡೆ ಸಾವಿರಾರು ಮಂದಿ ಹೆಸರುಗಳನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ | JDS Pancharatna | ಇತಿಹಾಸ ಮರುಕಳಿಸಲಿದೆ, ಕುಮಾರಣ್ಣ ಮತ್ತೆ ಸಿಎಂ ಆಗ್ತಾರೆ ಎಂದ ನಿಖಿಲ್ ಕುಮಾರಸ್ವಾಮಿ

ಬಿಜೆಪಿ ಕುತಂತ್ರ ರಾಜಕಾರಣದ ಮೂಲಕ ಸಮಾಜ, ದೇಶ ಒಡೆಯುವ ಕೆಲಸ ಮಾಡುತ್ತಿದೆ. ಮತದಾರ ಪಟ್ಟಿ ದುರ್ಬಳಕೆ ಮಾಡಿಕೊಂಡು ಚುನಾವಣೆ ಗೆಲ್ಲಲು ಬಿಜೆಪಿ ‌ಸರ್ಕಾರ ಯತ್ನಿಸುತ್ತಿದೆ. ಬಿಜೆಪಿ ‌ಸರ್ಕಾರದಲ್ಲಿ ತನಿಖೆ‌ ಮಾಡಿದರೆ ಏನೂ‌ ಪ್ರಯೋಜನವಿಲ್ಲ. ಭ್ರಷ್ಟ ಮಂತ್ರಿಗಳನ್ನು ಇಟ್ಟುಕೊಂಡು ಯಾವ ರೀತಿ ತನಿಖೆ ನಡೆಸುತ್ತೀರಿ ಎಂದು ಪ್ರಶ್ನಿಸಿದ ಅವರು, ನಿಮ್ಮ ಅಕ್ರಮ, ಹಗರಣಗಳ ತನಿಖೆ ಮಾಡಿಸಿ ಶಿಕ್ಷೆ ನೀಡುವುದರಲ್ಲಿ ರಾಜ್ಯ ಸರ್ಕಾರ ಧೈರ್ಯ ತೋರಿಸಬೇಕು, ಭ್ರಷ್ಟ ಮಂತ್ರಿಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಬಂಗಾರಪೇಟೆಯಲ್ಲಿ ಪಂಚರತ್ನ ರಥಯಾತ್ರೆ ಅದ್ಧೂರಿ ಸ್ವಾಗತ
ಬಂಗಾರಪೇಟೆ ನಗರದಲ್ಲಿ ಪಂಚರತ್ನ ಯಾತ್ರೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಪಟ್ಟಣದಲ್ಲಿ ಕಾರ್ಯಕರ್ತರು ಅದ್ಧೂರಿಯಾಗಿ‌ ಕ್ರೇನ್‌ ಮೂಲಕ 300 ಕೆಜಿ ಬೃಹತ್ ಸೇಬಿನ‌ ಹಾರ ಹಾಕಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು. ಬಳಿಕ ಕೆಂಪೇಗೌಡ ಪ್ರತಿಮೆಗೆ ಮಾಜಿ ಸಿಎಂ ಮಾಲಾರ್ಪಣೆ ಮಾಡಿದರು. ನಂತರ ಕೆಂಪೇಗೌಡ ರಸ್ತೆ ಮುಖಾಂತರ ರೋಡ್ ಶೋ ನಡೆಸಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕಿನ ಕಾಮಸಮುದ್ರ, ಬೂದಿಕೋಟೆ, ಸೂಲಿಕುಂಟೆ ಬಳಿಕ ಮಾಗೇರಿ ಗ್ರಾಮದಲ್ಲಿ ಕುಮಾರಸ್ವಾಮಿ ಅವರು ವಾಸ್ತವ್ಯ ಹೂಡಲಿದ್ದಾರೆ.

ಇದನ್ನೂ ಓದಿ | Karnataka Politics | ಕುಮಾರಸ್ವಾಮಿ ನಿತ್ಯ ನನ್ನ ಜತೆ ಸಂಪರ್ಕದಲ್ಲಿದ್ದಾರೆ, ನಾನು ಬಿಜೆಪಿ ಬಿಡಲ್ಲ: ರಮೇಶ್‌ ಜಾರಕಿಹೊಳಿ

Exit mobile version