ತುಮಕೂರು: ಕೊಡಿಗೇನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದಿರುವುದನ್ನು ಸಚಿವ ಡಾ.ಕೆ. ಸುಧಾಕರ್ ಟ್ವಿಟರ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಹಲವು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದು ಗೊತ್ತು. ಆದರೆ, ಕನಿಷ್ಠ ಪಕ್ಷ ವೈದ್ಯರನ್ನು ನೇಮಕ ಮಾಡಿರುವ ಆಸ್ಪತ್ರೆಗಳಲ್ಲಾದರೂ ಪ್ರಾಮಾಣಿಕವಾಗಿ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಸಚಿವರು ರಾಜ್ಯದ ಎಲ್ಲ ಡಿಎಚ್ಒಗಳ ಸಭೆ ಕರೆದು ಕಠಿಣ ಎಚ್ಚರಿಕೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (JDS Pancharatna) ಒತ್ತಾಯಿಸಿದರು.
ವೈದ್ಯರಿಲ್ಲದೆ ಮಗು ಸಾವು ಪ್ರಕರಣದ ಬಗ್ಗೆ ಕೊರಟಗೆರೆ ಕ್ಷೇತ್ರದಲ್ಲಿ ಶನಿವಾರ ನಡೆದ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಪ್ರತಿಕ್ರಿಯಿಸಿದ ಅವರು, ಇಂತಹ ಯಾವುದೋ ಪ್ರಕರಣ ನಡೆದಾಗ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಕ್ರಮ ಕೈಗೊಂಡರೆ ಉಪಯೋಗವಿಲ್ಲ. ಆಸ್ಪತ್ರೆ ಸಿಬ್ಬಂದಿಗೆ ಭಯ-ಭಕ್ತಿ ಇರಬೇಕು, ರೋಗಿಗಳು ಬಂದಾಗ ದೇವರ ತರಹ ಚಿಕಿತ್ಸೆ ನೀಡಬೇಕು, ಅದು ವೈದ್ಯರ ಕೆಲಸ. ಆಸ್ಪತ್ರೆಗಳಲ್ಲಿ ಸಮಸ್ಯೆಗಳು ಉದ್ಭವವಾದಾಗ ಅಮಾನತು ಮಾಡುತ್ತೇವೆ, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ವೈದ್ಯಕೀಯ ಸಿಬ್ಬಂದಿಗೆ ಸಚಿವರು ಸೂಚಿಸಬೇಕು ಎಂದು ಆಗ್ರಹಿಸಿದರು.
ಕೊರಟಗೆರೆ ಕ್ಷೇತ್ರದ ಜನತಾದಳದ ಭದ್ರಕೋಟೆಯಾಗಿದೆ. ಆದರೆ, ಕೆಲ ಕಾರಣಾಂತರಗಳಿಂದ ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲುಂಟಾಗಿದೆ, ಅದು ಕೊರಟಗೆರೆ ಮತದಾರರ ಸೋಲಲ್ಲ. ಅದು ಬೇರೆ ರೀತಿ ಇದೆ, ಅದರ ಹಿನ್ನೆಲೆ ಏನೆಂದು ನನಗೆ ಗೊತ್ತು. ಕಳೆದ ಬಾರಿಯ ಲೋಪ ಸರಿಪಡಿಸುವುದಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಸುಧಾಕರ್ ಲಾಲ್ ಅತ್ಯಂತ ಸಭ್ಯ, ಜನರ ಜತೆಗೆ ಬೆರೆತು ಕೆಲಸ ಮಾಡುವ ವ್ಯಕ್ತಿ. ಜನರ ಆಶೀರ್ವಾದದಿಂದ ಈ ಬಾರಿ ಅವರು ಗೆಲ್ಲುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ | Criminal politics | ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಈಗ ಕೆಪಿಸಿಸಿ ಅಧ್ಯಕ್ಷ: ಬಿಜೆಪಿ ಚಾರ್ಜ್‌ಶೀಟ್
ಡಾ.ಜಿ.ಪರಮೇಶ್ವರ್ ಸೋಲಿಗೆ ಜೆಡಿಎಸ್ ಕಾರಣವೇ?
ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಕೂಗು ಹೆಚ್ಚಿರುವ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಸಿಎಂ ಅನ್ನು ಯಾರು ಮಾಡುತ್ತಾರೆ, ಎಲ್ಲಿಂದ ಮಾಡುತ್ತಾರೆ? ಅವರು ಪಾರ್ಟಿ ಅಧ್ಯಕ್ಷರಿದ್ದಾಗಲೇ ಮಾಡಲಿಲ್ಲ. 2013 ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೊರಟಾಗ, ಅವರನ್ನು ಜೆಡಿಎಸ್‌ನವರು ಸೋಲಿಸಿದರಾ? ಕಾಂಗ್ರೆಸ್‌ನವರೇ ಸೋಲಿಸಿದರು ಎಂದು ಅವರೇ ಹೇಳಿಕೊಳ್ಳುತ್ತಾರೆ ಎಂದು ಕೊರಟಗೆರೆ ಶಾಸಕ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿರುದ್ಧ ಕಿಡಿಕಾರಿದರು.
ಸೈಕಲ್ ಕೊಡ್ತೀನಿ ಆದ್ರೆ ಚೆನ್ನಾಗಿ ಓದಬೇಕು
ನಮಗೆ ಶಾಲೆಯಲ್ಲಿ ಸೈಕಲ್ ಕೊಡುತ್ತಿಲ್ಲ ಎಂದು ಜೆಡಿಎಸ್‌ನ ಪಂಚರತ್ನ ಯಾತ್ರೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ವಿದ್ಯಾರ್ಥಿಯೊಬ್ಬ ದೂರು ನೀಡಿದ್ದು ಕಂಡುಬಂತು. ಬಾಲಕನ ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ, ಈ ಸರ್ಕಾರ ಸೈಕಲ್ ಕೊಡುವುದನ್ನು ನಿಲ್ಲಿಸಿದೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತೆ ಸೈಕಲ್ ಕೊಡುವುದಾಗಿ ಭರವಸೆ ನೀಡಿದರು. ಮುಂದುವರಿದು ಮಾತನಾಡಿ, ಸೈಕಲ್ ಕೊಡುತ್ತೇನೆ, ಆದರೆ ನೀನು ಚೆನ್ನಾಗಿ ಓದಬೇಕು ಎಂದು ಹೇಳಿದರು.
ಶಾಲೆಗೆ ಬಸ್ ಇಲ್ಲ, ಶಾಲೆ ಕಟ್ಟಡ ಸೋರುತ್ತದೆ
ಗೊಂದಿಹಳ್ಳಿ ಸರ್ಕಾರಿ ಶಾಲೆ ಮಕ್ಕಳ ಸಮಸ್ಯೆಗಳನ್ನು ಎಚ್‌ಡಿಕೆ ಆಲಿಸಿದ ವೇಳೆ, ಶಾಲೆಗೆ ಬಸ್ ಇಲ್ಲ, ಶಾಲೆ ಕಟ್ಟಡ ಸೋರುತ್ತದೆ ಎಂದು ಮಕ್ಕಳು ದೂರು ನೀಡಿದರು. ಇದಕ್ಕೆ ಮಾಜಿ ಸಿಎಂ ಪ್ರತಿಕ್ರಿಯಿಸಿ, ಶಾಲಾ ಕಟ್ಟಡ ಸರಿ ಮಾಡಿಕೊಡುವುದಾಗಿ ಭರವಸೆ ನೀಡಿ, ಬಸ್ ವ್ಯವಸ್ಥೆ ಮಾಡಲು ಸುಧಾಕರ್ ಲಾಲ್ ಅವರಿಗೆ ಸೂಚಿಸಿದರು. ಬಳಿಕ ವಿಕಲಚೇತನರೊಬ್ಬರ ಸಮಸ್ಯೆಯನ್ನು ಕುಮಾರಸ್ವಾಮಿ ಆಲಿಸಿದರು. ಈ ಸಂದರ್ಭದಲ್ಲಿ ನನಗೆ ಒಂದು ಕಾಲು ಇಲ್ಲ, ಕೃತಕ ಕಾಲಿನಲ್ಲಿ ಓಡಾಡುತ್ತಿದ್ದೇನೆ, ಒಂದು ಬೈಕ್ ಕೊಡಿಸಿ ಎಂದು ವಿಕಲಚೇತನ ವ್ಯಕ್ತಿಯೊಬ್ಬರು ಮನವಿ ಮಾಡಿದರು. ಇದಕ್ಕೆ ಎಚ್‌ಡಿಕೆ ಸ್ಪಂದಿಸಿ, ಏನೇ ಸಮಸ್ಯೆ ಇದ್ದರೂ ಕರೆ ಮಾಡು ಎಂದು ಫೋನ್ ನಂಬರ್ ಕೊಟ್ಟರು.
ಎಚ್‌ಡಿಕೆ ಮುಂದೆ ಕಣ್ಣೀರಿಟ್ಟ ವಿದ್ಯಾರ್ಥಿನಿ
ಟಿ.ಗೊಲ್ಲರಹಟ್ಟಿಯಿಂದ ಪುರವರ ಶಾಲೆಗೆ ಹೋಗಲು ದಿನಕ್ಕೆ 8 ಕಿ.ಮೀ ನಡೆಯಬೇಕು. ಬಸ್ ಇಲ್ಲ, ಹಳ್ಳದಲ್ಲಿ ಕಾಡಿನ ಮಧ್ಯೆ ನಡೆಯಬೇಕಿದ್ದು, ಕರಡಿಗಳ ದಾಳಿ ಭೀತಿಯಿದೆ. ಬೆಳಗ್ಗೆ 8 ಗಂಟೆಗೆ ಮನೆ ಬಿಡಬೇಕು. ಸಂಜೆ 6.30ಕ್ಕೆ ಮನೆಗೆ ಹೋಗಬೇಕು ಎಂದು ಟಿ ಗೊಲ್ಲರಹಟ್ಟಿಯ ಸವಿತಾ ಎಂಬ ವಿದ್ಯಾರ್ಥಿನಿ ಅಳಲು ತೋಡಿಕೊಂಡು ಕಣ್ಣೀರಿಟ್ಟಳು. ಅಧಿಕಾರಿಗಳ ಗಮನಕ್ಕೆ ತಂದು ಬಸ್ ಸೌಕರ್ಯ ಮಾಡುವುದಾಗಿ ಎಚ್‌ಡಿಕೆ ಭರವಸೆ ನೀಡಿದರು.
ಗೊಂದಿಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಎಚ್‌ಡಿಕೆ ಭೇಟಿ
ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡುವೆ ಗೊಂದಿಹಳ್ಳಿಯ 30 ಅಡಿ ಎತ್ತರದ ಏಕಶಿಲಾ ವಿಗ್ರಹ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಯಾತ್ರೆ ಸಾಗುತ್ತಿರುವ ದಾರಿಯುದ್ದಕ್ಕೂ ಜನರ ಸಮಸ್ಯೆಗಳನ್ನು ಆಲಿಸುತ್ತಾ ತೆರಳಿದರು. ಬಳಿಕ ತಗ್ಗಿಹಳ್ಳಿ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ, ಶ್ರೀ ರಮಾನಂದ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ಯಾತ್ರೆಗೆ ಅಡ್ಡಬಂದ ಗೂಡ್ಸ್ ವಾಹನ ಚಾಲಕ, ಕ್ಲೀನರ್ ಮೇಲೆ ಹಲ್ಲೆ
ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ಗೂಡ್ಸ್ ಗಾಡಿ ಚಾಲಕ ಮತ್ತು ಕ್ಲೀನರ್ ಮೇಲೆ ಹಲ್ಲೆ ಮಾಡಿ ಜೆಡಿಎಸ್ ಕಾರ್ಯಕರ್ತರು ದರ್ಪ ತೋರಿರುವುದು ಕಂಡುಬಂದಿದೆ. ಕೊರಟಗೆರೆ ಕ್ಷೇತ್ರದ ನಿಟ್ಟರಹಳ್ಳಿ ಕ್ರಾಸ್ ಬಳಿ ಯಾತ್ರೆ ತೆರಳುವಾಗ ಎದುರಿಗೆ ಬಂದಿದ್ದರಿಂದ ಗೂಡ್ಸ್ ವಾಹನದಲ್ಲಿದ್ದವರನ್ನು ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದರು. ಕುಮಾರಸ್ವಾಮಿ ಸಾಗುತ್ತಿದ್ದ ವಾಹನದಿಂದ ಕೆಲವೇ ಮೀಟರ್ ದೂರದಲ್ಲಿಯೇ ಈ ಘಟನೆ ನಡೆದಿದೆ.
ಇದನ್ನೂ ಓದಿ | Insurance scheme | ಅಂಗವಿಕಲರ ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ: ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ