ಬೆಳಗಾವಿ: ಪಂಚರತ್ನ ಕಾರ್ಯಕ್ರಮದ ಉದ್ದೇಶ ಮೂಲ ಸೌಕರ್ಯ ಅಭಿವೃದ್ಧಿ ಮಾಡುವುದಾಗಿದೆ. ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ಮಾಡಲು ಜನರು ಜೆಡಿಎಸ್‌ಗೆ ಒಂದು ಅವಕಾಶ ನೀಡಬೇಕು. ಪ್ರತಿ ಕುಟುಂಬದ ಸಮಸ್ಯೆಗಳಿಗೆ ನಾವು ಸ್ಪಂದಿಸುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ರಾಯಭಾಗ ತಾಲೂಕಿನ ಕುರಬಗೋಡಿ ಗ್ರಾಮದಲ್ಲಿ ನಡೆದ ಜೆಡಿಎಸ್ ಪಂಚರತ್ನ (JDS Pancharatna) ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್‌ಕೆಜಿ ಯಿಂದ ೧೨ನೇ ತರಗತಿಯವರೆಗೆ ಶಾಲೆಗಳಲ್ಲಿ ಉತ್ತಮ ಸೌಕರ್ಯ, ಉಚಿತ ಶಿಕ್ಷಣ ನೀಡುವ ಗುರಿ ಹೊಂದಿದ್ದೇವೆ. ರಾಜ್ಯದಲ್ಲಿ ಬಡವರಿಗೆ ಸರಿಯಾಗಿ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ೩೦ ಹಾಸಿಗೆಯ ಆಸ್ಪತ್ರೆ ಮಾಡುವ ಉದ್ದೇಶ ಹೊಂದಿದ್ದೇವೆ. ಆರೋಗ್ಯ ಸೇವೆಗಳಿಗೆ ಹೆಚ್ಚಿನ ಹಣ ಬೇಕಾದಲ್ಲಿ ಸರ್ಕಾರದಿಂದಲೇ ಧನ ಸಹಾಯ ಮಾಡುವ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ಭರವಸೆ ನೀಡಿದರು.
ಈಗ ರೈತರಿಗೆ ೭ ಗಂಟೆಗೆಳ ಕಾಲ ವಿದ್ಯುತ್ ನೀಡುತ್ತಿದ್ದಾರೆ, ಅದನ್ನು ೨೪ ಗಂಟೆಗಳಿಗೆ ವಿಸ್ತರಿಸುವ ಕೆಲಸ ಮಾಡುತ್ತೇವೆ. ಒಂದು ಎಕರೆಗೆ ೧೦ ಸಾವಿರದಂತೆ ೧೦ ಎಕರೆ ಇದ್ದವರಿಗೆ ೧ ಲಕ್ಷ ಹಣವನ್ನು ಉಚಿತವಾಗಿ ರೈತರಿಗೆ ನೀಡುವ ಉದ್ದೇಶ ಹೊಂದಿದ್ದೇವೆ. ಇದು ಸಾಲದ ರೂಪದಲ್ಲಿ ಅಲ್ಲ ನೇರವಾಗಿ ಉಚಿತವಾಗಿ ರೈತ ಕುಟುಂಬಕ್ಕೆ ನೀಡುವ ಉದ್ದೇಶ ಹೊಂದಿದ್ದೇವೆ. ರೈತರು ಬೆಳೆಯುವ ಬೆಳೆಗಳ ಆಧಾರದಲ್ಲಿ ಗ್ರಾಮ ಮಟ್ಟದಲ್ಲಿ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | R. Ashok: ಮಂಡ್ಯ ಜನರಿಗೆ ಸಾಷ್ಟಾಂಗ ನಮಸ್ಕಾರ: ಅಡ್ಜಸ್ಟ್‌ಮೆಂಟ್ ಆರೋಪಕ್ಕೆ ಉಸ್ತುವಾರಿಯಿಂದ ಹಿಂದೆ ಸರಿದ ಆರ್. ಅಶೋಕ್
ಕಡು ಬಡವರು ನನ್ನ ಮುಂದೆ ಸಮಸ್ಯೆ ಹೊತ್ತು ಬರುತ್ತಾರೆ. ಅವರಿಗೆ ಸಹಾಯ ಮಾಡಲು ನನಗೆ ದಿನಕ್ಕೆ 1 ಕೋಟಿ ರೂಪಾಯಿ ಆದರೂ ಬೇಕಾಗುತ್ತದೆ ಎಂದರು. ʻʻಕರ್ನಾಟಕದ ಒಬ್ಬ ಸಂಸದ ರೈತರ ಸಾಲ ಮನ್ನಾ ಮಾಡಿದ್ದು ತಪ್ಪು ಎನ್ನುತ್ತಾರೆ. ಆತನಿಗೆ ರೈತರ ಸಮಸ್ಯೆ ಗೊತ್ತಿಲ್ಲʼʼ ಎಂದು ಕಿಡಿಕಾರಿದರು.
ಯುವಕರಿಗೆ ಸ್ವಂತ ಉದ್ಯೋಗ ನೀಡಲು ಅವಕಾಶಗಳನ್ನು ಸೃಷ್ಟಿ ಮಾಡುತ್ತೇವೆ. ದೇವದಾಸಿ ವೃತ್ತಿ ಮಾಡುವ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲು ಮುಂದಾಗಿದ್ದೆ. ಅವರಿಗೆ ಒಂದು ಮನೆ, ಪ್ರತಿ ತಿಂಗಳು ೧೫ ಸಾವಿರ ರೂಪಾಯಿ ನೀಡುವ ಉದ್ದೇಶ ಹೊಂದಿದ್ದೆ. ಆದರೆ ಅದನ್ನು ಇಲ್ಲಿಯವರೆಗೆ ಆಳಿದ ಸರ್ಕಾರಗಳು ಮೊಟಕುಗೊಳಿದವು. ನಮ್ಮ ಜತೆಯಲ್ಲಿ ಬಂದ ಹಲವಾರು ಜನ ನನ್ನನ್ನು ಹಾಗೂ ದೇವೇಗೌಡರನ್ನು ಬಳಕೆ ಮಾಡಿಕೊಂಡರು ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ | Prajadhwani Yatra: ಮೋದಿ, ಅಮಿತ್ ಶಾ ಎಷ್ಟು ಸಾರಿ ರಾಜ್ಯಕ್ಕೆ ಬಂದ್ರೂ ಬಿಜೆಪಿಗೆ ಏನೂ ಪ್ರಯೋಜನವಿಲ್ಲ, ವೇಸ್ಟ್ ಎಂದ ಸಿದ್ದರಾಮಯ್ಯ
೧೯೯೪ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ೧೨ ಸ್ಥಾನ ಗೆದ್ದಿದ್ದೆವು. ಬೆಳಗಾವಿಯಲ್ಲಿ ವಿಧಾಸಭೆ ಕಲಾಪ ನಡೆವ ಹಾಗೆ ಮಾಡಿದ್ದು ಜೆಡಿಎಸ್. ಅದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಮಾಡಿಲ್ಲ. ವಿ.ಎಲ್.ಪಾಟೀಲರ ಕುಟುಂಬ ಒರಿಜಿನಲ್ ಕುಟುಂಬ ಎಂದ ಅವರು, ಬಾದಾಮಿಯಲ್ಲಿ ಜನ ಅವರನ್ನು ಗೆಲ್ಲಿಸಿದರು. ಈಗ ಬಾದಾಮಿ ಬಿಟ್ಟು ಅಲ್ಲೆಲ್ಲೊ ಬೆಂಗಳೂರು ಕಡೆಗೆ ಓಡಾಡುತ್ತಿದ್ದಾರೆ. ಮೊದಲು ಅವರೊಂದಿಗೆ ಸಿಎಂ ಇಬ್ರಾಹಿಂ ಇದ್ದರು, ಅವರಿದ್ದಾಗ ಸಿದ್ದುಗೆ ಅದೃಷ್ಟ ಇತ್ತು. ಈಗ ಅವರೂ ಇಲ್ಲ ಎಂದು ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿದರು.