ಬಾಗಲಕೋಟೆ: ನಾನು ಅಮೆರಿಕಕ್ಕೆ ಹೋಗಿದ್ದರಿಂದ ಸಮ್ಮಿಶ್ರ ಸರ್ಕಾರ ಉರುಳಿಲ್ಲ. ಸರ್ಕಾರವನ್ನು ಉಳಿಸಬೇಕು ಎಂದು ನಾನು ಪ್ರಯತ್ನಿಸಿದ್ದೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದರು. ಈಗಲೇ ಬರೆದಿಟ್ಟುಕೊಳ್ಳಿ ಸಿದ್ದರಾಮಯ್ಯ ಈ ಬಾರಿ ಎಲ್ಲೇ ನಿಂತರೂ ಸೋಲುವುದು ಖಚಿತ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅಮೆರಿಕಕ್ಕೆ ಹೋಗಿ ಸಿಎಂ ಸ್ಥಾನ ಕಳೆದುಕೊಂಡು, ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಬಾದಾಮಿಯ ಗುಳೇದಗುಡ್ಡದಲ್ಲಿ ಸೋಮವಾರ ನಡೆದ ಪಂಚರತ್ನ ಯಾತ್ರೆಯಲ್ಲಿ (JDS Pancharatna) ಮಾತನಾಡಿದರು.
ಅಮೆರಿಕಕ್ಕೆ ಹೋಗಿದ್ದಕ್ಕೆ ಆ ರೀತಿ ಆಯ್ತಂತಾ? ಒಂದು ವರ್ಷದ ಮುಂಚೆ ಧರ್ಮಸ್ಥಳದ ಸಿದ್ದವನದಲ್ಲಿ ಅವರು ಏನು ಮಾಡಿದರಂತೆ? ಸರ್ಕಾರ ರಚನೆಯಾದ ಮೂರೇ ತಿಂಗಳಿಗೆ ಸಿದ್ದವನದಲ್ಲಿ ಕುಳಿತು ಕುತಂತ್ರ ಮಾಡುತ್ತಿದ್ದರು. ಅವೆಲ್ಲ ಮಾಧ್ಯಮಗಳಲ್ಲಿ ಬರಲಿಲ್ಲವೇ? ಸರ್ಕಾರನ್ನು ಒಂದು ವರ್ಷ ಆದ ಮೇಲೆ ತೆಗೆಯುತ್ತೇನೆ, ಯಾಕೆ ತಲೆ ಕೆಡೆಸಿಕೊಳುತ್ತೀರಿ ಎಂದು ಹೇಳಿದ್ದು ನಾನಾ? ಆ ರೀತಿ ಆಗುತ್ತದೆ ಎಂಬುದು ನನಗೆ ಗೊತ್ತಿತ್ತು. ಆದರೂ ನಾನು ಸರ್ಕಾರವನ್ನು ಉಳಿಸಬೇಕು ಎಂದು ಹೊರಟಿದ್ದೆ ಎಂದರು.
ಇದನ್ನೂ ಓದಿ | BJP Karnataka : ಕಾಂಗ್ರೆಸ್‌ನಿಂದಲೇ ಭ್ರಷ್ಟಾಚಾರದ ಹುಟ್ಟು: ಸಚಿವ ಡಾ. ಕೆ. ಸುಧಾಕರ್ ಆರೋಪ
ಸರ್ಕಾರ ಉಳಿಸಬೇಕು ಎಂದು ಹೊರಟಾಗ, ಬಿಜೆಪಿಯಿಂದ ೫ ಜನರನ್ನು ತಂದರೆ, ೧೦ ಜನರನ್ನು ಕಳುಹಿಸುತ್ತೇವೆ ಎಂದು ಸಿದ್ದರಾಮಯ್ಯನ ಹಿಂಬಾಲಕರು ಚರ್ಚೆ ಮಾಡಿರುವುದು ನನಗೆ ಗೊತ್ತಿಲ್ಲವೇ? ಈಗ ಅದೆಲ್ಲ ಮುಗಿದು ಹೋದ ಅಧ್ಯಾಯ ಎಂದ ಅವರು, ಇವತ್ತೇ ಬರೆದಿಟ್ಟುಕೊಳ್ಳಿ, ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಸೋಲುತ್ತಾರೆ. ಜೆಡಿಎಸ್ ಅಭ್ಯರ್ಥಿ ಗೆಲ್ಲವುದರಲ್ಲಿ ಯಾವುದೇ ಸಂಶಯವಿಲ್ಲ. ಯಾರು ನಿಲ್ಲುತ್ತಾರೆ, ಯಾರು ನಿಲ್ಲಲ್ಲ ಎಂಬ ಪ್ರಶ್ನೆ ನನಗಿಲ್ಲ. ಕೋಲಾರದಲ್ಲಿ ಜನತಾದಳದ ವಿಜಯವನ್ನು ಈಗಾಗಲೇ ಜನತೆ ಬರೆದಿದ್ದಾರೆ ಎಂದು ಮಾಜಿ ಸಿಎಂ ವಿರುದ್ಧ ಕಿಡಿಕಾರಿದರು.
ಬಾದಾಮಿ ಕ್ಷೇತ್ರದಲ್ಲಿ ಹನುಮಂತ ಮಾವಿನಮರದ ನಮ್ಮ ಅಭ್ಯರ್ಥಿಯಾಗಿದ್ದಾರೆ. ಅವರು ಕಳೆದ ಬಾರಿಯೇ ಶಾಸಕರಾಗುವ ಸಾಮರ್ಥ್ಯ ಹೊಂದಿದ್ದರು. ಆದರೆ, ಕೆಲ ರಾಜಕೀಯ ಬೆಳವಣಿಗೆಗಳಿಂದ ಅವರ ದುಡಿಮೆಗೆ ಫಲ ದೊರಕಿರಲಿಲ್ಲ. ಕಳೆದ ೫ ವರ್ಷಗಳಿಂದ ಈ ಕ್ಷೇತ್ರದಲ್ಲಾದ ಬೆಳವಣಿಗೆಗಳಿಂದ ಈ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದ ಜನತೆ ಜಾತಿ ಭೇದ ಮರೆತು ಎಲ್ಲರೂ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಕೋರಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುಟುಂಬಸ್ಥರೆಲ್ಲರೂ ದೋಚಲು ಶುರು ಮಾಡಿದ್ದಾರೆ ಎಂಬ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ಉತ್ತರಿಸಿ, ಅವರ (ಮಾಧುಸ್ವಾಮಿ) ನಾಲಿಗೆ ಹರಿಬಿಟ್ಟಿರುವುದು ನೋಡಿದರೆ, ಬಹುಶಃ ಅವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರಬಹುದು. ನಾನು ಅವರ ಕ್ಷೇತ್ರಕ್ಕೆ ಭೇಟಿ ಕೊಟ್ಟು ಒಂದು ತಿಂಗಳು ಗತಿಸಿದೆ. ಈಗ ಆ ವಿಷಯ ಯಾಕೆ ಪ್ರಸ್ತಾಪ ಮಾಡಿದರು? ಅವರು ಮಂತ್ರಿಗಳಲ್ಲವೇ? ಅಪ್ಪ, ಮಕ್ಕಳು, ಮೊಮ್ಮಕ್ಕಳು, ಮನೆಯಲ್ಲಿರುವ ಹೆಣ್ಣುಮಕ್ಕಳ ಹೆಸರನ್ನು ತಂದಿದ್ದಾರೆ. ದೋಚುತ್ತಿದ್ದಾರೆ ಎಂಬ ಪದ ಬಳಕೆ ಮಾಡಿದ್ದಾರೆ. ಯಾರನ್ನು ದೋಚಿದ್ದೇವೆ ಎಂಬುದನ್ನು ಹೇಳಬೇಕು ಎಂದು ಒತ್ತಾಯಿಸಿದರು.
ಸಾಲದ ಹಣ ಕಟ್ಟದಿದ್ದರೆ ಬ್ಯಾಂಕ್‌ನವರು ನೋಟಿಸ್ ನೀಡುತ್ತಾರೆ ಎಂಬ ಹೇಳಿಕೆ ಕೊಡುವ ವಿಕೃತ ಮನಸ್ಸಿನ ವ್ಯಕ್ತಿಗಳಿಂದ ನಾನು ಸರ್ಟಿಫಿಕೇಟ್ ಪಡೆಯಬೇಕೆ? ಯಾರು ದೋಚುತ್ತಿದ್ದಾರೆ, ಯಾರು ಲೂಟಿ ಮಾಡುತ್ತಿದ್ದಾರೆ ಎಂಬುವುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದ ಅವರು, ದೇವೆಗೌಡರು ಹೇಮಾವತಿ ಜಲಾಶಯಕ್ಕಾಗಿ ಹೋರಾಟ ಮಾಡದೇ ಹೋಗಿದ್ದರೆ ಇವರು ಎಲ್ಲಿಂದ ನೀರು ತರುತ್ತಿದ್ದರು. ತುಮಕೂರು ಜಿಲ್ಲೆಗೆ ನೀರು ಬರದಿದ್ದಾಗ ಮೈತ್ರಿ ಸರ್ಕಾರದಲ್ಲಿ ೭೦೦ ಕೋಟಿ ರೂಪಾಯಿ ಕೊಟ್ಟು, ಮುಚ್ಚಿಹೋದ ಕಾಲುವೆಗಳನ್ನು ರಿಪೇರಿ ಮಾಡಿಸಿದವರು ಯಾರು? ತುಮಕೂರು ಜಿಲ್ಲೆಯಲ್ಲಿ ಪ್ರಚಾರ ಮಾಡಿದ್ದಕ್ಕೆ ಮಾಧುಸ್ವಾಮಿಗೆ ಢವ ಢವ ಶುರುವಾಗಿದೆ ಎಂದರು.
ಇದನ್ನೂ ಓದಿ | Prajadhwani : ಬಚ್ಚಲು ನೀರಿಂದಲೋ, ಕೊಳಚೆ ನೀರಿಂದಲೊ; ಒಟ್ಟಿನಲ್ಲಿ ಅಂತರ್ಜಲ ಹೆಚ್ಚಿದೆ: ಕೋಲಾರದಲ್ಲಿ ಡಿ.ಕೆ. ಶಿವಕುಮಾರ್ ಮಾತು
ಭ್ರಷ್ಣಾಚಾರ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗ ಕಾಂಗ್ರೆಸ್‌ನವರ ವಿರುದ್ಧವೂ ಪ್ರತಿಭಟನೆ ಆಗಬೇಕಲ್ಲವೇ? ಇವತ್ತು ಇಂತಹ ಸರ್ಕಾರ ಬರಲು ಯಾರು ಕಾರಣಕರ್ತರು ಎಂಬುವುದನ್ನು ಅವರವರ ಆತ್ಮಸಾಕ್ಷಿಗೆ ಪ್ರಶ್ನೆ ಹಾಕಿಕೊಳ್ಳಬೇಕು. ಬಿಜೆಪಿ, ಕಾಂಗ್ರೆಸ್ ಪರಸ್ಪರ ಟೀಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಆ ರೈತರ ಕುಟುಂಬಗಳನ್ನು ಯಾವ ರೀತಿ ಉಳಿಸಬೇಕು ಎಂಬ ಜ್ಞಾನ ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಇಲ್ಲ ಎಂದು ಜರಿದರು.