ದಾವಣಗೆರೆ: ಪಂಚರತ್ನ ಯೋಜನೆ ಜಾರಿ (JDS Pancharatna) ಮಾಡಿ ರೈತರು, ಯುವಜನತೆ, ಮಹಿಳೆಯರು, ಕೂಲಿ ಕಾರ್ಮಿಕರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಇದಕ್ಕಾಗಿ ಐದು ವರ್ಷ ನನಗೆ ಸಂಪೂರ್ಣ ಬಹುಮತದ ಸರ್ಕಾರ ನೀಡಬೇಕು. ನಾನು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿರುವುದು ಅಧಿಕಾರಕ್ಕಲ್ಲ, ಜನರ ಸಂಕಷ್ಟಕ್ಕೆ ಸ್ಪಂದಿಸಲು ಓಡಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಹರಿಹರದ ಗಾಂಧಿ ಮೈದಾನದಲ್ಲಿ ಬುಧವಾರ ನಡೆದ ಜೆಡಿಎಸ್ ಪಂಚರತ್ನ ಯಾತ್ರೆ ಸಮಾವೇಶದಲ್ಲಿ ಮಾತನಾಡಿ, ಪ್ರತಿನಿತ್ಯ ನೂರಾರು ಕುಟುಂಬಗಳು ನನ್ನ ಬಳಿ ಬರುತ್ತವೆ. ಪರ್ಸೇಂಟೇಜ್ ವ್ಯಕ್ತಿಗಳು ನನ್ನ ಬಳಿ ಬರುವುದಿಲ್ಲ. ಕಷ್ಟವನ್ನು ಹೇಳಿಕೊಂಡು ಜನರು ನನ್ನ ಬಳಿ ಬರುತ್ತಾರೆ. ನಿಮಗೆಲ್ಲ ಕೊಡಲು ವೈಯಕ್ತಿಕವಾಗಿ ಹಣ ಎಲ್ಲಿಂದ ತರಲಿ. ನಾನು ಎರಡು ಬಾರಿ ಸಿಎಂ ಆಗಿದ್ದಾಗ ಯಾವ ಗುತ್ತಿಗೆದಾರನೂ ನಮ್ಮ ಮೇಲೆ ಆರೋಪ ಮಾಡಿಲ್ಲ. ಅಷ್ಟು ಶುದ್ಧ ಹಸ್ತದಿಂದ ಅಧಿಕಾರವನ್ನು ನಡೆಸಿಕೊಂಡು ಹೋಗಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ | Budget 2023 : ಕೇಂದ್ರ ಸರ್ಕಾರದ ಬಜೆಟ್ ʼಸೀಡ್‌ಲೆಸ್ ಕಡಲೆಕಾಯಿʼ ಇದ್ದಂತಿದೆ!: ಕಾಂಗ್ರೆಸ್ ಟೀಕೆ
ಈ ನಾಡಿನ ಜನರ ನೋವು, ಕಷ್ಟಗಳ ಬಗ್ಗೆ ಚಿಂತನೆ ಮಾಡುತ್ತೇನೆ. ರೈತರು, ಬಡವರು ನೆಮ್ಮದಿಯಾಗಿ ಬದುಕಬೇಕು ಎಂಬುದು ನಮ್ಮ ಸಂಕಲ್ಪ. ಮನೆಯಿಲ್ಲದವರಿಗೆ ಮನೆ ಕಟ್ಟಿಕೊಡಬೇಕೆಂಬುದು ನಮ್ಮ ಉದ್ದೇಶ. ವಿಶ್ವದಲ್ಲಿ ಭಾರತ ಬಡ ರಾಷ್ಟ್ರ ಎಂಬ ವರದಿ ಬಂದಿದೆ. ನನ್ನ ಮಾತುಗಳಲ್ಲಿ ಯಾವುದೇ ಬೂಟಾಟಿಕೆ ಇಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಬರಬೇಕೆಂದರೆ ಹಲವರ ಶ್ರಮವನ್ನು ಸ್ಮರಿಸಬೇಕು ಎಂದರು.
ನೆಹರು ಕುಟುಂಬ ಭ್ರಷ್ಟ ಕುಟುಂಬ ಎಂದು ಅಮಿತ್ ಶಾ ಹೇಳುತ್ತಾರೆ. ಹಸಿವಿನ ನಿವಾರಣೆ ಆಗಿದ್ದರೆ, ಅದರಲ್ಲಿ ನೆಹರು ಕುಟುಂಬದ ಕೊಡುಗೆ ಇದೆ ಎಂದ ಅವರು, ಅವರು ಕೆಲವು ತಪ್ಪು ಮಾಡಿದ್ದಾರೆ. ಅಂದು ನೆಹರು ತೆಗೆದುಕೊಂಡ ನಿರ್ಧಾರ ಹಸಿವನ್ನು ನೀಗಿಸಿದೆ. ಆದರೆ, ಇಂದಿನ ಕಾಂಗ್ರೆಸ್ ನಕಲಿ ಕಾಂಗ್ರೆಸ್. ಈಗೆಲ್ಲಾ ಸಿಡಿ ಹಾವಳಿಯೇ ಜಾಸ್ತಿಯಾಗಿದೆ. ಬೆಳೆ ವಿಮೆ ಸರಿಯಾಗಿ ವಿತರಣೆಯಾಗಿಲ್ಲ. ರೈತರ ವಿಮೆ ಹಣ ಲೂಟಿಯಾಗುತ್ತಿದೆ ಎಂದು ತಿಳಿಸಿದರು.