Site icon Vistara News

JDS Pancharatna | ಇತಿಹಾಸ ಮರುಕಳಿಸಲಿದೆ, ಕುಮಾರಣ್ಣ ಮತ್ತೆ ಸಿಎಂ ಆಗ್ತಾರೆ ಎಂದ ನಿಖಿಲ್ ಕುಮಾರಸ್ವಾಮಿ

Nikhil Kumaraswamy reacts to defeat in Ramanagara

ಕೋಲಾರ: ಕುರುಡುಮಲೆ ಗಣೇಶ ನಂಬಿದವರನ್ನು ಕೈಬಿಟ್ಟಿಲ್ಲ. 1994ರಲ್ಲಿ ದೇವೇಗೌಡರು ಕುರುಡುಮಲೆ ಗಣೇಶ ದೇವಸ್ಥಾನದಿಂದ ಚುನಾವಣಾ ಪ್ರಚಾರ ಶುರು ಮಾಡಿದ್ದರು. ಅಂದು ಸ್ವತಂತ್ರವಾಗಿ ಜೆಡಿಎಸ್ ಅಧಿಕಾರಕ್ಕೇರಿತು. ಈಗ ಮತ್ತೆ ಇತಿಹಾಸ ಮರುಕಳಿಸುತ್ತದೆ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಪಂಚರತ್ನ ಕಾರ್ಯಕ್ರಮ(JDS Pancharatna) ಕುಮಾರಣ್ಣನ ಕನಸಿನ ಕೂಸು. ಇದು ಸಾಮಾನ್ಯ ಜನರ ಬದುಕನ್ನು ಕಟ್ಟಿಕೊಡುವ ಕಾರ್ಯಕ್ರಮವಾಗಿದೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪುತ್ರ, ಯುವ ಜನತಾ ದಳ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಮುಳಬಾಗಿಲಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜೆಡಿಎಸ್‌ ಪಂಚರತ್ನ ಸಮಾವೇಶದಲ್ಲಿ ಮಾತನಾಡಿ, ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ನಡೆದ ಗರ್ಭಿಣಿ ಮತ್ತು ಅವಳಿ ಮಕ್ಕಳ ಸಾವು ಪ್ರಕರಣ ರಾಜ್ಯದಲ್ಲಿ ಆಸ್ಪತ್ರೆಗಳ ದುಸ್ಥಿತಿಗೆ ನಿದರ್ಶನ. ಹೀಗಾಗಿ ಸರ್ಕಾರಿ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯಾಗಿ ನಿರ್ಮಾಣ ಮಾಡುವ ಗುರಿಯನ್ನು ಜೆಡಿಎಸ್ ಹೊಂದಿದ್ದಾರೆ. ಅದೇ ರೀತಿ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಳ ಮಾಡುವುದು ಕುಮಾರಸ್ವಾಮಿ ಅವರ ಉದ್ದೇಶವಾಗಿದೆ ಎಂದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಯಾರೂ ಕೂಡ ಯುವಕರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಹೀಗಾಗಿ ಕ್ಲಸ್ಟರ್ ನಿರ್ಮಾಣ ಮಾಡಿ ಉದ್ಯೋಗ ಸೃಷ್ಟಿ ಮಾಡುವ ಕಲ್ಪನೆಯನ್ನು ಕುಮಾರಣ್ಣ ಹೊಂದಿದ್ದಾರೆ. ಜಾತಿ ಆಧಾರದಲ್ಲಿ ಉದ್ಯೋಗ ನೀಡಲಾಗುತ್ತಿದೆ. ರಾಜ್ಯದಲ್ಲಿ ಪರಭಾಷಿಕರೆ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ ಎಂದ ಅವರು, ಯುವಕರ ಪರವಾಗಿ ಮನವಿ ಮಾಡುತ್ತಿದ್ದೇನೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಿಗಬೇಕು. ಕನ್ನಡಿಗರಿಗೆ ಶೇ.50 ಉದ್ಯೋಗ ಮೀಸಲಾತಿ ಕೊಡಿಸಬೇಕೆಂದು ಮುಂದಿನ ಸಿಎಂ ಕುಮಾರಸ್ವಾಮಿ ಅವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

ಅನೇಕ ರೈತರು ಸಾಲದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಆದರೆ ಕುಮಾರಸ್ವಾಮಿ 2018ರಲ್ಲಿ ರೈತರ ಸಾಲಮನ್ನಾ ಮಾಡಿದರು. ರೈತರ ಸಾಲಮನ್ನಾ ಮಾಡಿದ ದೇಶದ ಏಕೈಕ ವ್ಯಕ್ತಿ ಕುಮಾರಸ್ವಾಮಿ ಎಂದ ಅವರು, ಪಂಚರತ್ನ ಕಾರ್ಯಕ್ರಮ ಕುಮಾರಣ್ಣನ ಕನಸಿನ ಕೂಸು, ಹೀಗಾಗಿ ಜೆಡಿಎಸ್‌ ಅನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಕೋರಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳು ವಿವಿಧ ಕಾರ್ಯಕ್ರಮ ಮಾಡುತ್ತಿವೆ. ಪಂಚರತ್ನ ಕಾರ್ಯಕ್ರಮಕ್ಕೆ ಸಮಾನವಾದ ಒಂದು ಕಾರ್ಯಕ್ರಮ ಮಾಡುತ್ತೇವೆ ಎನ್ನೋ ಧೈರ್ಯ ಬಿಜೆಪಿಯವರಿಗಿದೆಯೇ? ದೇವೆಗೌಡರ ಮಗ ಕುಮಾರಸ್ವಾಮಿ ರೈತಪರ ಯೋಜನೆ ರೂಪಿಸಿದ್ದಾರೆ. ರೈತರ ಕಷ್ಟಗಳ ಬಗ್ಗೆ ಸಿಎಂ ಬೊಮ್ಮಯಿ, ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿ, ಬಲಿ ಕೊಡುವುದಕ್ಕೆ ಸಿದ್ದರಾಮಯ್ಯನವರನ್ನು ಕೋಲಾರಕ್ಕೆ ಕರೆದುಕೊಂಡು ಬಂದಿದ್ದಾರೆ. ಕಾಂಗ್ರೆಸ್ ಪಕ್ಷ ಅಧೋಗತಿಯಲ್ಲಿದೆ, ಅವರಿಗೆ ಈ ಪರಿಸ್ಥಿತಿ ಬರಬಾರದಿತ್ತು. ಹಾಗೆಯೇ ದಲಿತ ನಾಯಕರಾಗಿ, 6 ಸಲ‌ ಗೆದ್ದಂತಹ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪಗೆ ಇಂತಹ ಸ್ಥಿತಿ ಬರಬಾರದಿತ್ತು. ಸಿದ್ದರಾಮಯ್ಯಗೆ ಎಲ್ಲಿ ನಿಲ್ಲಬೇಕೆಂದು ಗೊತ್ತಾಗುತ್ತಿಲ್ಲ. ಆದರೆ, ಕುಮಾರಸ್ವಾಮಿ ಕ್ಷೇತ್ರ ಹುಡುಕುತ್ತಿಲ್ಲ ಎಂದು ಹೇಳಿದರು.

ಜನತಾ ದಳದ ನಾಯಕರು ಜೈಲಿನಲ್ಲೂ ಇಲ್ಲ, ಬೇಲ್‌ನಲ್ಲಿ ಇಲ್ಲ. ನಾವು ಜನರ ಮಧ್ಯೆ ಇದ್ದೇವೆ. ನಿಷ್ಠಾವಂತ ಕಾರ್ಯಕರ್ತರನ್ನು ಕಾಪಾಡುವುದು ಪಕ್ಷದ ಜವಾಬ್ದಾರಿ. ತೆನೆ ಹೊತ್ತ‌ ಮಹಿಳೆ ವಿಧಾನಸೌಧ ಪ್ರವೇಶಿಸಬೇಕು. ಅಷ್ಟ ಲಕ್ಷ್ಮೀಯರ ಪ್ರವೇಶ ವಿಧಾನಸೌಧಕ್ಕೆ ಬರಬೇಕು. ದೇವೆಗೌಡರ ಕಣ್ಮುಂದೆ ಇದು ನಡೆಯಬೇಕು, ಕುಮಾರಸ್ವಾಮಿ ಗ್ರಾಮಗಳಿಗೆ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ ಎಂದರು.

ವಿಧಾನಸೌಧದಲ್ಲಿ ಕೆಂಪೇಗೌಡರ ಪ್ರತಿಮೆ
ದೇವೇಗೌಡರನ್ನು ಬಿಟ್ಟು ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರಿಗೆ ಬಿಜೆಪಿ ಅಪಮಾನ ಮಾಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇವೇಗೌಡರನ್ನು ಭೇಟಿಯಾಗಿದ್ದರು. ಆದರೆ, ಬಿಜೆಪಿಯವರು ದೇವೇಗೌಡರನ್ನು ಬಿಟ್ಟು ಕಾರ್ಯಕ್ರಮ ಮಾಡಿದ್ದಾರೆ. ದೇವೇಗೌಡರು ಕೆಂಪೇಗೌಡರ ಮಗ, ಅವರನ್ನು ಕರೆಯಬೇಕೆಂಬ ಸೌಜನ್ಯ ಇಲ್ಲವೇ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

ನಮಗೂ ಟೈಮ್ ಬರಲಿ, 2023ರಲ್ಲಿ ಅಧಿಕಾರಕ್ಕೆ ಬಂದರೆ ಕೆಂಪೇಗೌಡರ ಪ್ರತಿಮೆಯನ್ನು ವಿಧಾನಸೌಧದಲ್ಲಿ ನಿರ್ಮಾಣ ಮಾಡಿ, ದೇವೇಗೌಡರ ಕೈಯಲ್ಲಿ ಅನಾವರಣ ಮಾಡಿಸುತ್ತೇವೆ. ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಕೆಂಪೇಗೌಡರ ಹೆಸರಿನಲ್ಲಿ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡುತ್ತೇವೆ. ಅಲ್ಲದೇ ಟಿಪ್ಪು, ಅಂಬೇಡ್ಕರ್, ಕುವೆಂಪು ವಿವಿ ನಿರ್ಮಾಣ ಮಾಡುತ್ತೇವೆ ಎಂದ ಅವರು, ದೇವೇಗೌಡರು ತಲುಪಿದ ಸ್ಥಾನವನ್ನು ಕುಮಾರಸ್ವಾಮಿ ತಲುಪಬೇಕು ಎಂದು ಆಶಿಸಿದರು.

ಇದನ್ನೂ ಓದಿ | JDS Pancharatna | ಬೇರೆಯವರ ಮನೆ ಮುಂದೆ ಕಾಯುವಂತೆ ಮಾಡಬೇಡಿ ಎಂದ HDK: ಸಿದ್ದರಾಮಯ್ಯ, ಪ್ರತಾಪ್‌ ಸಿಂಹ ವಿರುದ್ಧ ವಾಗ್ದಾಳಿ

Exit mobile version