Site icon Vistara News

JDS Politics: ನಿರೀಕ್ಷಿತ ಕೆಲಸ ಮಾಡದಿದ್ರೆ ಬದಲಾವಣೆ; ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್‌ಡಿಕೆ ಖಡಕ್‌ ಎಚ್ಚರಿಕೆ

apple-phone HD Kumaraswamy tweet regarding Foxconn issue

#image_title

ಬೆಂಗಳೂರು: ಚುನಾವಣೆಗೆ ಕೇವಲ ಇನ್ನೆರಡು ತಿಂಗಳು ಮಾತ್ರ ಇದ್ದು, ಯಾವಾಗ ಬೇಕಾದರೂ ಚುನಾವಣೆ ದಿನಾಂಕ ಪ್ರಕಟವಾಗಬಹುದು. ಆದ್ದರಿಂದ ಎಲ್ಲ ಘೋಷಿತ ಅಭ್ಯರ್ಥಿಗಳು ವೇಗವಾಗಿ ಜನರನ್ನು ತಲುಪುವ ಕೆಲಸ ಮಾಡಬೇಕು. ಯಾರಾದರೂ ಉದಾಸೀನ ಮಾಡಿದರೆ ಅಂತಹ (JDS Politics) ಅಭ್ಯರ್ಥಿಗಳನ್ನು ಮುಲಾಜಿಲ್ಲದೆ ಬದಲಾವಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಡಕ್ ಎಚ್ಚರಿಕೆ ಕೊಟ್ಟರು.

ನಗರದ ಜೆಡಿಎಸ್‌ ಕಚೇರಿ ಜೆಪಿ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪಟ್ಟಿಯಲ್ಲಿರುವ 93 ಅಭ್ಯರ್ಥಿಗಳ ಸಭೆಯಲ್ಲಿ ಮಾತನಾಡಿದರು. 61 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ನಂತರ ಅಭ್ಯರ್ಥಿಗಳ ಸಭೆ ಕರೆದಿದ್ದ ಮಾಜಿ ಮುಖ್ಯಮಂತ್ರಿ, ಇನ್ನು ಎರಡು ತಿಂಗಳು ಅಭ್ಯರ್ಥಿಗಳು ಸಾಗಬೇಕಾದ ಗೆಲುವಿನ ಹಾದಿಯ ಬಗ್ಗೆ ದಿಕ್ಸೂಚಿ ನಿಗದಿ ಮಾಡಿದರು.

ಮನೆ ಮನೆಗೂ ಪಂಚರತ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದ ಮೂಲಕ ಜನರ ಬಳಿಗೆ ತಲುಪಲು ಅಭ್ಯರ್ಥಿಗಳಿಗೆ ಟಾಸ್ಕ್ ನೀಡಲಾಗಿದೆ. ಮುಂದಿನ ಎರಡೂವರೆ ತಿಂಗಳು ಅಭ್ಯರ್ಥಿಗಳು ವಾರಕ್ಕೆ ಕೊನೆಯ ಪಕ್ಷ ಮೂರು ದಿನ ವಿವಿಧ ಗ್ರಾಮಗಳಲ್ಲಿ ವಾಸ್ತವ್ಯ ಹೂಡಬೇಕು ಎಂದು ಅಭ್ಯರ್ಥಿಗಳಿಗೆ ತಾಕೀತು ಮಾಡಿದರು.

ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪರ ಅಲೆ ಎದ್ದಿದೆ. ಈ ಅವಕಾಶವನ್ನು ಎಲ್ಲಾ ಅಭ್ಯರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ನನ್ನ ಆರೋಗ್ಯ ಲೆಕ್ಕಿಸದೆ ರಥಯಾತ್ರೆ ನಡೆಸುತ್ತಿದ್ದೇನೆ. ನನ್ನ ಆರೋಗ್ಯಕ್ಕಿಂತ ಜನರ ಹಿತ ಮುಖ್ಯ. ಕೆಲ ಅಭ್ಯರ್ಥಿಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಇನ್ನು ಕೆಲವರು ಇನ್ನೂ ಟೇಕಾಫ್ ಆಗಿಲ್ಲ ಎಂದು ಚಾಟಿ ಬೀಸಿದ ಕುಮಾರಸ್ವಾಮಿ ಅವರು, ಪಂಚರತ್ನ ರಥಯಾತ್ರೆ ಯಶಸ್ಸಿನ ಬಗ್ಗೆ ಹಾಗೂ ಸ್ಪಂದನೆ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದರು.

ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ, ಹಿರಿಯ ನಾಗರಿಕರಿಗೆ 5000 ರೂ. ಮಾಸಾಶನ, ವಿಕಲಚೇತನರು ಹಾಗೂ ವಿಧವೆಯರಿಗೆ 2500 ರೂ. ಮಾಸಾಶನ ನೀಡುವ ಬಗ್ಗೆ ಜನರಿಗೆ ತಿಳಿಸಬೇಕು. 2006 ಹಾಗೂ 2018ರಲ್ಲಿ ಮಾಡಿದ್ದ ಸಾಲ ಮನ್ನಾ ಬಗ್ಗೆ ಜನರಿಗೆ ತಿಳಿಸಬೇಕು. ಸಾಲ ಮನ್ನಾ ಆಗದಿರುವ ಎರಡು ಲಕ್ಷ ಕುಟುಂಬಗಳಿಗೆ ಬಿಜೆಪಿ ಸರ್ಕಾರ ಮಾಡಿದ ಅನ್ಯಾಯದ ಬಗ್ಗೆ ಜನತೆಗೆ ಮಾಹಿತಿ ನೀಡಿ ಎಂದು ಹೇಳಿದರು.

ಪಂಚರತ್ನ ಯೋಜನೆಗಳ ಬಗ್ಗೆ ಮನೆ ಮನೆಗೂ ಮಾಹಿತಿ ನೀಡುವ ಮೂಲಕ ಪಂಚರತ್ನ ಕಾರ್ಯಕ್ರಮವನ್ನು ಯಶಸ್ಸು ಮಾಡಬೇಕು. ಜನರಿಗೆ ವಿಶ್ವಾಸ ಬರುವಂತೆ ವರ್ತಿಸಿ, ಆ ರೀತಿಯಲ್ಲಿ ಮಾಹಿತಿ ನೀಡಿ ಎಂದು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.

ಕೆಲ ಅಭ್ಯರ್ಥಿಗಳ ಬಗ್ಗೆ ಅತೃಪ್ತಿ

ಸುಮ್ಮನೆ ಮನೆಯಲ್ಲಿ ಕೂತು ಗೆಲ್ಲಬೇಕು ಎಂದರೆ ಗೆಲ್ಲಲು ಸಾಧ್ಯ ಇಲ್ಲ. ಕೆಲ ಕ್ಷೇತ್ರಗಳಲ್ಲಿ ನಾವು ಹಾಕಿರುವ ಅಭ್ಯರ್ಥಿಗಳು ಹಾಗೂ ಆಯಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಗೆ ಸಿಕ್ಕಿರುವ ಸ್ಪಂದನೆ ಬಿಜೆಪಿ ಕಾಂಗ್ರೆಸ್ ಪ್ರಮುಖ ದಿಗ್ಗಜ ನಾಯಕರ ನಿದ್ದೆಗೆಡುವಂತೆ ಮಾಡಿದೆ. ಕೆಲಸ ಮಾಡದ, ವೇಗವಾಗಿ ಮುನ್ನಡೆಯದ ಅಭ್ಯರ್ಥಿಗಳನ್ನು ಮುಲಾಜಿಲ್ಲದೆ ಬದಲಾಯಿಸುತ್ತೇನೆ. ಆರೇಳು ಕ್ಷೇತ್ರಗಳಲ್ಲಿ ಘೋಷಿತ ಅಭ್ಯರ್ಥಿಗಳ ವೇಗ ನನಗೆ ತೃಪ್ತಿ ನೀಡಿಲ್ಲ. ಅವರನ್ನು ಬದಲಾವಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.

ಪ್ರತಿ ಕ್ಷೇತ್ರವೂ ನನಗೆ ಮುಖ್ಯ, ನಾನು ಕಠಿಣ ನಿರ್ಧಾರ ಕೈಗೊಳ್ಳುವ ಬಗ್ಗೆ ಹಿಂದೆ ಸರಿಯುವುದಿಲ್ಲ. ಮುಲಾಜಿಲ್ಲದೆ ಕಠಿಣ ನಿರ್ಧಾರ ಕೈಗೊಳ್ಳುವ ಅವಕಾಶ ನನ್ನ ಮುಂದೆ ಮುಕ್ತವಾಗಿದೆ. ಕೆಲವರು ಬಹಳ ಉತ್ತವಾಗಿ ಕೆಲಸ ಮಾಡುತ್ತಿದ್ದಾರೆ, ನನಗೆ ಖುಷಿ ಇದೆ, ಕೆಲವರು ಉಪಯೋಗ ಇಲ್ಲ ಎಂದರು.

ಜಿಲ್ಲಾಧ್ಯಕ್ಷರಿಗೆ ಚುರುಕು

ಕೆಲ ಜಿಲ್ಲೆಗಳಲ್ಲಿ ಎಂಟು ಹತ್ತು ವರ್ಷಗಳಿಂದ ಅಧ್ಯಕ್ಷರಾದವರು ಇದ್ದಾರೆ. ಆದರೆ, ಒಬ್ಬ ಸೂಕ್ತ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗದಿದ್ದರೆ ಹೇಗೆ? ಇನ್ನು ಯಾವ ಸೀಮೆ ಅಧ್ಯಕ್ಷಗಿರಿ ನಿಮ್ಮದು? ಇದನ್ನು ಸಹಿಸುವ ಪ್ರಶ್ನೆ ಇಲ್ಲ. ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳ ಗೆಲುವಿಗೆ ಜಿಲ್ಲಾಧ್ಯಕ್ಷರು, ಜಿಲ್ಲೆಗಳ ಎಲ್ಲಾ ಮುಖಂಡರು ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪಕ್ಷದ ನಿರ್ಣಯವನ್ನು ಎಲ್ಲರೂ ಗೌರವಿಸಬೇಕು, ಅಶಿಸ್ತನ್ನು ಸಹಿಸಲ್ಲ ಎಂದು ನೇರ ಮಾತುಗಳಲ್ಲಿ ಹೇಳಿದರು.

ಇದನ್ನೂ ಓದಿ | Adani Group Shares: ಮೋದಿ, ಶಾ ಒಪ್ಪಿಗೆ ಇಲ್ಲದೇ ಎಲ್‌ಐಸಿಯಿಂದ ಅದಾನಿ ಗ್ರೂಪ್‌ ಮೇಲೆ ಹೂಡಿಕೆ ಸಾಧ್ಯವೇ?: ಪ್ರಿಯಾಂಕ್‌ ಖರ್ಗೆ

ಮತಗಟ್ಟೆ ಮಟ್ಟದಲ್ಲಿ ಕೆಲಸ ಮಾಡಬೇಕು, ಮನೆ ಮನೆಗೂ ಹೋಗಿ ಜನರಿಗೆ ನಮ್ಮ ಕಾರ್ಯಕ್ರಮಗಳ ಬಗ್ಗೆ ತಿಳಿಸಬೇಕು
ಗೆಲ್ಲಲು ಇರುವ ಪ್ರತಿ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು, ಪ್ರಚಾರ ಹೇಗೆ ಮಾಡಬೇಕು ಎಂಬ ಸಲಹೆ ನೀಡಿದರು. ಈ ವೇಳೆ ರಾಜ್ಯದಲ್ಲಿ ಪಕ್ಷದ ನಾಯಕರು ಮಾಡಬೇಕಾದ ಪ್ರವಾಸದ ಬಗ್ಗೆ ಚರ್ಚೆ ನಡೆಯಿತು. ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಕೆಲ ಮಹತ್ವದ ವಿಚಾರಗಳನ್ನು ಪ್ರಸ್ತಾಪ ಮಾಡಿದರು.

ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪೂರ್, ಎನ್ ಎಂ ನಂಬಿ, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ, ರಾಮನಗರ ಕ್ಷೇತ್ರದ ಅಭ್ಯರ್ಥಿ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿವಿಧ ಶಾಸಕರು, ಘೋಷಿತ ಅಭ್ಯರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Exit mobile version