Site icon Vistara News

JDS Politics: ಶಾಸಕ ಎ.ಟಿ.ರಾಮಸ್ವಾಮಿ ಬಗ್ಗೆ ಗೌರವವಿದೆ, ಯಾರ ಕುರಿತು ಏನೂ ಮಾತನಾಡಲ್ಲ: ಎಚ್.ಡಿ.ರೇವಣ್ಣ

HD Revanna says I have respect for MLA A T Ramaswamy, won't say anything about anyone:

ಹಾಸನ: ಕುಮಾರಣ್ಣ, ದೇವೇಗೌಡರು ಏನು ನಿರ್ಣಯ ತೆಗೆದುಕೊಳ್ಳುತ್ತಾರೋ ಅದಕ್ಕೆಲ್ಲ ನಾವು ಬದ್ಧರಾಗಿರಬೇಕು. ದೇವೇಗೌಡರ ಕಣ್ಮುಂದೆ ಜೆಡಿಎಸ್‌ ಸರ್ಕಾರ (JDS Politics) ಅಧಿಕಾರಕ್ಕೆ ತರಬೇಕು. ನಾನು ಯಾರ ಬಗ್ಗೆಯೂ ಮಾತನಾಡಲ್ಲ. ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅವರ ಬಗ್ಗೆಯೂ ಗೌರವವಿದೆ. ಮಂಜು ಅವರು ಮಂತ್ರಿಯಾಗಿದ್ದವರು. ಭಗವಂತ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಮಾಜಿ ಸಚಿವ ಎ.ಮಂಜು ಜೆಡಿಎಸ್‌ ಸೇರ್ಪಡೆ ವಿಚಾರಕ್ಕೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯಲ್ಲಿ ಪ್ರತಿಕ್ರಿಯಿಸಿ, ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬುವುದು ಪಕ್ಷಕ್ಕೆ ಸಂಬಂಧಪಟ್ಟದ್ದು. ನಾನು ಸೋಮವಾರ ಅರಕಲಗೂಡು, ಹೊಳೆನರಸೀಪುರ, ಹಳ್ಳಿಮೈಸೂರು ಭಾಗದ ಮುಖಂಡರ ಸಭೆ ಕರೆದಿದ್ದೇನೆ. ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.

ಎರಡು ರಾಷ್ಟ್ರೀಯ ಪಕ್ಷಗಳನ್ನು ನೋಡಿದದ್ದೀರಿ, ಅವರು ಅರವತ್ತು ವರ್ಷ, ಇವರನ್ನು ಇಪ್ಪತ್ತು ವರ್ಷ ನೋಡಿದ್ದೀರಿ. ಒಂದು ಅವಕಾಶ ಕುಮಾರಸ್ವಾಮಿಗೆ ಕೊಡಿ. ಅದೇನು ಬೇಕೋ ಬಡವರ ಕೆಲಸ ಆತ ಮಾಡುತ್ತಾನೆ. 2004ರಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟ ವ್ಯಕ್ತಿ ಯಾರಾದರೂ ಇದ್ದರೆ ಅದು ಕುಮಾರಸ್ವಾಮಿ ಮಾತ್ರ, ಅವರು ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಇದನ್ನೂ ಓದಿ | ಡಿ.ಕೆ. ಶಿವಕುಮಾರ್‌ಗೆ ಎರಡು ಕುಕ್ಕರ್‌ ಮೇಲೆ ಪ್ರೀತಿ; ಒಂದು ಮಂಗಳೂರು ಇನ್ನೊಂದು ಬೆಳಗಾವಿ: ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯ

ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಪಕ್ಷ ತೊರೆಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ಪಕ್ಷ ತೊರೆಯುವ ಬಗ್ಗೆ ಶಿವಲಿಂಗೇಗೌಡರೇ ಇನ್ನೂ ಹೇಳಿಲ್ಲವಲ್ಲ. ಫೆ.12 ತಾರೀಖು ಅರಸೀಕೆರೆಯಲ್ಲಿ ಕಾರ್ಯಕರ್ತರ ಸಭೆ ಇದೆ, ಎಲ್ಲರೂ ಕುಳಿತುಕೊಂಡು ಮಾತನಾಡುತ್ತೇವೆ. ಶಿವಲಿಂಗೇಗೌಡರು ಏನು ಹೇಳುತ್ತಾರೋ ನೋಡೋಣ ಎಂದರು.

ಎ.ಮಂಜು ಜೆಡಿಎಸ್ ಸೇರ್ಪಡೆ; ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಅಸಮಾಧಾನ

ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರ್ಪಡೆ ಘೋಷಣೆ ಹಿನ್ನೆಲೆಯಲ್ಲಿ ಪಕ್ಷದ ನಾಯಕರ ವಿರುದ್ಧ ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಅದು ನಿರೀಕ್ಷಿತವಾದಂತಹ ಮಾತುಗಳು. ನಾನು ಇದನ್ನು ಬಹಳ ಹಿಂದೆಯೇ ನಿರೀಕ್ಷೆ ಮಾಡಿದ್ದೆ. ಒಟ್ಟಾರೆ ರಾಜ್ಯದಲ್ಲಿ ರಾಜಕಾರಣ ತುಂಬ ಕೆಟ್ಟು ಹೋಗಿದೆ. ನಾನು ರಾಜಕಾರಣ ಮಾಡಿಕೊಂಡು ಬಂದಿರುವುದು ನನಗಾಗಿ ಅಲ್ಲ, ಜನರಿಗಾಗಿ ಎಂದು ಅಸಮಾಧಾನ ಹೊರಹಾಕಿದರು.

ಎ.ಟಿ.ರಾಮಸ್ವಾಮಿ

ಅರಕಲಗೂಡು ಪಟ್ಟಣದಲ್ಲಿ ಮಾತನಾಡಿ, ನಾನು ಸದನದಲ್ಲಿ ಮಾತನಾಡುವಾಗ ಹೇಳಿದ್ದೆ. ನಮ್ಮ ನಾಯಕರು ಸಮಯ, ಶಕ್ತಿ ಎಲ್ಲಾ ವ್ಯರ್ಥವಾಗುತ್ತಿದೆ. ಅನವಶ್ಯಕವಾದಂತಹ ವಿಷಯಗಳಿಗೆ ಒಬ್ಬರ ಮೇಲೆ ಒಬ್ಬರು ಕೆಸರೆರಚಾಡುತ್ತಿದ್ದಾರೆ. ಅರಕಲಗೂಡು ಕ್ಷೇತ್ರದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡು ಸ್ವಾರ್ಥಕ್ಕಾಗಿ ರಾಜಕಾರಣ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿ, ಗೆದ್ದಂತಹ ಅಭ್ಯರ್ಥಿ ಮೇಲೆ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದರು. ವಿಚಾರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಆ ವಿಚಾರಣೆಯನ್ನು ತಣ್ಣಗೆ ಮಾಡಬೇಕೆಂದು ದೂರುದಾರರೇ ಸುಮ್ಮನಾದರೆ, ತಾಯಿಯೇ ಮಗುವಿಗೆ ಹಾಲು ಕೊಡದೆ ವಿಷ ಕೊಟ್ಟರೆ ಮಗು ಹೇಗೆ ಬದುಕುತ್ತದೆ. ಸತ್ಯ, ನ್ಯಾಯ, ಧರ್ಮ, ಎಲ್ಲಿ ಉಳಿಯುತ್ತದೆ. ಅಪವಿತ್ರ ಮೈತ್ರಿಗಾಗಿ, ಸ್ವಾರ್ಥಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಜನ ಇದನ್ನು ನೋಡುತ್ತಿದ್ದಾರೆ. ಬಹಳ ಕಾಲ ಅದು ಬಾಳಿಕೆಗೆ ಬರುವುದಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ | Karnataka Election: ಮಹಿಳೆಯರಿಗೆ ರಾಜಕೀಯ ಬಲು ಕಷ್ಟ; ಆ ಸೀತೆಗೂ ಅಗ್ನಿ ಪರೀಕ್ಷೆ ತಪ್ಪಲಿಲ್ಲ, ಇನ್ನು ಲಕ್ಷ್ಮಿ ಹೆಬ್ಬಾಳ್ಕರ್‌ ಯಾವ ಲೆಕ್ಕ!

ಎಚ್.ಡಿ.ರೇವಣ್ಣ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ ಅವರು, ಚರ್ಚೆ ಮಾಡಲಿಕ್ಕೆ, ಸತ್ಯ ಹೇಳಲು ಹಿಂದೆ ಮುಂದೆ ನೋಡಲ್ಲ. ಮುಂದಿನ ದಿನಗಳಲ್ಲಿ ವಿವರವಾಗಿ ಚರ್ಚೆ ಮಾಡುತ್ತೇನೆ. ಜನರ ತೀರ್ಮಾನಕ್ಕೆ ಬಿಟ್ಟಿದ್ದೇನೆ. ನಾನು ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿಲ್ಲ,‌ ಮಾಡಲ್ಲ. ಜನರಿಗೋಸ್ಕರ ರಾಜಕೀಯ ಮಾಡಿದ್ದೇನೆ, ತೀರ್ಮಾನ ಜನರಿಗೆ ಬಿಡುತ್ತೇನೆ. ರಾಜಕಾರಣದಲ್ಲಿ ಖಂಡಿತವಾಗಿಯೂ ಮುಂದುವರಿಯುತ್ತೇನೆ ಎಂದರು.

ರೇವಣ್ಣ ಅವರು ನಮ್ಮ ಮನೆಗೆ ಬಂದಿದ್ದರು. ನಾನು ದೊಡ್ಡವರ ಜತೆ ಮಾತನಾಡಿ, ಕೆಲವು ಗೊಂದಲಗಳು, ಸಮಸ್ಯೆಗಳಿವೆ ಅದನ್ನು ಬಗೆಹರಿಸಿಕೊಳ್ಳೋಣ‌ ಎಂದು ಹೇಳಿದ್ದೆ. ಜ.22 ರಂದು ದೊಡ್ಡ ಕಾರ್ಯಕ್ರಮ ಇತ್ತು, ಜ.21 ರಂದು ಏನು ಸಂಚು ನಡೆಯಿತು, ಯಾವ ರೀತಿ ಕೂಗಿದರು ಗೊತ್ತಿದೆ. ಅವರೆಲ್ಲಾ ಒಳ್ಳೆಯವರು, ನಾನು ಕೆಟ್ಟವನಲ್ಲವೇ? ಕೆಟ್ಟವನು ಒಳ್ಳೆಯವರ ಸಹವಾಸ ಮಾಡಿ ಅವರನ್ನು ಕೆಡಿಸುವುದು ಏಕೆ ಎಂದು ದೂರ ಇರಲು ನಿರ್ಧರಿಸಿದ್ದೇನೆ ಎಂದು ಪರೋಕ್ಷವಾಗಿ ಜೆಡಿಎಸ್‌ ತೊರೆಯುವ ಮುನ್ಸೂಚನೆ ನೀಡಿದ್ದಾರೆ.

Exit mobile version