Site icon Vistara News

JDS Politics : ಹಾಸನ ಟಿಕೆಟ್‌ ಈಗಾಗಲೇ ನಿರ್ಧಾರವಾಗಿದೆ ಎಂದ ದೇವೇಗೌಡ್ರು; ಭವಾನಿ ರೇವಣ್ಣ ಆಸೆಗೆ ಬಿತ್ತಾ ತಣ್ಣೀರು?

Bhavani revanna Devegowda

#image_title

ಬೆಂಗಳೂರು: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ಗೆ (JDS Politics) ಸಂಬಂಧಿಸಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಶನಿವಾರ ಮಹತ್ವದ ಸಭೆಯೊಂದನ್ನು ನಡೆಸಿದ್ದಾರೆ. ಇದರಲ್ಲಿ ಅವರು ಹಾಸನದ ಟಿಕೆಟ್‌ ಯಾರಿಗೆ ಎನ್ನುವುದು ಈಗಾಗಲೇ ಬಹುತೇಕ ನಿರ್ಧಾರ ಆಗಿದೆ, ಹೀಗಾಗಿ ಯಾರೂ ಒತ್ತಡ ಹಾಕುವುದು ಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ. ಈ ಮೂಲಕ ಅವರು ಎಚ್‌.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಅವರ ಸ್ಪರ್ಧಾಕಾಂಕ್ಷೆಗೆ ತಣ್ಣೀರು ಹಾಕಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.

ಹಾಸನದ ಸ್ಥಳೀಯ ನಾಯಕರು ಮತ್ತು ಮುಖಂಡರ ಜತೆ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದ ದೇವೇಗೌಡರು ಈ ಬಾರಿ ಸ್ಪಷ್ಟ ಧ್ವನಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದೆ. ಹಾಸನದಲ್ಲಿ ಕಾರ್ಯಕರ್ತರನ್ನು ಕೈಬಿಡುವ ಪ್ರಶ್ನೆ ಇಲ್ಲ ಎನ್ನುವ ಮಾತಿನ ಮೂಲಕ ಟಿಕೆಟ್‌ ಎಚ್‌.ಪಿ ಸ್ವರೂಪ್‌ಗೆ ಒಂದು ಸೂಚ್ಯವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಹಾಸನ ವಿಧಾನಸಭಾ ಟಿಕೆಟ್‌ಗೆ ತನಗೆ ನೀಡಬೇಕು ಎಂದು ಭವಾನಿ ರೇವಣ್ಣ ಅವರು ಹಠ ಹಿಡಿದಿದ್ದು, ಇದಕ್ಕೆ ರೇವಣ್ಣ ಅವರು ಒತ್ತಾಸೆಯಾಗಿ ನಿಂತಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕುಟುಂಬದವರು ಬೇಡ, ಕಾರ್ಯಕರ್ತರಿಗೆ ನೀಡೋಣ ಎಂಬ ಅಭಿಪ್ರಾಯ ಹೊಂದಿದ್ದಾರೆ. ಮೊದಲಿನಿಂದಲೂ ಹಾಸನದಲ್ಲಿ ಕುಟುಂಬದ ಸದಸ್ಯರು ನಿಲ್ಲುವ ಅನಿವಾರ್ಯತೆ ಇಲ್ಲ, ಗೆಲ್ಲಬಲ್ಲ ಅಭ್ಯರ್ಥಿಗಳಿದ್ದಾರೆ ಎಂದು ಸೂಚ್ಯವಾಗಿ ಎಚ್.ಪಿ. ಸ್ವರೂಪ್‌ ಅವರ ಹೆಸರನ್ನು ಉಲ್ಲೇಖಿಸಿದ್ದರು.

ಆದರೆ, ಎಚ್‌.ಡಿ ರೇವಣ್ಣ ಕುಟುಂಬ ಟಿಕೆಟ್‌ ಕೊಡಲೇಬೇಕು ಎನ್ನುವ ಹಠದಲ್ಲಿತ್ತು. ಟಿಕೆಟ್‌ ಕೊಡದಿದ್ದರೆ ಬಂಡಾಯವಾಗಿ ನಿಲ್ಲುವ ಮಾತುಗಳೂ ಕೇಳಿಬಂದಿದ್ದವು. ಶುಕ್ರವಾರವೂ ಎಚ್‌.ಡಿ ರೇವಣ್ಣ, ಭವಾನಿ ರೇವಣ್ಣ ಮತ್ತು ಸಂಸದ ಪ್ರಜ್ವಲ್‌ ರೇವಣ್ಣ ಅವರು ದೇವೇಗೌಡರ ಜತೆ ಮಾತುಕತೆ ನಡೆಸಿದ್ದರು. ಇದೀಗ ದೇವೇಗೌಡರು ಶನಿವಾರ ಹಾಸನದ ನಾಯಕರ ಜತೆ ಮಾತನಾಡಿದ್ದಾರೆ ಮತ್ತು ಈ ಸಭೆಯಲ್ಲಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಮುಖಂಡರ ಜತೆ ಮಾತನಾಡುವ ವೇಳೆ, ʻʻಯಾರು ಹಾಸನ ಟಿಕೆಟ್ ಬಗ್ಗೆ ಒತ್ತಡ ಹಾಕೋದು ಬೇಡ. ಈಗಾಗಲೇ ಯಾರಿಗೆ ಟಿಕೆಟ್ ಎಂದು ಬಹುತೇಕ ನಿರ್ಧಾರವಾಗಿದೆ. ಹಾಸನದಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ಸಿಗಲಿದೆ. ಕಾರ್ಯಕರ್ತರ ಕೈ ಬಿಡುವ ಪ್ರಶ್ನೆಯೇ ಇಲ್ಲʼʼ ಎಂದು ಹೇಳಿದರೆನ್ನಲಾಗಿದೆ.

ʻʻಯಾರಿಗೆ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡಬೇಕುʼʼ ಎಂದು ದೇವೇಗೌಡ ಅವರು ಸೂಚನೆ ನೀಡಿದರೆನ್ನಲಾಗಿದೆ. ʻʻಹಾಸನದ ಪರಿಸ್ಥಿತಿ ನನಗೆ ನನಗೆ ಗೊತ್ತಿದೆ. ಅನಿವಾರ್ಯವಾದರೆ ನಾನೇ ಹಾಸನದಲ್ಲಿ ಬಂದು ಪ್ರಚಾರ ಮಾಡುತ್ತೇನೆʼʼ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕುಟುಂಬದಿಂದ ಯಾರು ಸ್ಪರ್ಧೆ ಇಲ್ಲ ಎಂದು ಮುಖಂಡರಿಗೆ ತಿಳಿಸಿದರೆನ್ನಲಾಗಿದೆ.

ರೇವಣ್ಣ ಕುಟುಂಬದ ಮುಂದಿನ ನಿಲುವೇನು?

ದೇವೇಗೌಡರು ಕೂಡಾ ಎಚ್‌.ಡಿ ಕುಮಾರಸ್ವಾಮಿ ಅವರದೇ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಹಾಸನದ ಪರಿಸ್ಥಿತಿ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಾಗಿದೆ. ಅದಕ್ಕಿಂತಲೂ ಹೆಚ್ಚಾಗಿ ರೇವಣ್ಣ ಕುಟುಂಬದ ಮುಂದಿನ ನಿರ್ಧಾರ ಏನಾಗಿರುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ : JDS Politics : ಯಾವ ಬಂಡಾಯಕ್ಕೂ ಸೊಪ್ಪು ಹಾಕಲ್ಲ, ಹಾಸನದಲ್ಲಿ ನಾನು ಹೇಳಿದವನೇ ಅಭ್ಯರ್ಥಿ, ನಾಳೆ ಬೆಳಗ್ಗೆ 2ನೇ ಪಟ್ಟಿ: ಎಚ್‌ಡಿಕೆ

Exit mobile version