ಬೆಂಗಳೂರು: ಹಾಸನ ಜಿಲ್ಲೆಯ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಅರಕಲಗೂಡಿನ ಶಾಸಕ ಎ.ಟಿ ರಾಮಸ್ವಾಮಿ ಜೆಡಿಎಸ್ (JDS Politics) ತೊರೆಯಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಅರಕಲಗೂಡು ಅಭ್ಯರ್ಥಿಯಾಗಿ ಮಾಜಿ ಸಚಿವ ಎ.ಮಂಜು ಹೆಸರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಜತೆಗೆ ಅರಸೀಕೆರೆಯಲ್ಲೂ ಸೂಕ್ತ ಅಭ್ಯರ್ಥಿ ಇದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಕೆ.ಎಂ.ಶಿವಲಿಂಗೇಗೌಡ ಹಾಗೂ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್ ತೊರೆಯುವುದು ಬಹುತೇಕ ಖಚಿತವಾಗಿದೆ.
ಕೆಲ ದಿನಗಳಿಂದ ಜೆಡಿಎಸ್ ಪಕ್ಷದಿಂದ ಶಿವಲಿಂಗೇಗೌಡ ಹಾಗೂ ಎ.ಟಿ. ರಾಮಸ್ವಾಮಿ ಅಂತರ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಬೇರೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಬಗ್ಗೆ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಪ್ರಸ್ತಾಪಿಸಿದ್ದಾರೆ. ಅರಕಲಗೂಡಿನಲ್ಲಿ ಎ.ಮಂಜು ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಘೋಷಿಸಿರುವ ಮಾಜಿ ಸಿಎಂ, ಈಗಾಗಲೇ ಮಂಜು ಅವರ ಜತೆ ಎಲ್ಲ ಚರ್ಚೆ ನಡೆದಿದೆ. ಎಲ್ಲವೂ ಕ್ಲಿಯರ್ ಆಗಿದೆ. ಇನ್ನು ಅರಸಿಕೆರೆಯಲ್ಲಿ ಶಿವಲಿಂಗೇಗೌಡರನ್ನು ಹೊರತುಪಡಿಸಿ ಬೇರೆ ಅಭ್ಯರ್ಥಿಗಳಿದ್ದಾರೆ. ಅಭ್ಯರ್ಥಿಗಳ ಕೊರತೆಯಿಲ್ಲ ಎಂದು ಹೇಳುವ ಮೂಲಕ ಕಗ್ಗಂಟಾಗಿದ್ದ ಅಭ್ಯರ್ಥಿಗಳ ಆಯ್ಕೆಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಕೆ.ಆರ್.ಪೇಟೆಯಲ್ಲಿ ರೇವಣ್ಣ ಸ್ಪರ್ಧೆ ವಿಚಾರಕ್ಕೆ ಉತ್ತರಿಸಿ, ಆ ರೀತಿಯ ಯಾವುದೇ ಚರ್ಚೆಗಳು ಪಕ್ಷದ ವಲಯದಲ್ಲಿ ಆಗಿಲ್ಲ ಎಂದ ಅವರು, ಶಿವಲಿಂಗೇಗೌಡರು, ಎ.ಟಿ. ರಾಮಸ್ವಾಮಿ ಪಕ್ಷ ಬಿಡುವ ವಿಷಯದಲ್ಲಿ ಈಗ ಯಾವುದೇ ಗುಟ್ಟುಗಳಿಲ್ಲ. ಅವರಿಬ್ಬರೂ ನಮ್ಮ ಪಕ್ಷದ ಯಾವುದೇ ಸಭೆಗೆ ಬಂದಿಲ್ಲ, ಪಕ್ಷದಿಂದ ದೂರ ಇದ್ದಾರೆ. ನಾನು ಈಗಾಗಲೇ ಎ.ಮಂಜು ಅವರ ಜತೆ ಮಾತನಾಡಿದ್ದೇನೆ. ಎ. ಮಂಜು ಅವರು ಪಕ್ಷಕ್ಕೆ ಬರಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | BJP Karnataka: ಈ ಸಾರಿ ಜೆಡಿಎಸ್ ಜತೆ ಬಿಲ್ಕುಲ್ ಒಳ ಒಪ್ಪಂದ ಇಲ್ಲ; ಪಕ್ಕಾ ಫೈಟ್: ಬಿಜೆಪಿ ಪಾಳೆಯದಲ್ಲಿ ಖಡಕ್ ಮಾತು
ಒಟ್ಟು 3 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಿಸಿರುವ ಕುಮಾರಸ್ವಾಮಿ ಅವರು, ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಶಿವಾನಂದ ಪಾಟೀಲ್ ಸೋಮಜಾಳ ಅವರ ಪತ್ನಿ ವಿಶಾಲಾಕ್ಷಿ, ಚಿತ್ತಾಪುರ ಕ್ಷೇತ್ರಕ್ಕೆ ಸುಭಾಷ್ ಚಂದ್ರ ರಾಥೋಡ್ ಹಾಗೂ ಅರಕಲಗೂಡು ಕ್ಷೇತ್ರಕ್ಕೆ ಬಿಜೆಪಿಯಲ್ಲಿದ್ದ ಮಾಜಿ ಸಚಿವ ಎ. ಮಂಜುಗೆ ಟಿಕೆಟ್ ಘೋಷಿಸಿದ್ದಾರೆ.
ಹಾಸನ ಟಿಕೆಟ್ ಕಗ್ಗಂಟು ವಿಚಾರಕ್ಕೆ ಪ್ರತಿಕ್ರಿಯಿಸಿ, ಒಂದೆರೆಡು ದಿನಗಳಲ್ಲಿ ನಮ್ಮ ಕುಟುಂಬದವರು ಕುಳಿತು ಚರ್ಚೆ ಮಾಡುತ್ತೇವೆ. ದೇವೇಗೌಡರ ಹೆಸರನ್ನು ತರುವುದು ಬೇಡ. ದೇವೇಗೌಡರು ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರು.
ಕುಟುಂಬ ರಾಜಕೀಯ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅನಿವಾರ್ಯತೆ ಇದ್ದಾಗ ಕುಟುಂಬದಿಂದ ಅಭ್ಯರ್ಥಿಯನ್ನು ಮಾಡಿದ್ದೇವೆ. ರಾಮನಗರ, ಚನ್ನಪಟ್ಟಣದಲ್ಲಿ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ನಾನು ಎರಡು ಕಡೆ ಸ್ಪರ್ಧಿಸಿದ್ದೆ. ಕೊನೇ ಘಳಿಗೆಯಲ್ಲಿ ಮಧುಗಿರಿಗೆ ಅನಿತಾ ಹೋದರು. ಪಕ್ಷ ಉಳಿಸಲು ಅನಿತಾ ಸ್ಪರ್ಧಿಸಿದರು. ಸೋತಾಗ ಕುಗ್ಗಿಲ್ಲ, ಗೆದ್ದಾಗ ಹಿಗ್ಗಿಲ್ಲ. ಕುಟುಂಬ ರಾಜಕೀಯದ ಬಗ್ಗೆ ಯಾವುದೇ ಪಕ್ಷದ ನಾಯಕರಿಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಜೆಡಿಎಸ್ ಅಸ್ತಿತ್ವ ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತ ಎಂಬ ವಿಪಕ್ಷಗಳ ಮಾತಿಗೆ ಉತ್ತರಿಸಿದ ಅವರು, ರಾಜ್ಯದ 61 ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿದ್ದೇವೆ. 6700 ಕಿ.ಮೀ. ರಥಯಾತ್ರೆ ಮುಗಿಸಿದ್ದೇವೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಆ ಭಾಗದವರಿಗೆ ರಾಷ್ಟ್ರೀಯ ಪಕ್ಷಗಳ ಬಗ್ಗೆ ಭ್ರಮನಿರಸನವಾಗಿದೆ. ಕುಮಾರಣ್ಣನವರೇ ಅಭ್ಯರ್ಥಿ ಘೋಷಣೆ ಮಾಡಿ, ನಾವು ನಿಮ್ಮ ಋಣದಲ್ಲಿದ್ದೇವೆ, ನಿಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಜನ ಹೇಳಿದ್ದನ್ನು ಕೇಳಿದ್ದೇವೆ. ನಮ್ಮ ಪಕ್ಷದ ಗುರಿ 123. ರಾಜ್ಯ ಘಟಕದ ಅಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಗುರಿ ಮುಟ್ಟುತ್ತೇವೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಮೀಕ್ಷೆ ರಿಪೋರ್ಟ್ ನನಗೆ ಆತಂಕ ಉಂಟು ಮಾಡುವುದಿಲ್ಲ. ನನಗೆ ಜನರ ನಾಡಿಮಿಡಿತ ಅರ್ಥವಾಗಿದೆ, ನನ್ನ ವಿಶ್ವಾಸ ದುಪ್ಪಾಟ್ಟಾಗಿದೆ. ಇಂದಿನ ಸಭೆಯಲ್ಲಿ ಅಭ್ಯರ್ಥಿಗಳಿಗೆ ಟಾಸ್ಕ್ ಕೊಡುವ ಕೆಲಸ ಮಾಡಿದ್ದೇವೆ. ಮನೆ ಮನೆಗೆ ಪಂಚರತ್ನ ಕರಪತ್ರ ಹಂಚುವ ಕೆಲಸ ಮಾಡಬೇಕು. ಪ್ರತಿ ಹಳ್ಳಿಯಲ್ಲಿ 100 ಅಭಿಮಾನಿಗಳನ್ನು ಗುರುತಿಸಿ ಅವರ ಮನೆ ಮುಂದೆ ಪಕ್ಷದ ಚಿಹ್ನೆ ಹಾಕಬೇಕಾಗಿ ಹೇಳಿದ್ದೇವೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಭ್ಯರ್ಥಿಗಳು ಗ್ರಾಮ ವಾಸ್ತವ್ಯ ಮಾಡಬೇಕು ಎಂದು ಸೂಚಿಸಿರುವುದಾಗಿ ಹೇಳಿದರು.
ಈ ಬಾರಿ ಉತ್ತರ ಕರ್ನಾಟಕ ಭಾಗ, ಕಲ್ಯಾಣ ಕರ್ನಾಟಕದಲ್ಲಿ ಕನಿಷ್ಠ 40 ರಿಂದ 45 ಸ್ಥಾನಗಳನ್ನು ಜೆಡಿಎಸ್‌ಗೆ ಕೊಡಲು ಜನ ತೀರ್ಮಾನ ಮಾಡಿದ್ದಾರೆ. ಸರ್ಕಾರ ಕಲ್ಯಾಣ ಕರ್ನಾಟಕ ಅಂತ ಏನೋ ಹೆಸರಿಟ್ಟಿದೆ, ಆದರೆ ಎಷ್ಟು ಕಲ್ಯಾಣ ಆಗಿದೆ ಎಂಬುವುದನ್ನು ನೋಡಬೇಕು. ಪಂಚರತ್ನ ಕಾರ್ಯಕ್ರಮ ಆ ಮನೆಗಳಿಗೆ ತಲುಪಿದೆ ಎಂದರು.
ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ 6-7 ಅಭ್ಯರ್ಥಿಗಳ ಬದಲಾವಣೆ ಸುಳಿವು
ಬೆಂಗಳೂರು: ಚುನಾವಣೆಗೆ ಕೇವಲ ಇನ್ನೆರಡು ತಿಂಗಳು ಮಾತ್ರ ಇದ್ದು, ಯಾವಾಗ ಬೇಕಾದರೂ ಚುನಾವಣೆ ದಿನಾಂಕ ಪ್ರಕಟ ಆಗಬಹುದು. ಆದ್ದರಿಂದ ಎಲ್ಲ ಘೋಷಿತ ಅಭ್ಯರ್ಥಿಗಳು ವೇಗವಾಗಿ ಜನರನ್ನು ತಲುಪುವ ಕೆಲಸ ಮಾಡಬೇಕು. ಯಾರಾದರೂ ಉದಾಸೀನ ಮಾಡಿದರೆ ಅಂತಹ ಅಭ್ಯರ್ಥಿಗಳನ್ನು ಮುಲಾಜಿಲ್ಲದೆ ಬದಲಾವಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ನಗರದ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಮೊದಲ ಪಟ್ಟಿಯಲ್ಲಿರುವ 93 ಅಭ್ಯರ್ಥಿಗಳ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಮಾತನಾಡಿದರು.
ಕೆಲ ಅಭ್ಯರ್ಥಿಗಳ ಬಗ್ಗೆ ಅತೃಪ್ತಿ
ಸುಮ್ಮನೆ ಮನೆಯಲ್ಲಿ ಕೂತು ಗೆಲ್ಲಬೇಕು ಎಂದರೆ ಗೆಲ್ಲಲು ಸಾಧ್ಯ ಇಲ್ಲ. ಕೆಲ ಕ್ಷೇತ್ರಗಳಲ್ಲಿ ನಾವು ಹಾಕಿರುವ ಅಭ್ಯರ್ಥಿಗಳು ಹಾಗೂ ಆಯಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಗೆ ಸಿಕ್ಕಿರುವ ಸ್ಪಂದನೆ ಬಿಜೆಪಿ ಕಾಂಗ್ರೆಸ್ ಪ್ರಮುಖ ದಿಗ್ಗಜ ನಾಯಕರ ನಿದ್ದೆಗೆಡುವಂತೆ ಮಾಡಿದೆ. ಕೆಲಸ ಮಾಡದ, ವೇಗವಾಗಿ ಮುನ್ನಡೆಯದ ಅಭ್ಯರ್ಥಿಗಳನ್ನು ಮುಲಾಜಿಲ್ಲದೆ ಬದಲಾಯಿಸುತ್ತೇನೆ. ಆರೇಳು ಕ್ಷೇತ್ರಗಳಲ್ಲಿ ಘೋಷಿತ ಅಭ್ಯರ್ಥಿಗಳ ವೇಗ ನನಗೆ ತೃಪ್ತಿ ನೀಡಿಲ್ಲ. ಅವರನ್ನು ಬದಲಾವಣೆ ಮಾಡಲಾಗುವುದು ಎಂದು ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೇಳಿದರು.
ಪ್ರತಿ ಕ್ಷೇತ್ರವೂ ನನಗೆ ಮುಖ್ಯ, ನಾನು ಕಠಿಣ ನಿರ್ಧಾರ ಕೈಗೊಳ್ಳುವ ಬಗ್ಗೆ ಹಿಂದೆ ಸರಿಯುವುದಿಲ್ಲ. ಮುಲಾಜಿಲ್ಲದೆ ಕಠಿಣ ನಿರ್ಧಾರ ಕೈಗೊಳ್ಳುವ ಅವಕಾಶ ನನ್ನ ಮುಂದೆ ಮುಕ್ತವಾಗಿದೆ. ಕೆಲವರು ಬಹಳ ಉತ್ತವಾಗಿ ಕೆಲಸ ಮಾಡುತ್ತಿದ್ದಾರೆ, ನನಗೆ ಖುಷಿ ಇದೆ, ಕೆಲವರು ಉಪಯೋಗ ಇಲ್ಲ ಎಂದರು.
ಜಿಲ್ಲಾಧ್ಯಕ್ಷರಿಗೆ ಚುರುಕು ಮುಟ್ಟಿಸಿದ ಮಾಜಿ ಸಿಎಂ
ಕೆಲ ಜಿಲ್ಲೆಗಳಲ್ಲಿ ಎಂಟ್ಹತ್ತು ವರ್ಷಗಳಿಂದ ಅಧ್ಯಕ್ಷರಾದವರು ಇದ್ದಾರೆ, ಆದರೆ, ಒಬ್ಬ ಸೂಕ್ತ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗದಿದ್ದರೆ ಹೇಗೆ? ಇನ್ನು ಯಾವ ಸೀಮೆಯ ಅಧ್ಯಕ್ಷಗಿರಿ ನಿಮ್ಮದು? ಇದನ್ನು ಸಹಿಸುವ ಪ್ರಶ್ನೆ ಇಲ್ಲ. ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳ ಗೆಲುವಿಗೆ ಜಿಲ್ಲಾಧ್ಯಕ್ಷರು, ಜಿಲ್ಲೆಗಳ ಎಲ್ಲ ಮುಖಂಡರು ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪಕ್ಷದ ನಿರ್ಣಯವನ್ನು ಎಲ್ಲರೂ ಗೌರವಿಸಬೇಕು, ಅಶಿಸ್ತನ್ನು ಸಹಿಸಲ್ಲ ಎಂದು ನೇರ ಮಾತುಗಳಲ್ಲಿ ಎಚ್‌ಡಿಕೆ ಹೇಳಿದರು.
ಇದನ್ನೂ ಓದಿ | BJP Executive : ಕಾಂಗ್ರೆಸ್‌ನದು ಬೀದಿಜಗಳ, ಜೆಡಿಎಸ್ ಒಳಜಗಳ, ನಮ್ಮ ಗೆಲುವು ಅಚಲ ಎಂದ ನಳಿನ್ ಕುಮಾರ್ ಕಟೀಲ್
ಮತಗಟ್ಟೆ ಮಟ್ಟದಲ್ಲಿ ಕೆಲಸ ಮಾಡಬೇಕು, ಮನೆ ಮನೆಗೂ ಹೋಗಿ ಜನರಿಗೆ ನಮ್ಮ ಕಾರ್ಯಕ್ರಮಗಳ ಬಗ್ಗೆ ತಿಳಿಸಬೇಕು. ಗೆಲ್ಲಲು ಇರುವ ಪ್ರತಿ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು, ಪ್ರಚಾರ ಹೇಗೆ ಮಾಡಬೇಕು ಎಂಬ ಬಗ್ಗೆ ಅಭ್ಯರ್ಥಿಗಳಿಗೆ ಟಿಪ್ಸ್ ನೀಡಿದರು. ಅಲ್ಲದೆ, ರಾಜ್ಯದಲ್ಲಿ ಪಕ್ಷದ ನಾಯಕರು ಮಾಡಬೇಕಾದ ಪ್ರವಾಸದ ಬಗ್ಗೆ ಚರ್ಚೆ ನಡೆಯಿತು. ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಕೆಲ ಮಹತ್ವದ ವಿಚಾರಗಳನ್ನು ಪ್ರಸ್ತಾಪ ಮಾಡಿದರು.
ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪೂರ್, ಎನ್.ಎಂ.ನಂಬಿ, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ, ರಾಮನಗರ ಕ್ಷೇತ್ರದ ಅಭ್ಯರ್ಥಿ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿ ವಿವಿಧ ಶಾಸಕರು, ಘೋಷಿತ ಅಭ್ಯರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.