Site icon Vistara News

JDS Politics: ಅರಸೀಕೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವವರೆಗೂ ನಾನು ನಿದ್ದೆ ಮಾಡಲ್ಲ: ಸಂಸದ ಪ್ರಜ್ವಲ್‌ ರೇವಣ್ಣ

Hassan Pen Drive Case

ಹಾಸನ: ಅರಸೀಕೆರೆಯಲ್ಲಿ ಯಾರನ್ನೇ ಅಭ್ಯರ್ಥಿ ಮಾಡಲಿ, ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿ ಗೆಲ್ಲಿಸುತ್ತೇವೆ. ಮನೆಯ ಮಗನಾಗಿ ನಿಮ್ಮ ಜತೆ ದುಡಿಯುತ್ತೇನೆ. ನಾನು, ಸೂರಜ್ ಎರಡು ದಿನ ಅರಸೀಕೆರೆಯಲ್ಲಿ ಇರುತ್ತೇವೆ. ಕ್ಷೇತ್ರದಲ್ಲಿ ಜೆಡಿಎಸ್ (JDS Politics) ಅಭ್ಯರ್ಥಿ ಗೆಲ್ಲುವವರೆಗೂ ನಾನು ನಿದ್ದೆ ಮಾಡಲ್ಲ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ಜಿಲ್ಲೆಯ ಅರಸೀಕೆರೆಯಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ವಾರದಿಂದ ಸಮಾವೇಶಕ್ಕೆ ನಮ್ಮ ಕಾರ್ಯಕರ್ತರನ್ನು ಹೋಗಬೇಡಿ ಎಂದು ಕೆಲವು ಶಕ್ತಿಗಳು ತಡೆಯುವ ಪ್ರಯತ್ನ ಮಾಡಿದವು. ನಗರ್ತಿಯಲ್ಲಿ ಕುಮಾರಣ್ಣನಿಗೆ ದೇವರ ಆಶೀರ್ವಾದ ಸಿಕ್ಕಿದೆ. ಏನೇ ಆಗಲಿ ಅರಸೀಕೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದರು.

ಕುಮಾರಣ್ಣನ ದಯೆಯಿಂದ‌ ಅರಸೀಕೆರೆಗೆ ಸಾಕಷ್ಟು ಹಣ ಬಂದಿದೆ

ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ಇದು ಸ್ವಾಭಿಮಾನಿ ಕಾರ್ಯಕರ್ತರ ಸಭೆ. ಅರಸೀಕೆರೆಯು ದೇವೇಗೌಡರಿಗೆ ಕಳೆದ ನಲವತ್ತು ವರ್ಷದಿಂದ ರಾಜಕೀಯ ಶಕ್ತಿ ಕೊಟ್ಟ ಕ್ಷೇತ್ರವಾಗಿದೆ. ಈ ಕ್ಷೇತ್ರ ಅಭಿವೃದ್ಧಿ ಆಗಿದ್ದರೆ ಅದು ಕುಮಾರಸ್ವಾಮಿ ಕಾಣಿಕೆ. ಎರಡು ಬಾರಿ ಸಿಎಂ ಆದಾಗ ಅರಸೀಕೆರೆಗೆ ಸಾಕಷ್ಟು ಅನುದಾನ, ಯೋಜನೆ ಕೊಟ್ಟಿದ್ದಾರೆ. ಬಾಣಾವರ, ಅರಸೀಕೆರೆಗೆ ಕಾಲೇಜು, ಗಂಡಸಿ, ಬಾಣಾವರ, ಅರಸೀಕೆರೆ ಕೆಇಬಿ ಡಿವಿಷನ್, ಸಬ್ ಡಿವಿಷನ್ ಸ್ಟೇಷನ್ ಕೊಟ್ಟಿದ್ದಾರೆ. ಅರಸೀಕೆರೆ ಕ್ಷೇತ್ರದ 28 ಸಾವಿರ ಜನರ ಸಾಲಮನ್ನಾ ಮಾಡಿದ್ದಾರೆ. ಎಂಜಿನಿಯರಿಂಗ್ ಕಾಲೇಜು ಕೊಟ್ಟಿದ್ದಾರೆ. ಕುಮಾರಣ್ಣನ ದಯೆಯಿಂದ‌ ಅರಸೀಕೆರೆಗೆ ಸಾಕಷ್ಟು ಹಣ ಬಂದಿದೆ. ಕೊಟ್ಟ ಮಾತಿನಂತೆ ನಡೆದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿಯಾಗಿದ್ದಾರೆ ಎಂದರು.

ಇದನ್ನೂ ಓದಿ | JDS Politics: ಕೆಂಪು ಗುಲಾಬಿ ಪ್ರಸಾದ ಆಗಿದೆ; ಅರಕಲಗೂಡು ಗೆದ್ದರೆ ಜೆಡಿಎಸ್‌ ಅಧಿಕಾರಕ್ಕೆ: ಎಚ್‌.ಡಿ. ರೇವಣ್ಣ ಪುತ್ರರಿಬ್ಬರ ಭವಿಷ್ಯವಾಣಿ

18 ವರ್ಷಗಳ ಕಾಲ ಸೋತಂತಹ ಸಂದರ್ಭದಲ್ಲಿ ಶಿವಲಿಂಗೇಗೌಡರಿಗೆ ಆಸರೆಯಾಗಿದ್ದು ಜೆಡಿಎಸ್. ನಮ್ಮ ತಂದೆ ಈ ಪಕ್ಷ, ರಾಜ್ಯಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಆದರೆ ಅವರಿಗೆ ಆರೋಗ್ಯ ಸರಿಯಿಲ್ಲದಿದ್ದಾಗ ಅವರನ್ನು ನೋಡುವಂತಹ ಸೌಜನ್ಯ ಇಲ್ಲ ಎಂದರೆ ಏನು ಹೇಳಬೇಕು. ನಮಗೆ ಮೋಸ‌ ಮಾಡಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಹೋಗುವುದಿಲ್ಲ. ಆತನಿಗೆ ಭಗವಂತ ಒಳ್ಳೆಯದು ಮಾಡಲಿ ಎಂದು ಕಿಡಿಕಾರಿದರು.

ಶಾಸಕ ಬಂಡೆಪ್ಪ ಕಾಶಂಪೂರ್ ಮಾತನಾಡಿ, ರಾಜ್ಯದಲ್ಲಿ ಲೀಡರ್ ಫ್ಯಾಕ್ಟರಿ ಎಂದರೆ ಅದು ದೇವೇಗೌಡರ ಕುಟುಂಬ. ದೇವೇಗೌಡರು ಕುಗ್ಗೋದು ಬೇಡ ಎಂದು ಇಂದಿನ ಸಮಾವೇಶ ತೋರಿಸಿಕೊಟ್ಟಿದೆ. ನಮ್ಮ ಪಂಚರತ್ನ ಯಾತ್ರೆ ಅದ್ಭುತ ಯಶಸ್ಸು ಕಾಣುತ್ತಿದೆ. ಈ ಕ್ಷೇತ್ರಕ್ಕೆ ಯಾರೇ ಬರಲಿ ಗೆಲ್ಲುವುದು ಜೆಡಿಎಸ್. ಮುಂದಿನ ದಿನದಲ್ಲಿ ಕುಮಾರಸ್ವಾಮಿ ಸಿಎಂ ಆಗುವುದು ಗ್ಯಾರಂಟಿ. ಅವರ ಪಕ್ಕದಲ್ಲಿ ಕುಳಿತು ನಾವು ಆಡಳಿತ ಮಾಡುತ್ತೇವೆ ಎಂದರು.

Exit mobile version