ಹಾಸನ: ಅರಸೀಕೆರೆ ಕ್ಷೇತ್ರದಲ್ಲಿ ನಿರಾಯಾಸವಾಗಿ ಮೂರು ಬಾರಿ ಗೆದ್ದಿದ್ದೇನೆ. ಈ ಬಾರಿ ಒಂದು ಕ್ಷೇತ್ರ ಹೋಗುತ್ತದೆ ಎಂದು ಪಾಪದವನು ಸಿಕ್ಕಿದ್ದೇನೆ ಎಂದು ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನ ಪಾಡಿಗೆ ನಾನಿರುತ್ತೇನೆ, ನಿಮ್ಮ ಪಾಡಿಗೆ ನೀವಿರಿ. ನಾನು ಏನೂ ಮಾತನಾಡುವುದಿಲ್ಲ, ನೀವೂ ಮಾತನಾಡಬೇಡಿ. ಕುಣಿಯಲಾರದವಳು ನೆಲ ಡೊಂಕು ಅಂದಳಂತೆ, ಅವರೇನಾದರೂ ನನ್ನ ಬಗ್ಗೆ ಮಾತನಾಡಿದರೆ ಅವರ ಬಂಡವಾಳ ಬಿಚ್ಚಬೇಕಾಗುತ್ತದೆ ಎಂದು ದಳಪತಿಗಳಿಗೆ (JDS Politics) ಶಾಸಕ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಅರಸೀಕೆರೆ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಅಶೋಕ್ ಬಾಣಾವರ ಹೆಸರು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶಕ್ಕೆ ಗೈರಾಗಿದ್ದರಿಂದ ಕುಮಾರಣ್ಣ, ಇಬ್ರಾಹಿಂ ಟೀಕಾ ಪ್ರಹಾರ ಮಾಡಿದ್ದಾರೆ. ಅರಸೀಕೆರೆ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಕ್ಷೇತ್ರದ ಜನರ ಸಭೆ ಕರೆದು ಚರ್ಚಿಸಿ, ನನ್ನ ಮುಂದಿನ ರಾಜಕೀಯ ನಡೆ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ | JDS Politics: ಕಾಂಗ್ರೆಸ್ ಕಡೆ ಹೊರಟ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಅಶೋಕ್ ಬಾಣಾವರ JDS ಅಭ್ಯರ್ಥಿ: ಎಚ್.ಡಿ. ಕುಮಾರಸ್ವಾಮಿ ಘೋಷಣೆ
ಗುತ್ತಿಗೆದಾರನಾಗಿದ್ದಾಗ ಸಹಾಯ ಮಾಡಿದ್ದೆ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗುವ ಮುಂಚೆ ಗುತ್ತಿಗೆದಾರನಾಗಿದ್ದೆ. ನನ್ನ ಹತ್ತಿರ ಹಣ ಇಲ್ಲದದಿದ್ದಾಗ 14 ಮತದಲ್ಲಿ ಸೋತೆ. ನನಗೆ ಅಂದು ಪಕ್ಷದಿಂದ ಕೇವಲ 5 ಲಕ್ಷ ರೂಪಾಯಿ ಸಹಾಯ ಮಾಡಿದ್ದರು. ಒಟ್ಟಾರೆಯಾಗಿ ನನ್ನ ಸ್ನೇಹಿತರು ಎಲೆಕ್ಷನ್‌ಗೆ ಖರ್ಚು ಮಾಡಿದ್ದು ಬಹಳ ಕಡಿಮೆ. ದಾಬಸ್‌ಪೇಟೆ, ರಾಮನಗರ ಸೇರಿ ರಾಜ್ಯದ ಎಲ್ಲಾ ಕಡೆ ಗುತ್ತಿಗೆ ಕೆಲಸ ಮಾಡಿದ್ದೇನೆ. ಅದರಲ್ಲಿ ಯಾರ ಹಂಗೇನಿಲ್ಲ, ಗುತ್ತಿಗೆದಾರನಾಗಿದ್ದಾಗ ಸಹಾಯ ಮಾಡಿದ ವಿಷಯ ಈಗ ಏಕೆ ಎಂದರು.
ಕಾಂಗ್ರೆಸ್ ಸೇರುತ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸ್ಪಂದಿಸಿ, ಸಿದ್ದರಾಮಯ್ಯ ಅವರು ಹೇಳಿರಬಹುದು, ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಇಷ್ಟೆಲ್ಲ ಆದಮೇಲೆ ಪಕ್ಷ ಬಿಡಬಹುದು ಎಂದು ಸ್ವಾಗತ ಮಾಡಿರಬಹುದು ಎಂದರು. ದೇವೇಗೌಡರನ್ನು ಎರಡು ದಿನ ನೋಡಲು ಹೋಗಿದ್ದೆ. ಅವರು ಫಿಜಿಯೋಥೆರಪಿ ಚಿಕಿತ್ಸೆಗೆ ಹೋಗಿದ್ದರಿಂದ ಭೇಟಿಯಾಗಲು ಸಾಧ್ಯವಾಗಲಿಲ್ಲ. ನಂತರ ಫೋನ್‌ನಲ್ಲಿ ಮಾತನಾಡಿದ್ದರು. ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಬೇಜಾರಾಯಿತು ಎಂದಿದ್ದೆ. ಬಳಿಕ ಎರಡು ಮೂರು ಸಾರಿ ಪ್ರಯತ್ನ ಮಾಡಿದರೂ ಅವರನ್ನು ನೇರವಾಗಿ ಭೇಟಿಯಾಗಲು ಆಗಲಿಲ್ಲ ಎಂದು ತಿಳಿಸಿದರು.
ಎಂಎಲ್‌ಸಿ ಚುನಾವಣೆ ನಡೆದು ಎಷ್ಟು ತಿಂಗಳು ಆಯಿತು? ವೋಟು ಹಾಕಲು ಗೊತ್ತಾಗದೆ ಇನ್‌ವ್ಯಾಲಿಡ್ ಆಗುತ್ತದೆ ಎಂದು ಅವರ ಮಗನನ್ನು ಕರೆಸಿ ವೋಟು ಹೊತ್ತಿಸಿ ಬೂತ್ ಸೀಜ್ ಮಾಡಿ ಅವರ ಮಗನಿಗೆ ಕೊಟ್ಟೆ. ರಾಜ್ಯಸಭೆ ಚುನಾವಣೆಯಲ್ಲಿ ಕುಪೆಂದ್ರ ರೆಡ್ಡಿಗೆ ತೋರಿಸಿ ವೋಟು ಹಾಕಲಿಲ್ಲವೇ? ದುಡ್ಡು ತೆಗೆದುಕೊಂಡು ನಾನು ಮೋಸ ಮಾಡಿದ್ದೇನಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | JDS Politics: ಸೀಟ್‌ಗೆ ಗೌಡರು, ಲವ್‌ಗೆ ಸಿದ್ದರಾಮಯ್ಯ: ಶಿವಲಿಂಗೇಗೌಡ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ
ಎಲ್ಲರೂ ಜಾತಿ ಲೆಕ್ಕಚಾರ ಹಾಕುತ್ತಾರೆ, ಈಗ ಆ ವಿಷಯ ಬೇಡ ಎಂದ ಅವರು, ನಾನು ಜಾತಿ ಲೆಕ್ಕಾಚಾರದಲ್ಲೇ ರಾಜಕಾರಣ ಮಾಡುವುದು. ರೇವಣ್ಣನರಿಗೆ ಯಾರಾದರೂ ಕಿವಿಯಲ್ಲಿ ಹೂವು ಇಡಲು ಆಗುತ್ತದೆಯೇ? ಕುಮಾರಸ್ವಾಮಿಗಾದರೂ ಹೂವು ಇಡಲು ಸಾಧ್ಯವೇ? ದಿನ ಹೂವು ಹಾಕಿಸಿಕೊಂಡು ಅವರು ಬರುತ್ತಾರೆ, ಯಾವ ಸಾಮ್ರಾಜ್ಯಕ್ಕೋಸ್ಕರ ರೇವಣ್ಣಗೆ ಹೂವು ಮುಡಿಸಬೇಕು ಎಂದು ತಿಳಿಸಿದರು.
ಹಾಲು ಉತ್ಪಾದಕರ ಸಂಘದವರನ್ನು ಇಂದಿನ ಸಭೆಗೆ ಕರೆದುಕೊಂಡು ಬರಲು ಯಾರು ಹೇಳಿದ್ದು? ಡಿಸಿಸಿ ಬ್ಯಾಂಕ್ ಸೂಪರ್‌ವೈಸರ್ ದುಡ್ಡು ಹಂಚುವುದಕ್ಕಾ ಇರುವುದು. ಅವರನ್ನೆಲ್ಲ ಹೇಗೆ ಕರೆದುಕೊಂಡು ಬಂದರು ಹೇಳಲೇ, ಅವೆಲ್ಲ ಈಗ ಬೇಡ ಎಂದು ಜಾರಿಕೊಂಡರು.