ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲದಿಂದ ಪಕ್ಷದಲ್ಲಿ ಭವಾನಿ ರೇವಣ್ಣ ಹಾಗೂ ಎಚ್.ಪಿ.ಸ್ವರೂಪ್ ಬೆಂಬಲಿಗರ ಬಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್‌ಗೆ ಸೂರಜ್ ರೇವಣ್ಣ ಮುಂದಾಗಿದ್ದಾರೆ. ತಾವು ಈ ಹಿಂದೆ ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅವರು, ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು. ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ಎಂದು ಟ್ವೀಟ್ ಮಾಡಿದ್ದಾರೆ. ಇದು ಅವರು ಮಾಡಿಕೊಂಡಿರುವ ಆತ್ಮಾವಲೋಕನ ಎಂದು ಅಭಿಪ್ರಾಯಿಸಲಾಗಿದೆ.
ʻʻಹಾಸನ ಜಿಲ್ಲೆ ಟಿಕೆಟ್ ವಿಚಾರ ದೇವೇಗೌಡರದ್ದೇ ಅಂತಿಮ. ಪ್ರಬಲ ಟಿಕೆಟ್ ಆಕಾಂಕ್ಷಿ ರೇಸ್‌ನಲ್ಲಿ ಈಗಲೂ ಭವಾನಿ ರೇವಣ್ಣ ಮುಂದಿದ್ದಾರೆ. ಹಾಸನ ಜಿಲ್ಲೆಯನ್ನು ರೇವಣ್ಣ ಅರಿತಿರುವಷ್ಟು ಈ ಭೂಮಿ ಮೇಲೆಯೇ ಯಾರೂ ಅರಿತಿಲ್ಲ. ಜನಸಾಮಾನ್ಯರಿಗೆ, ಕಾರ್ಯಕರ್ತನಿಗೆ ಕೊಡುತ್ತೇವೆ ಎಂಬ ಮಾತೆಲ್ಲಾ ಬಿಡಬೇಕು. ಭವಾನಿ ರೇವಣ್ಣ ಅವರೇ ಹಾಸನಕ್ಕೆ ಸೂಕ್ತ ಅಭ್ಯರ್ಥಿʼʼ ಎಂದು ಈ ಹಿಂದೆ ಸೂರಜ್ ರೇವಣ್ಣ ಹೇಳಿದ್ದರು.
ಸ್ವರೂಪ್ ಹೇಳಿಕೆಯಿಂದ ಹಾಸನ ಜೆಡಿಎಸ್‌ನಲ್ಲಿ ಎರಡು ಬಣ ಸೃಷ್ಟಿಯಾಗುವ ಆತಂಕ ಉಂಟಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧ ಚರ್ಚೆಯಾಗುತ್ತಿದ್ದ ಹಿನ್ನೆಲೆಯಲ್ಲಿ ತಾವು ಮಾತನಾಡಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿ ಸ್ಪಷ್ಟನೆ ಸ್ಪಷ್ಟನೆ ಕೊಡುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ರೇವಣ್ಣ ಪುತ್ರ ಮುಂದಾಗಿದ್ದಾರೆ.
ಪಕ್ಷದ ಕಾರ್ಯಕರ್ತರ ಅಪೇಕ್ಷೆ ಹಿನ್ನೆಲೆಯಲ್ಲಿ ನಮ್ಮ ಕುಟುಂಬ ಸದಸ್ಯರೊಬ್ಬರು ಅಭ್ಯರ್ಥಿಯಾದರೆ ಉತ್ತಮ ಎಂದು ಹೇಳಿದ್ದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ, ಭವಾನಿ ರೇವಣ್ಣ ಅವರಿಗೇ ಟಿಕೆಟ್ ಕೊಡಿ ಎಂದು ಯಾರಿಗೂ ಸೂಚಿಸಿಲ್ಲ. ನಮ್ಮ ಕುಟುಂಬದಿಂದ ಯಾರಾದರೂ ಅಭ್ಯರ್ಥಿಯಾದರೆ, ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಹಾಗೂ ಪಕ್ಷ ಸಂಘಟನೆ ಉದ್ದೇಶದಿಂದ ಹೇಳಿರುವುದಾಗಿ ತಿಳಿಸಿದ್ದಾರೆ.
ಕೇಳಿದ್ದು ಸುಳ್ಳಾಗಬಹುದು.
— Dr,Suraj Revanna MLC (@SurajMlc) January 29, 2023
ನೋಡಿದ್ದು ಸುಳ್ಳಾಗಬಹುದು.
ನಿಧಾನಿಸೀ ಯೋಚಿಸಿದಾಗ ನಿಜವು ತಿಳಿಯುವುದು .. pic.twitter.com/boODlL5MLS
ಇಬ್ಬರ ಕಿತ್ತಾಟದಲ್ಲಿ ಯಾರಿಗೆ ಸಿಗುತ್ತೆ ಟಿಕೆಟ್?
ಹಾಸನ ಟಿಕೆಟ್ ವಿಚಾರ ಜೆಡಿಎಸ್ ವರಿಷ್ಠರಿಗೆ ಮತ್ತಷ್ಟು ತಲೆನೋವಾಗುವುದು ಖಚಿತ ಎನ್ನಲಾಗಿದೆ. ಒಡೆದ ಕಾರ್ಯಕರ್ತರ ಮನಸ್ಸುಗಳನ್ನು ಎಚ್.ಡಿ. ಕುಮಾರಸ್ವಾಮಿ ಅವರು ಹೇಗೆ ಒಂದುಗೂಡಿಸುತ್ತಾರೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ಟಿಕೆಟ್ ಗೊಂದಲದಿಂದ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಹಾಗೂ ಎಚ್.ಪಿ. ಸ್ವರೂಪ್ ಕಾರ್ಯಕರ್ತರ ಬಣ ಸೃಷ್ಟಿಯಾಗಿದೆ. ಸ್ವರೂಪ್‌ಗೆ ಟಿಕೆಟ್ ನೀಡಿದರೆ ಭವಾನಿ ರೇವಣ್ಣ ಬಣ ಕೆಲಸ ಮಾಡುವುದು ಅನುಮಾನ. ಭವಾನಿ ರೇವಣ್ಣಗೆ ಟಿಕೆಟ್ ನೀಡಿದರೆ ಸ್ವರೂಪ್ ಬಣ ಸಹಕರಿಸುವುದು ಅನುಮಾನವಾಗಿದೆ.
ಇದನ್ನೂ ಓದಿ | ಡಿಕೆಶಿಗೆ ದುಬೈ, ಲಂಡನ್ ನಲ್ಲೂ ಮನೆ! ಅಕ್ರಮ ಆಸ್ತಿ ಸೂಚಿಸುವ ಆಡಿಯೊ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ
ಟಿಕೆಟ್ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ.ದೇವೇಗೌಡರು ಹಾಗೂ ಸಿಎಂ ಇಬ್ರಾಹಿಂ ಅವರ ತೀರ್ಮಾನವೇ ಅಂತಿಮ ಎಂದು ಈಗಾಗಲೇ ಹೇಳಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು, ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಯಾರು ತೀರ್ಮಾನ ಮಾಡುತ್ತಾರೆ ಎಂಬ ಗೊಂದಲ ಬಗೆಹರಿದರೂ ಅಭ್ಯರ್ಥಿ ಯಾರು ಎಂಬ ಗೊಂದಲ ಪಕ್ಷದ ಕಾರ್ಯಕರ್ತರಲ್ಲಿ ಮುಂದುವರಿದೆ.
ಟಿಕೆಟ್ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ ದೊಡ್ಡಗೌಡರ ಸೊಸೆ?
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ವಾರ್ ತೀವ್ರ ಕುತೂಹಲ ಮೂಡಿಸಿದೆ. ಭವಾನಿ ಕರ್ನಾಟಕದ ಅಮ್ಮ, ಕರುನಾಡಿನ ಮಹಿಳೆಯರ ಶಕ್ತಿ ಎಂದು ಅಭಿಮಾನಿಗಳು ಪ್ರಚಾರ ಮಾಡುತ್ತಿದ್ದಾರೆ. ಕುಮಾರಸ್ವಾಮಿ ನಿರ್ಧಾರವೇ ಅಂತಿಮ ಎಂದು ಎಚ್.ಡಿ.ರೇವಣ್ಣ ಅವರು ಹೇಳಿದ್ದಾರೆ. ಇವರ ಮಾತಿನಿಂದ ತಾತ್ಕಾಲಿಕವಾಗಿ ಹಾಸನ ಕ್ಷೇತ್ರದಿಂದ ದೊಡ್ಡಗೌಡರ ಸೊಸೆ ಭವಾನಿ ರೇವಣ್ಣ ಹಿಂದೆ ಸರಿಯುತ್ತಾರಾ ಎಂಬ ಪ್ರಶ್ನೆ ಮೂಡಿದೆ..
ಕುಮಾರಸ್ವಾಮಿ ಹೇಳಿಕೆ ಬಳಿಕವೂ ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಆ್ಯಕ್ಟೀವ್ ಆಗಿದ್ದರು. ಆದರೆ ರೇವಣ್ಣ ಅವರು ಎಲ್ಲ ಗೊಂದಲಗಳಿಗೆ ತೆರೆ ಎಳೆದ ಬಳಿಕ ಭವಾನಿ ಅವರ ನಡೆ ಏನು ಎಂಬುವುದು ಕುತೂಹಲಕ್ಕೆ ಕಾರಣವಾಗಿದ್ದು, ಎಲ್ಲದ್ದಕ್ಕೂ ಸೆಡ್ಡು ಹೊಡೆದು ಕ್ಷೇತ್ರದ ಪ್ರವಾಸ ಮುಂದುವರಿಸುತ್ತಾರಾ ಎಂಬುವುದು ಜೆಡಿಎಸ್ ವಲಯಲ್ಲಿ ಚರ್ಚೆಗೆ ಗ್ರಾಸವಾಗಿದೆ.