ಬೆಂಗಳೂರು: ಸೋಮವಾರ (ಏ.3) ನಿಗದಿಯಾಗಿದ್ದ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆ ಮುಂದೂಡಿಕೆಯಾಗಿದೆ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ (Karnataka Election 2023) ಗೊಂದಲ ಬಗೆಹರಿಯದ ಹಿನ್ನೆಲೆಯಲ್ಲಿ 2ನೇ ಪಟ್ಟಿ ಬಿಡುಗಡೆಯನ್ನು ಏ.5ಕ್ಕೆ ಮುಂದೂಡಲಾಗಿದೆ.
ಸೋಮವಾರ ಜೆ.ಪಿ. ಭವನದಲ್ಲಿ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದರು. ಆದರೆ, ರಾಮನಗರ ಹಾಗೂ ಮಂಡ್ಯ ಜಿಲ್ಲೆ ಪ್ರವಾಸ ಮುಗಿಸಿಕೊಂಡು ಬರುವುದು ತಡವಾಗಿದ್ದರಿಂದ ಸಂಜೆ 4 ಗಂಟೆಗೆ ನಡೆಯಬೇಕಿದ್ದ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಲಾಗಿದೆ.
ಎಚ್‌ಡಿಕೆ ಆಗಮನದ ವಿಳಂಬದ ಜತೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನವ ದೆಹಲಿಗೆ ತೆರಳಿರುವುದು ಕೂಡ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುಂದೂಡಲು ಪ್ರಮುಖ ಕಾರಣವಾಗಿದೆ. ದೇವೇಗೌಡರು ಬುಧವಾರ ಬೆಂಗಳೂರಿಗೆ ವಾಪಸ್ ಆಗಲಿದ್ದು, ಅಂದು ಮತ್ತೊಮ್ಮೆ ಸಭೆ ನಡೆಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ | Karnataka Election: ನಾನು ಬೇಕೇಬೇಕು, ನನ್ನನ್ನು ಬಿಟ್ಟು ಸರ್ಕಾರ ಮಾಡಲು ಯಾರಿಗೂ ಸಾಧ್ಯವಿಲ್ಲ: ಗಾಲಿ ಜನಾರ್ದನ ರೆಡ್ಡಿ
ಈ ಹಿಂದೆ 93 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಮಾಜಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದರು. ಆದರೆ, ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಹಾಗೂ ಎಚ್.ಪಿ.ಸ್ವರೂಪ್ ನಡುವೆ ಟಿಕೆಟ್‌ಗಾಗಿ ಪೈಪೋಟಿ ಉಂಟಾಗಿರುವುದರಿಂದ ಜೆಡಿಎಸ್ 2ನೇ ಪಟ್ಟಿ ಬಿಡುಗಡೆ ವಿಳಂಬವಾಗಿದೆ. ಹಾಸನ ಟಿಕೆಟ್ ಗೊಂದಲ ಬಗೆಹರಿಸಲು ಎಚ್.ಡಿ.ದೇವೇಗೌಡರು ಏ.2ರಂದು ಸಂಜೆ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಹಾಗೂ ಭವಾನಿ ರೇವಣ್ಣ ಅವರ ಜತೆ ಸಭೆ ನಡೆಸಿದ್ದರು. ಸಭೆಯಲ್ಲೂ ಯಾರಿಗೆ ಟಿಕೆಟ್ ನೀಡಬೇಕು ಎಂಬುವುದು ಅಂತಿಮವಾಗಿರಲಿಲ್ಲ. ಹೀಗಾಗಿ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮುಂದೂಡಲಾಗಿದೆ.