Site icon Vistara News

ದೇವ ನಿಂದನೆ ಆರೋಪ: ನಾನೇ ದೇವರು ಎಂದ ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್‌ ದಾಖಲಿಸಲು ಜೆಡಿಎಸ್‌ ಆಗ್ರಹ

Shivaraj pateel

#image_title

ರಾಯಚೂರು: ಯಾವ ಮೋದಿಯೂ ಇಲ್ಲ ಪಾದಿಯೂ ಇಲ್ಲ.. ನಾನೇ ಸಿಂಗಲ್‌ ಆರ್ಮಿ ಎಂದೆಲ್ಲ ಆಡಿಯೊ ಒಂದರಲ್ಲಿ ಮಾತನಾಡಿ ಸಿಕ್ಕಿಬಿದ್ದಿದ್ದ ರಾಯಚೂರಿನ ಬಿಜೆಪಿ ಶಾಸಕ ಡಾ. ಶಿವರಾಜ್‌ ಪಾಟೀಲ್‌ (Dr. Shivaraj Pateel) ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ನಾನೇ ದೇವರು ಎಂದು ಹೇಳಿದ್ದು ಧಾರ್ಮಿಕ ನಿಂದನೆಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಜೆಡಿಎಸ್‌ ಆಗ್ರಹಿಸಿದೆ.

ಶಿವರಾಜ್‌ ಪಾಟೀಲ್‌ ಅವರು ಮಾತನಾಡಿದ ಆಡಿಯೊವೊಂದು ಇತ್ತೀಚೆಗೆ ಬಯಲಾಗಿ ಭಾರಿ ಸದ್ದು ಮಾಡಿತ್ತು. ಅದರಲ್ಲಿ ಅವರು ಕನ್ನಡ ಹೋರಾಟಗಾರರೊಬ್ಬರ ಜತೆ ಮಾತನಾಡುತ್ತಾ ಮೋದಿ ಮಾತ್ರವಲ್ಲ ದೇವರ ಬಗ್ಗೆ ಕೂಡಾ ಮಾತನಾಡಿದರು.

3 ನಿಮಿಷ 19 ಸೆಕೆಂಡ್ ಗಳ ಪೋನ್ ಸಂಭಾಷಣೆಯ ಆಡಿಯೋದಲ್ಲಿ ಬಿಜೆಪಿಯ ವರಿಷ್ಠ ನಾಯಕ ನರೇಂದ್ರ ಮೋದಿ ಅವರನ್ನೇ ಅವಹೇಳನ ಮಾಡಿ ತಗಲಾಕಿಕೊಂಡಿದ್ದಾರೆ.

http://vistaranews.com/wp-content/uploads/2023/03/WhatsApp-Audio-2023-03-31-at-08.39.55-1.mp3
ಡಾ. ಶಿವರಾಜ್‌ ಪಾಟೀಲ್‌ ಅವರ ಮಾತುಗಳನ್ನು ಇಲ್ಲಿ ಕೇಳಿ

ʻʻಮೋದಿಯ ರೈಟ್ ಹ್ಯಾಂಡ್‌ಗೇ ನಾನು ಕೇಳಲ್ಲ. ನಾನೇ ಸಿಂಗಲ್ ಆರ್ಮಿ, ನನಗೆ ರೈಟ್ ಇಲ್ಲ, ಲೆಫ್ಟ್ ಇಲ್ಲ. ನನ್ನ ಕೈ ನನ್ನ ಕಾಲು/ ನಾನೇ ಮೋದಿ, ನಾನೇ ಟ್ರಂಪ್. ಯಾವ ಬದನೆಕಾಯಿ ಮಾತು ಸಹ ನಾನು‌ ಕೇಳಂಗಿಲ್ಲʼʼ ಎಂದು ಶಿವರಾಜ್‌ ಪಾಟೀಲ್‌ ಹೇಳಿದ್ದಾರೆ.

ʻʻಯಾವ ಮೋದಿಯೂ ಇಲ್ಲ. ಪಾದಿಯೂ ಇಲ್ಲ. ನಾನೇ ಶಿವರಾಜ್ ‌ಪಾಟೀಲ್. ಶಿವರಾಜ್ ‌ಪಾಟೀಲ್ ಅಂದ್ರೇ ದೇವರು, ನಾನು ಇದ್ರೇನೆ ಜಗತ್ತುʼʼ ಎಂದೆಲ್ಲ ಹೇಳಿಕೊಂಡಿದ್ದಾರೆ.

ನಾನು ಯಾರಿಗೂ ಕೇರ್‌ ಮಾಡಲ್ಲ, ನಾನು ಸಿಂಗಲ್‌ ಆರ್ಮಿ

ʻʻಸೋಮಶೇಖರ್ ರೆಡ್ಡಿ, ಶ್ರೀರಾಮುಲುಗೂ ನಾನು ಕೇರ್‌ ಮಾಡಲ್ಲ. ನನ್ನ ಮುಂದೆ ಏನೂ ನಡೆಯಂಗಿಲ್ಲ. ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ‌ಲೀಡರ್ ಗಳಿಗೆ ಬಾ ಅಂತೀನಾ…? ನನಗೆ ಯಾರೂ‌ ಇಲ್ಲ… ನಾನು‌ ಸಿಂಗಲ್ ಆರ್ಮಿʼʼ ಎಂದಿದ್ದಾರೆ ಶಿವರಾಜ್‌ ಪಾಟೀಲ್‌.

ನಾನೇ ದೇವರು, ನನ್ನ ಕಾಲಿಗೆ ಬೀಳಿ ಅಂತೀನಿ!

ʻʻಎಲೆಕ್ಷನ್‌ನಲ್ಲಿ ಸೋತರು ಚಿಂತೆಯಿಲ್ಲ, ಗೆದ್ರು ಚಿಂತೆಯಿಲ್ಲ, ಮಲಗಿದರೂ ಚಿಂತೆಯಿಲ್ಲ… ಜಗತ್ತಿನಲ್ಲಿ ಚಿಂತೆಯಿಲ್ಲದ ಪುರುಷ ಅಂದ್ರೆ ಅದು ಶಿವರಾಜ್ ಪಾಟೀಲ್. ನಾನು ದೇವರು ಇದ್ದಂಗೆ, ಅದಕ್ಕೆ ನಮ್ಮ ಹುಡುಗರಿಗೆ ಹೇಳ್ತೀನಿ. ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ.. ನಾನೇ ದೈವ ಬರಿತೀನಿ.ʼʼ-ಹೀಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಶಿವರಾಜ್‌ ಪಾಟೀಲ್‌.

ಜೆಡಿಎಸ್‌ ದೂರು

ಬಿಜೆಪಿ ಶಾಸಕರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಜೆಡಿಎಸ್‌ ದೂರು ನೀಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಮತ್ತೆ ಸುದ್ದಿಯಲ್ಲಿದೆ.

ರಾಯಚೂರು ನಗರದ ಪಶ್ಚಿಮ ಠಾಣಾ ಪೊಲೀಸರಿಗೆ ದೂರು ನೀಡಿರುವ ಜೆಡಿಎಸ್‌, ಶಿವರಾಜ್‌ ಪಾಟೀಲ್‌ ಅವರು, ʻʻನಾನೇ ದೇವರು. ನಾನು ಇದ್ರೇ ಜಗತ್ತು. ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ ಹೇಳ್ತೀನಿ. ನಾನು ದೈವ ಬರೆಸಿಕೊಳ್ಳಲ್ಲ, ನಾನೇ ದೈವ ಬರಿತೀನಿʼʼ ಎಂದು ಹೇಳಿರುವುದು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಇಂಥಹುದೇ ಹೇಳಿಕೆ ನೀಡಿದ ನಟ ಚೇತನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು ಎಂದು ದೂರಿನಲ್ಲಿ ನೆನಪಿಸಲಾಗಿದೆ.

ಯಾರು ಈ ಶಿವರಾಜ್‌ ಪಾಟೀಲ್‌?

53 ವರ್ಷದ ಶಿವರಾಜ್‌ ಪಾಟೀಲ್‌ ಅವರು 2013 ಮತ್ತು 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1989ರಲ್ಲಿ ಪಿಯುಸಿ ಪೂರೈಸಿದ ಇವರು, ಬಳ್ಳಾರಿ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಮಾಡಿ ವೈದ್ಯರಾಗಿದ್ದಾರೆ.

ಇದನ್ನೂ ಓದಿ : Karnataka Elections : ವಾಟ್ಸ್ ಆ್ಯಪ್‌ ಸ್ಟೇಟಸ್‌ ವಿಚಾರದಲ್ಲಿ ಕಾಂಗ್ರೆಸ್‌- ಬಿಜೆಪಿ ಮಾರಾಮಾರಿ; ಕಮಲ ಕಾರ್ಯಕರ್ತನ ಬೆರಳು ತುಂಡು

Exit mobile version