Site icon Vistara News

Petrol Deisel Price Hike: ಟಾಂಗಾ, ಸೈಕಲ್ ಸವಾರಿ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ ಜೆಡಿಎಸ್ ನಾಯಕರು!

JDS protest against petrol diesel price hike in bengaluru

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಪೆಟ್ರೋಲ್ ಮತ್ತು ಡೀಸೆಲ್ (Petrol Deisel Price Hike) ಮೇಲೆ ದುಬಾರಿ ತೆರಿಗೆ ವಿಧಿಸಿರುವುದರ ವಿರುದ್ಧ ಜೆಡಿಎಸ್ ತೀವ್ರ ಪ್ರತಿಭಟನೆ ನಡೆಸಿತು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಸೈಕಲ್ ಹಾಗೂ ಟಾಂಗಾ ಗಾಡಿಗಳ ಮೂಲಕ ವಿನೂತನವಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜವರಾಯಿ ಗೌಡ ಸೇರಿದಂತೆ ಅನೇಕ ನಾಯಕರು ಟಾಂಗಾ ಗಾಡಿ ಹತ್ತಿ, ಸೈಕಲ್ ತುಳಿದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Weather : ಗುಡುಗು, ಸಿಡಿಲಿನ ಮಳೆಗೆ ಮನೆಯ ಗೋಡೆ ಕುಸಿತ; ನಾಳೆಗೂ ಇದೆ ಅಲರ್ಟ್‌

ಈ ಸಂದರ್ಭದಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಗಳನ್ನು ಜನರ ಮೇಲೆ ಹೇರುತ್ತಿದೆ ಎಂದು ಆಪಾದಿಸಿದರು.

ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವುದಕ್ಕೆ ಜನರ ಕಿಸೆಗೆ ಕೈ ಹಾಕಿದೆ ಸರ್ಕಾರ. ಜನರಿಗೆ ಅಗ್ಗದ ಆಮಿಷಗಳನ್ನು ಒಡ್ಡಿ ಜನರಿಂದಲೇ ದೊಡ್ಡ ಪ್ರಮಾಣದಲ್ಲಿ ಹಣ ಸುಲಿಗೆ ಮಾಡುತ್ತಿದೆ. ಪೆಟ್ರೋಲ್-ಡಿಸೇಲ್‌ ಬೆಲೆ ಏರಿಕೆಯಿಂದ ಈಗ ದಿನಬಳಕೆ ವಸ್ತುಗಳ ಬೆಲೆ ಗಗನಮುಖಿ ಆಗಿದೆ. ಬಡವರು, ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ ಎಂದು ಅವರು ದೂರಿದರು.

ಒಂದು ಕಡೆ ಗ್ಯಾರಂಟಿ ಕೊಡುತ್ತಿರುವ ಸರ್ಕಾರ, ಮತ್ತೊಂದು ಕಡೆ ಅದೇ ಜನರ ಮೇಲೆ ತೆರಿಗೆ ವಿಧಿಸುತ್ತಿದೆ. ಇದು ಯಾವ ನ್ಯಾಯ? ಒಂದು ಕೈಯ್ಯಲ್ಲಿ ಕೊಟ್ಟು ಇನ್ನೊಂದು ಕೈಯ್ಯಲ್ಲಿ ಕಿತ್ತುಕೊಳ್ಳುವ ಈ ಸರ್ಕಾರ ಜನ ವಿರೋಧಿ ಆಗಿದೆ ಎಂದು ಇತರೆ ನಾಯಕರು ಕಿಡಿಕಾರಿದರು.

ಕಾರ್ಯಕರ್ತರು ಸರ್ಕಾರದ ವಿರುದ್ಧ ನಾಮಫಲಕ, ಘೋಷಣ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು. ಅಲ್ಲದೆ, ಕೂಡಲೇ ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಿರುವ ತೆರಿಗೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: Migraine Problem: ಮೈಗ್ರೇನ್‌ ಉಪಶಮನಕ್ಕೆ ರೋಸ್‌ಮೆರಿ ಸುಗಂಧ ತೈಲ ಮದ್ದು!

ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ಕಾನೂನು ವಿಭಾಗದ ಅಧ್ಯಕ್ಷ ಎ.ಪಿ. ರಂಗನಾಥ್, ಬೆಂಗಳೂರು ಮಹಾನಗರ ಕಾರ್ಯಧ್ಯಕ್ಷ ಜೆ.ಟಿ.ರೇವಣ್ಣ, ಬೆಂಗಳೂರು ಮಹಾನಗರದ ಯುವ ಘಟಕದ ಅಧ್ಯಕ್ಷ ಚಂದ್ರಶೇಖರ್, ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಶೈಲಾ ಸಂತೋಷ್ ರಾವ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version