ವಿಜಯಪುರ: ʻʻಸಿಎಂ ಬಸವರಾಜ ಬೊಮ್ಮಾಯಿ ಅವರು ಅಡಬರಕಿ ಆರೆಸ್ಸೆಸ್ಸು. ಆ ಕಡೆ ಅದು ಅಲ್ಲ, ಈ ಕಡೆಗೆ ಇದೂ ಅಲ್ಲ. ನಿಷ್ಠೆ ತೋರಿಸಲಿಕ್ಕೆ ಬಸವಾಕೃಪಾ ಬಿಟ್ಟು ಕೇಶವ್ ಕೃಪಾದ ಗುಲಾಮರಾಗಲು ಹೊರಟಿದ್ದಾರೆʼʼ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಗೇಲಿ ಮಾಡಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಅವರು ಮುಸ್ಲಿಮರಿಗೆ ನೀಡಿದ ಮೀಸಲಾತಿಯನ್ನು ಯಾವ ಕಾರಣಕ್ಕೂ ಕಿತ್ತು ಕೊಳ್ಳಲು ಸಾಧ್ಯವಿಲ್ಲ ಎಂದರು. ʻʻದೇವೇಗೌಡರು ಅಧಿಕಾರದಲ್ಲಿದ್ದಾಗ ಮುಸ್ಲಿಮರಿಗೆ ಕಾನೂನ ಬದ್ಧವಾಗಿ ಶೇಕಡಾ 4ರಷ್ಟು ಮೀಸಲಾತಿ ಕೊಟ್ಟಿದ್ದರು. ಸಂವಿಧಾನಬದ್ಧವಾಗಿ ಸಮಿತಿಯ ವರದಿ ತರಿಸಿಕೊಂಡೇ ಅಂಗೀಕರಿಸಿದ್ದರು. ಇಂಥ ಮೀಸಲಾತಿಯನ್ನು ಮೂಲ ಆರೆಸ್ಸಿಗರಾಗಿರುವ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗಲೇ ತೆಗೆಯಲು ಆಗಲಿಲ್ಲ. ಈಗ ಬೊಮ್ಮಾಯಿ ಅವರು ತೆಗೀತಾರೇನು?ʼʼ ಎಂದು ಪ್ರಶ್ನಿಸಿದರು.
ʻʻಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ಕೂಡಾ ದೇವೆಗೌಡರೆ. ನಾಯಕ ಸಮಾಜವನ್ನು ಚಂದ್ರಶೇಖರ್ ಪ್ರಧಾನಮಂತ್ರಿಯಾಗಿದ್ದಾಗ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೆಲಸವನ್ನು ಮಾಡಿದ್ದು ಕೂಡಾ ದೇವೇಗೌಡರೇʼʼ ಎಂದ ಸಿಎಂ ಇಬ್ರಾಹಿಂ, ಮೀಸಲಾತಿ ಬಗ್ಗೆ ಸಮಗ್ರವಾಗಿ ಚರ್ಚೆ ಆಗಬೇಕು. ಯಾರ್ಯಾರೋ ಏನೇನೋ ಹೇಳುವಂತಾಗಬಾರದು ಎಂದರು.
ದೇವೇಗೌಡರ ಕನಸು ನನಸಿಗೆ ಸಂಕಲ್ಪ
ʻʻಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಕೆಸಲ ಮಾಡುವ ಸೌಭಾಗ್ಯ ಸಿಕ್ಕಿದೆ. ಜತೆಗೆ ದೇವೇಗೌಡರ ಕನಸು ನನಸು ಮಾಡುವುದಕ್ಕೆ ಒಂದು ಅವಕಾಶ ದೊರೆತಿದೆ. ರಾಜ್ಯದಲ್ಲಿ ಮತ್ತೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿದ್ದೇವೆ. 2023ಕ್ಕೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುತ್ತೇವೆಂದು ಟೊಂಕ ಕಟ್ಟಿ ಶಪಥ ಮಾಡಿ ಹೊರಟಿದ್ದೇವೆʼʼ ಎಂದು ಹೇಳಿದರು ಇಬ್ರಾಹಿಂ.
ʻʻನವೆಂಬರ್ 1 ರಿಂದ ಎಚ್ ಡಿಕೆ ನೇತೃತ್ವದಲ್ಲಿ ಪಂಚ ರತ್ನ ಯಾತ್ರೆ ಮೈಸೂರು ಭಾಗದಲ್ಲಿ ಶುರುವಾಗಲಿದೆ. ನಾನು, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಮತ್ತು ಇತರ ನಾಯಕರು ಜೊತೆಗೆ ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಭಾಗಗಳಲ್ಲಿ ಎರಡು ತಿಂಗಳು ಯಾತ್ರೆ ಮಾಡುತ್ತೇವೆ ಎಂದರು.
ಬೊಮ್ಮಾಯಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವಾಗ್ದಾಳಿ….