Site icon Vistara News

JDS Protest: ಸಚಿವ ಸಂಪುಟದಿಂದ ಡಿ.ಸುಧಾಕರ್ ವಜಾ ಮಾಡಿ; ಜೆಡಿಎಸ್ ಕಾರ್ಯಕರ್ತರ ಒತ್ತಾಯ

JDS Workers Protest

ಬೆಂಗಳೂರು: ದಲಿತರ ಮೇಲೆ ದೌರ್ಜನ್ಯ ಎಸಗಿರುವ ಡಿ.ಸುಧಾಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ಜೆಡಿಎಸ್ ನಗರ ಘಟಕದ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಂ.ರಮೇಶ್ ಗೌಡ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ (JDS Protest) ನಡೆಸಿದರು.

ದಲಿತ ಕುಟುಂಬದ ಭೂಮಿಗೆ ಸಂಬಂಧಪಟ್ಟಂತೆ ದರ್ಪ, ದೌರ್ಜನ್ಯ ಎಸಗಿರುವ ಸಚಿವ ಡಿ.ಸುಧಾಕರ್ ಅವರು ಕೂಡಲೇ ರಾಜೀನಾಮೆ ನೀಡಬೇಕು, ಅವರು ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿ ಅವರೇ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಜೆಡಿಎಸ್ ಕಾರ್ಯಕರ್ತರು, ಮುಖಂಡರು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ಅವರ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ | Cauvery water dispute : ತಮಿಳುನಾಡಿಗೆ ಕೂಡಲೇ ನೀರು ನಿಲ್ಲಿಸಿ: ಎಚ್‌.ಡಿ. ಕುಮಾರಸ್ವಾಮಿ ಖಡಕ್‌ ಎಚ್ಚರಿಕೆ

ಸಚಿವರ ದೌರ್ಜನ್ಯ ಅಮಾನುಷ: ರಮೇಶ್ ಗೌಡ

ದಲಿತ ಕುಟುಂಬ ಹಾಗೂ ದಲಿತ ಮಹಿಳೆಯ ಮೇಲೆ ಸಚಿವರು, ಮತ್ತವರ ಬಂಟರು ದೌರ್ಜನ್ಯ ಎಸಗಿರುವುದು ಅಮಾನುಷ. ಇದನ್ನು ಜೆಡಿಎಸ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಸಚಿವ ಡಿ.ಸುಧಾಕರ್ ವರ್ತನೆ ತಪ್ಪು. ಅವರ ಭಾಷೆ ಸರಿ ಇಲ್ಲ. ಮಚ್ಚು ಕೊಡಲಿ ಹಿಡಿದು ಓಡಾಡುತ್ತಿದ್ದೆವು ಎಂದು ಹೇಳಿದರೆ ಅರ್ಥವೇನು? ಸಿಎಂ, ಡಿಸಿಎಂ ಸಚಿವರದ್ದು ತಪ್ಪಿಲ್ಲ ಎನ್ನುತ್ತಾರೆ. ಸಚಿವರ ಮೇಲೆ ಎಫ್ಐಆರ್ ದಾಖಲೆಯಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕು. ಸಚಿವರಿಗೆ ಕಾನೂನಿನ ಮೇಲೆ ಗೌರವ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಎಚ್.ಎಂ.ರಮೇಶ್ ಗೌಡ ಆಗ್ರಹಿಸಿದರು.

ಬಿಜೆಪಿ ಸರ್ಕಾರ ಇದ್ದಾಗ ಸಚಿವರ ವಿರುದ್ಧ ಎಫ್‌ಐಆರ್ ದಾಖಲಾದ ತಕ್ಷಣ ಕಾಂಗ್ರೆಸ್ ಪ್ರತಿಭಟನೆ ಮಾಡಿತ್ತು. ದಲಿತ, ಅಲ್ಪಸಂಖ್ಯಾತ, ಹಿಂದುಳಿತ ಉದ್ಧಾರಕ್ಕೆ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಇವರು ಹೇಳುತ್ತಿದ್ದಾರೆ. ಪ‍ರಿಶಿಷ್ಟ ಜಾತಿ, ಪಂಗಡಗಳ ಭೂಮಿ ವರ್ಗಾವಣೆ ನಿಷೇಧ (ಪಿಟಿಸಿಎಲ್‌) ಕಾಯ್ದೆ ಜಾರಿಗೆ ತಂದಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಸಚಿವರನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರವೇ ಸಚಿವರ ಪರ ನಿಂತರೆ ತನಿಖೆಯ ಗತಿ ಏನು? ಎಂದು ಪ್ರಶ್ನಿಸಿದರು.

ತನಿಖೆಗೆ ಮುನ್ನವೇ ಸರ್ಕಾರ ಸಮರ್ಥನೆಗೆ ಇಳಿಯುವುದು ಸರಿ ಅಲ್ಲ. ಅದು ದಲಿತ ಕುಟುಂಬಕ್ಕೆ ಮಾಡುವ ಅನ್ಯಾಯ. ವಾಸ್ತವ ಸ್ಥಿತಿ ಹೀಗಿದ್ದಾಗ ದಲಿತರ ಮೇಲೆ ದೌರ್ಜನ್ಯ ನಡೆಸಿದ ಸಚಿವರ ರಾಜೀನಾಮೆ ಪಡೆದು ಅವರನ್ನು ಬಂಧಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಸಚಿವರು ರಾಜೀನಾಮೆ ನೀಡದಿದ್ದರೆ ನಾವು ರಾಜ್ಯಪಾಲರಿಗೂ ದೂರು ನೀಡುತ್ತೇವೆ. ಅವರು ರಾಜೀನಾಮೆ ನೀಡುವ ತನಕ ಹೋರಾಟ ಮಾಡುತ್ತೇವೆ. ದಲಿತರಿಗೆ ನ್ಯಾಯ ಕೊಡಿಸಲು ಗೃಹ ಸಚಿವರು ವಿಫಲ ಆಗಿದ್ದಾರೆ. ಅಲ್ಲದೆ, ದಲಿತರ ರಕ್ಷಣೆ ಮಾಡಲಾಗದ ಅದೇ ಸಮುದಾಯದ ಗೃಹ ಸಚಿವ ಪರಮೇಶ್ವರ್ ಅವರೂ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯ ಮಾಡಿದರು.

ಇದನ್ನೂ ಓದಿ | Chaitra Kundapura : ಫೈರ್‌ ಬ್ರಾಂಡ್‌ ವಂಚಕಿ ಚೈತ್ರಾ ಕುಂದಾಪುರ ಟೀಮ್‌ಗೆ 10 ದಿನಗಳ ಸಿಸಿಬಿ ಕಸ್ಟಡಿ; ಮುಂದುವರಿದ ಹೈಡ್ರಾಮಾ

ಸಚಿವ ಡಿ.ಸುಧಾಕರ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು, ತದ ನಂತರ ಬಿಡುಗಡೆ ಮಾಡಿದರು. ಜೆಡಿಎಸ್ ನಗರ ಮುಖಂಡರಾದ ನಾರಾಯಣ ಸ್ವಾಮಿ, ಪ್ರವೀಣ್‌ ಕುಮಾರ್, ಹರೀಶ್, ರೇವಣ್ಣ, ಚಂದ್ರಶೇಖರ್ ಸೇರಿದಂತೆ ಹಲವಾರು ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Exit mobile version