ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ (JEE)ಯಲ್ಲಿ ರ‍್ಯಾಂಕ್ ಪಡೆಯುವುದು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳಲ್ಲಿ (IIT) ಸೀಟು ಪಡೆಯುವುದು ಲಕ್ಷಾಂತರ ವಿದ್ಯಾರ್ಥಿಗಳ ಕನಸಾಗಿರುತ್ತದೆ. ಹೀಗೆ, ಜೆಇಇಯಲ್ಲಿ ಟಾಪರ್ ಆಗಿ, ಐಐಟಿಯಲ್ಲಿ ಸೀಟು ಸಿಕ್ಕರೂ ಬೆಂಗಳೂರಿನ ಶಿಶಿರ್ ಆರ್.ಕೆ. (Shishir RK) ಮನಸ್ಸಿನ ತುಡಿತವೇ ಬೇರೆಯಾಗಿದೆ.
ಬಾಂಬೆ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನಕ್ಕೆ ಸೀಟ್ ಸಿಕ್ಕರೂ ಅದನ್ನು ಶಿಶಿರ್ ತ್ಯಜಿಸಿದ್ದಾರೆ. ಕಂಪ್ಯೂಟರ್ ಸೈನ್ಸ್ ವೃತ್ತಿಪರ ಕೋರ್ಸ್ ಆಗಿದ್ದರೂ, ಕೋರ್ಸ್ ಮುಗಿದ ಬಳಿಕ ಕೈತುಂಬ ಸಂಬಳ ಸಿಗುವುದು ಖಚಿತವಾಗಿದ್ದರೂ ಸೀಟ್ ಬಿಟ್ಟುಕೊಟ್ಟಿದ್ದಾರೆ. ಇದು ಸಹಜವಾಗಿಯೇ ಕುಟುಂಬಸ್ಥರು, ಗೆಳೆಯರಿಗೆ ಅಚ್ಚರಿಯಾದರೂ ಶಿಶಿರ್ ತುಡಿತಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ಶಿಶಿರ್ ಮುಂದಿನ ಹಾದಿಯೇನು?
ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಪ್ ಸೈನ್ಸ್ (IISc)ನಲ್ಲಿ ಶಿಶಿರ್ ಬಿ.ಟೆಕ್ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದಾರೆ. ಸಂಶೋಧನೆಯಲ್ಲಿ ಆಸಕ್ತಿ ಇರುವ ಕಾರಣ ಐಐಟಿ ಸೀಟ್ ತೊರೆದು, ಬಿ.ಟೆಕ್ ಮಾಡಲು ತೀರ್ಮಾನಿಸಲಿದ್ದಾರೆ. ಸೋಮವಾರದಿಂದ (ಅಕ್ಟೋಬರ್ ೧೭) ತರಗತಿಗಳು ಶುರುವಾಗಲಿದ್ದು, ಕ್ಲಾಸ್‌ಗೆ ಹಾಜರಾಗಲು ಸಿದ್ಧರಾಗಿದ್ದಾರೆ.
“ಖಂಡಿತವಾಗಿಯೂ ಐಐಟಿಯಲ್ಲಿ ಅಧ್ಯಯನ ಮಾಡುವುದು ನನ್ನ ಕನಸಾಗಿತ್ತು. ಆದರೆ, ಕಂಪ್ಯೂಟರ್ ಸೈನ್ಸ್ ತುಂಬ ಜಾಬ್ ಓರಿಯೆಂಟೆಡ್ ಕೋರ್ಸ್ ಎನಿಸಿತು. ಸಂಶೋಧನೆ, ಅಭಿವೃದ್ಧಿ ಹಾಗೂ ಉದ್ಯಮಶೀಲತೆಯಲ್ಲಿ ಹೆಚ್ಚಿನ ಆಸಕ್ತಿ ಇರುವುದರಿಂದ ಐಐಎಸ್‌ಸಿ ಸೇರಿದ್ದೇನೆ” ಎಂದು ಶಿಶಿರ್ ತಿಳಿಸಿದ್ದಾರೆ. ಒಟ್ಟಿನಲ್ಲಿ, ಐದಂಕಿ ಸಂಬಳ ಸಿಕ್ಕರೆ ಸಾಕು ಎಂದು ಕೋರ್ಸ್ ಮಾಡುವವರ ಮಧ್ಯೆಯೇ ಮನಸ್ಸಿನ ತುಡಿತಕ್ಕೆ ಕನ್ನಡಿ ಹಿಡಿದಿರುವ ಶಿಶಿರ್ ವಿಭಿನ್ನ ಎನಿಸಿದ್ದಾರೆ.
ಇದನ್ನೂ ಓದಿ | KPSC KAS results 2022 | ನನಗೆ ಶಾಲಿನಿ ರಜನೀಶ್ ಪ್ರೇರಣೆ ಎಂದ ಟಾಪರ್ ರಶ್ಮೀ