ಚಾಮರಾಜನಗರ: ಚಾಮರಾಜನಗರ ತಾಲೂಕಿನ ಎಚ್. ಮೂಕಳ್ಳಿ ಬಳಿ ಗುರುವಾರ ಲಘು ವಿಮಾನವೊಂದು ಪತನಗೊಂಡಿದೆ. ಜೆಟ್‌ನಲ್ಲಿದ್ದ ಇಬ್ಬರು ಪೈಲೆಟ್‌ಗಳು ಕೂಡಲೇ ಪ್ಯಾರಾಚೂಟ್ ಮೂಲಕ ಪಾರಾಗಿದ್ದಾರೆ.
ಮಹಿಳೆ ಮತ್ತು ಪುರುಷ ಪೈಲೆಟ್‌ಗಳು ಈ ಜೆಟ್‌ನಲ್ಲಿದ್ದರು. ಲಘು ವಿಮಾನದಲ್ಲಿ ಪೈಲೆಟ್‌ಗಳು ತರಬೇತಿಯಲ್ಲಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ತರಬೇತಿ ಸಂಚಾರದಲ್ಲಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಜೆಟ್ ಕ್ರ್ಯಾಶ್ ಆಗಿದೆ. ಇದು ಗಮನಕ್ಕೆ ಬರುತ್ತಿದ್ದಂತೆ ಪೈಲೆಟ್‌ಗಳಿಬ್ಬರು ತುರ್ತುನಿರ್ಗಮನದಿಂದ ಹಾರಿ ಪ್ಯಾರಾಚೂಟ್ ಸಹಾಯದಿಂದ ಬಚಾವ್ ಆಗಿದ್ದಾರೆ.
ಇದನ್ನೂ ಓದಿ: Bangalore Rain: ಅಬ್ಬಬ್ಬಾ… ಬೆಂಗಳೂರಲ್ಲಿ ದಾಖಲೆ ಬರೆಯಿತು ಮೇ ಮಳೆ; ಇದು 66 ವರ್ಷದಲ್ಲೇ ಅತಿ ಹೆಚ್ಚು!
ಆದರೆ, ಇಬ್ಬರೂ ಪೈಲೆಟ್‌ಗಳು ಘಟನೆಯಿಂದ ಭಾರಿ ಶಾಕ್‌ನಲ್ಲಿದ್ದರು. ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಂತೆಮರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.
ಎಚ್ಎಎಲ್‌ನಿಂದ ಬಂದಿದ್ದ ತರಬೇತಿ ಪೈಲಟ್‌ಗಳು
ಉತ್ತರ ಭಾರತ ಮೂಲದ ತೇಜಪಾಲ್ (43) ಹಾಗೂ ಭೂಮಿಕಾ (30) ಎಂದು ಹೇಳಲಾಗಿದೆ. ತೇಜಪಾಲ್ ಅವರ ಬೆನ್ನಿಗೆ ಹೆಚ್ಚಿನ ಗಾಯಗಳಾಗಿದೆ. ಭೂಮಿಕಾ ಅವರಿಗೆ ಗಂಭೀರ ಗಾಯಗಳಾಗಿಲ್ಲ. ಪೈಲಟ್ ತರಬೇತಿಗಾಗಿ ಬೆಂಗಳೂರಿನ ಎಚ್ಎಎಲ್‌ನಿಂದ ಚಾಮರಾಜನಗರಕ್ಕೆ ಬಂದಿದ್ದರು. ಇಲ್ಲಿಂದ ವಾಪಸ್ ಆಗುತ್ತಿದ್ದಾಗ ಲಘು ವಿಮಾನವು ನೆಲಕ್ಕೆ ಅಪ್ಪಳಿಸಿದೆ.
ಪ್ರಾಣ ಉಳಿಸಿದ ಪ್ಯಾರಾಚೂಟ್; ಘಟನಾವಳಿಯ ವಿಡಿಯೊ ಇಲ್ಲಿದೆ
ಇದನ್ನೂ ಓದಿ: IBPS RRB Notification 2023 : ಗ್ರಾಮೀಣ ಬ್ಯಾಂಕುಗಳಲ್ಲಿ 8,612 ಹುದ್ದೆ; ಐಬಿಪಿಎಸ್‌ನಿಂದ ಅರ್ಜಿ ಆಹ್ವಾನ
ಎಚ್‌ಎಎಲ್ ಸಿಬ್ಬಂದಿಯೂ ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸರ ಸಹಾಯದೊಂದಿಗೆ ಸದ್ಯ ಪೈಲಟ್‌ಗಳನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಯುದ್ಧ ವಿಮಾನದ ಮೂಲಕ ಗಾಯಾಳು ಪೈಲಟ್‌ಗಳನ್ನು ಬೆಂಗಳೂರಿಗೆ ರವಾನೆ ಮಾಡಲಾಗುತ್ತಿದೆ. ಅವರಿಗೆ ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ.