Site icon Vistara News

Job scam! | ಸರಕಾರಿ ನೌಕರಿ ಕೊಡಿಸುವ ಆಮಿಷ: ಹಣ ಪಡೆಯಲು ಬಂದವನ ಹಿಡಿದು ಪೊಲೀಸರ ಕೈಗೆ ಕೊಟ್ಟರು!

Shanthesh korthi

ವಿಜಯಪುರ: ಸರಕಾರಿ ನೌಕರಿ ಕೊಡಿಸೋದಾಗಿ ಹೇಳಿ ಎಂಟು ಲಕ್ಷ ರೂಪಾಯಿಗೆ ಡೀಲ್‌ ಮಾಡಿಕೊಂಡು ಹಣ ಪಡೆಯಲು ಬಂದವನೊಬ್ಬನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಘಟನೆ ನಡೆದಿರುವುದು ವಿಜಯಪುರ ‌ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ.

ಹೋಂಗಾರ್ಡ್ ಆಗಿರುವ ಶಾಂತೇಶ್ ಕೊರ್ತಿ ಎಂಬಾತನೇ ಬಂಧಿತ. ಈತ ಹಲವರಿಗೆ ಉದ್ಯೋಗ ಮಾಡಿಕೊಟ್ಟಿದ್ದೇನೆ ಎಂದು ಮಾತಿನಲ್ಲೇ ಮರುಳು ಮಾಡುತ್ತಾ ಜನರನ್ನು ವಂಚನೆ ಮಾಡುತ್ತಿದ್ದ.

ಈತ ಇತ್ತೀಚೆಗೆ ಶ್ರೀಕಾಂತ ಎಂಬವರಿಗೆ ಪರಿಚಯವಾಗಿ ಸರಕಾರಿ ಕೆಲಸ ಕೊಡಿಸುವುದಾಗಿ ಹೇಳಿದ್ದ. ತನಗೆ ಇರುವ ಸಂಪರ್ಕದ ಬಗ್ಗೆ, ತಾನೊಬ್ಬ ಅಧಿಕಾರಿಯಾಗಿರುವ ಬಗ್ಗೆ ಎಲ್ಲ ಹೇಳಿಕೊಂಡಿದ್ದ. ಕೆಲಸ ಕೊಡಿಸಲು ೮ ಲಕ್ಷ ರೂ. ಬೇಡಿಕೆ ಇಟ್ಟಿದ್ದ. ಶ್ರೀಕಾಂತ್‌ ಕೂಡಾ ಹಣ ಕೊಡಲು ಒಪ್ಪಿದ್ದರು. ಹೀಗಾಗಿ ಹಣ ಹಿಡಿದುಕೊಂಡು ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ಬನ್ನಿ ಎಂದು ಶಾಂತೇಶ್‌ ಕೊರ್ತಿ ಹೇಳಿದ್ದ. ಗುರುವಾರ ರಾತ್ರಿಗೆ ಮುಹೂರ್ತ ಫಿಕ್ಸ್‌ ಆಗಿತ್ತು.

ಕತ್ತಲಾಗುತ್ತಿದ್ದಂತೆಯೇ ಶಾಂತೇಶ್‌ ಕೊರ್ತಿ ಸ್ಯಾಟಲೈಟ್‌ ಬಸ್‌ ಸ್ಟಾಂಡ್‌ಗೆ ಬಂದಿದ್ದ. ಶ್ರೀಕಾಂತ್‌ ಕೂಡಾ ಹಣ ಹಿಡಿದುಕೊಂಡೇ ಬಂದಿದ್ದರು. ಎರಡು ಲಕ್ಷ ರೂಪಾಯಿಯನ್ನು ಶಾಂತೇಶ್‌ ಕೊರ್ತಿಗೆ ನೀಡಿದರು. ಅಷ್ಟು ಹೊತ್ತಿಗೆ ಒಂದು ಕಡೆ ಯುವಕರು, ಇನ್ನೊಂದು ಕಡೆ ಪೊಲೀಸರ ಎಂಟ್ರಿ ಆಯಿತು!

ಶ್ರೀಕಾಂತ್‌ ಅವರು ಅಲ್ಲಿಗೆ ಹೋಗುವ ಮೊದಲು ತನ್ನ ಗೆಳೆಯರಿಗೆ ಮತ್ತು ಅವರ ಮೂಲಕ ಪೊಲೀಸರಿಗೆ ವಿಷಯ ತಿಳಿಸಿದ್ದರು. ಅಚ್ಚರಿ ಎಂದರೆ, ಪೊಲೀಸರು ಬಂದು ಎದುರು ನಿಂತರೂ ಶಾಂತೇಶ್‌ ಮೂರ್ತಿ ಶಾಂತನಾಗಿಯೇ ಇದ್ದ! ಅವರು ಕೇಳಿದ ಪ್ರಶ್ನೆಗಳಿಗೆ ಭಾರಿ ತಣ್ಣಗೆ ಉತ್ತರಿಸಿದ. ಕೆಲಸ ಕೊಡಿಸೋದು ಖಂಡಿತ ಅಂತಲೂ, ಕೆಲಸ ಕೊಡಿಸುವುದು ತಾನಲ್ಲ, ಕೃಷ್ಣ ಅನ್ನುವ ಬೇರೊಬ್ಬರು ಅಂತಲೂ ವಿವರಿಸಿದ!
ಕೃಷ್ಣ ಎನ್ನುವವರ ಸೂಚನೆ ಮೇರೆಗೆ ಹಣ ಪಡೆಯಲು ಬಂದಿದ್ದಾಗಿ ಹೇಳಿಕೆ ನೀಡಿದ ಶಾಂತೇಶ್, ಕೆಲಸ ಕೊಡಿಸೋಣ ಸರ್‌ ಎಂದು ಪೊಲೀಸರ ಮುಂದೆಯೇ ತುಂಬ ತಣ್ಣಗೆ ವಿವರಿಸಿದ್ದಾನೆ. ಪೊಲೀಸ್‌ ಠಾಣೆಗೆ ಹೋಗೋಣ ಎಂದು ಪೊಲೀಸರು ಹೇಳಿದಾಗಲೂ ಓಕೆ ಸರ್‌ ಎಂದು ತುಂಬ ಖುಷಿಯಾಗಿಯೇ ಹೊರಟಿದ್ದಾನೆ.

ಆರೋಪಿ ಶಾಂತೇಶ್‌ ಕೊರ್ತಿ (ಬಿಳಿ ಅಂಗಿ ಹಾಕಿದವನು) ಎಷ್ಟು ಖುಷಿಯಾಗಿ ಠಾಣೆಗೆ ಹೊರಟಿದ್ದಾನೆ ನೋಡಿ.

ಇದೀಗ ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದು, ಇದುವರೆಗೆ ಎಷ್ಟು ಮಂದಿಗೆ ಈತ ಮೋಸ ಮಾಡಿದ್ದು, ಆತನ ಹಿಂದಿರುವವರು ಯಾರು ಎಂಬ ಮಾಹಿತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ | Blackmail ಗೆ ಬೇಸತ್ತು ಸೆಲೂನ್‌ ಉದ್ಯೋಗಿ ಯುವಕ ಆತ್ಮಹತ್ಯೆ, video honey trap ಶಂಕೆ

Exit mobile version