ಬೆಂಗಳೂರು: ದೇಶದ ಪ್ರತಿಷ್ಠಿತ ಉದ್ಯಮಿ, ಬಯೋಕಾನ್ ಲಿಮಿಟೆಡ್‌ನ ಸ್ಥಾಪಕರು ಹಾಗೂ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿರುವ ಕಿರಣ್ ಮಜುಂದಾರ್ ಷಾ ಅವರ ಪತಿ ಜಾನ್ ಶಾ ಸೋಮವಾರ (ಅಕ್ಟೋಬರ್ ೨೨) ನಿಧನರಾದರು. ಅವರಿಗೆ ೭೦ ವರ್ಷವಾಗಿತ್ತು.
ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜಾನ್ ಷಾ ಅವರು ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧರಾದರು. ಕೆಲವು ತಿಂಗಳ ಹಿಂದಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ಮಜುಂದಾರ್ ಷಾ ಅವರಿಗೆ ಇದು ಬೆನ್ನು ಬೆನ್ನಿಗೇ ಮತ್ತೊಂದು ಆಘಾತವಾಗಿದೆ. ಜಾನ್ ಷಾ ಅವರ ಮೃತದೇಹದ ಅಂತಿಮಕ್ರಿಯೆಗಳು ವಿಲ್ಸನ್ ಗಾರ್ಡನ್‌ನಲ್ಲಿ ನಡೆಯಿತು.
ಹಿರಿಯ ಉದ್ಯಮಿಯಾಗಿದ್ದ ಸಾಧಕ
ಜಾನ್ ಷಾ ಅವರು ಬಯೋಕಾನ್‌ನಲ್ಲಿ ಉಪಾಧ್ಯಕ್ಷರು ಮತ್ತು ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು. ೧೯೯೯ರಿಂದ ಅವರು ನಿರ್ದೇಶಕ ಮಂಡಳಿಯಲ್ಲಿದ್ದರು. ಅವರು ಬಯೋಕಾನ್ ಕಂಪನಿಯ ನಾನಾ ಸಲಹಾ ಮಂಡಳಿಯಲ್ಲಿದ್ದರು.
ಜಾನ್ ಷಾ ಮತ್ತು ಕಿರಣ್ ಮಜುಂದಾರ್ ಅವರ ಮದುವೆ ೧೯೯೮ರಲ್ಲಿ ಮದುವೆಯಾಗಿದ್ದರು. ಆಗ ಜಾನ್ ಅವರು ಮಧುರಾ ಕೋಟ್ಸ್‌ನ ಅಧ್ಯಕ್ಷರಾಗಿದ್ದರು. ಅದಕ್ಕಿಂತ ಮೊದಲು ಕೋಟ್ಸ್ ವಿಯೆಲ್ಲಾ ಗ್ರೂಪ್‌ನ ಆಡಳಿತ ನಿರ್ದೇಶಕರಾಗಿದ್ದರು.
ಗ್ಲಾಸ್ಗೌ ವಿವಿಯಿಂದ ಇತಿಹಾಸ ಮತ್ತು ರಾಜಕೀಯ ಆರ್ಥಿಕತೆಯಲ್ಲಿ ಎಂಎ ಪದವಿ ಪಡೆದಿದ್ದ ಜಾನ್ ಶಾ ಅವರು ಅದೇ ವಿವಿಯಿಂದ ಗೌರವ ಡಾಕ್ಟರೇಟನ್ನು ಸ್ವೀಕರಿಸಿದರು.