Site icon Vistara News

WEF 2024: ರಾಜ್ಯದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಗ್ಲೋಬಲ್ ಸರ್ವೀಸ್ ಸೆಂಟರ್ ಸ್ಥಾಪನೆ

WEF 2024

ದಾವೋಸ್: ರಾಜ್ಯದ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಅವರ ನೇತೃತ್ವದ ನಿಯೋಗವು ವಿಶ್ವ ಆರ್ಥಿಕ ವೇದಿಕೆಯ-24ರ (WEF 2024) ವಾರ್ಷಿಕ ಶೃಂಗಸಭೆಯಲ್ಲಿ ಸೋಮವಾರ ಮುಂಚೂಣಿ ಕಂಪನಿಗಳಾದ ಜಾನ್ಸನ್ ಆ್ಯಂಡ್ ಜಾನ್ಸನ್, ಐಬಿಎಂ ಮತ್ತು ಸ್ಕ್ನೀಡರ್ ಎಲೆಕ್ಟ್ರಿಕ್ ಕಂಪನಿಗಳ ಜೊತೆ ಮಹತ್ವದ ಮಾತುಕತೆ ನಡೆಸಿತು.

ಸಚಿವ ಪಾಟೀಲ್‌ರೊಂದಿಗೆ ಮಾತುಕತೆ ನಡೆಸುವ ಸಂದರ್ಭದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಪ್ರತಿನಿಧಿಗಳು ಕರ್ನಾಟಕದಲ್ಲಿ ಕಂಪನಿಯು ಗ್ಲೋಬಲ್ ಸರ್ವೀಸ್ ಸೆಂಟರ್ (ಜಾಗತಿಕ ಸೇವಾ ಕೇಂದ್ರ) ಆರಂಭಿಸುವ ಯೋಜನೆ ಹೊಂದಿದ್ದು, ಇದರಿಂದ 200 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ತನ್ನ ತಯಾರಿಕಾ ಉಪಸ್ಥಿತಿ ಹೆಚ್ಚಿಸುವ ಗುರಿ ಸಹ ಇದ್ದು, ಮುಖ್ಯವಾಗಿ, ವೈದ್ಯಕೀಯ ತಂತ್ರಜ್ಞಾನ ಮತ್ತು ಜೀವ ವಿಜ್ಞಾನಗಳ ಕ್ಷೇತ್ರದ ಬಗ್ಗೆ ಒತ್ತುಕೊಡಲಾಗುವುದು. ಆರೋಗ್ಯಸೇವಾ ವಲಯದಲ್ಲಿನ ತನ್ನ ಆದ್ಯತೆಯನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ ಜಾನ್ಸನ್ ಆ್ಯಂಡ್ ಜಾನ್ಸನ್ ಪ್ರತಿನಿಧಿಗಳು, ಕ್ಯಾನ್ಸರ್ ಮತ್ತು ಎಚ್ಐವಿ ಚಿಕಿತ್ಸೆ ಲಭ್ಯವಾಗಿಸಲು ಗಮನ ಕೇಂದ್ರೀಕರಿಸಲಾಗುವುದು ಎಂದು ಹೇಳಿದರು.

ಐಬಿಎಂ ಕಂಪನಿ ಜತೆ ನಡೆದ ಸಮಾಲೋಚನೆಯಲ್ಲಿ, ಇ- ಆಡಳಿತದ ಬಗ್ಗೆ ವಿಚಾರ ವಿನಮಯ ನಡೆಯಿತು.
ಇ-ಆಡಳಿತದ ದಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ, ಕಂಪನಿಯು ಸರ್ಕಾರದ ಉಪಕ್ರಮಗಳಿಗೆ ಯಾವ ರೀತಿ ಬೆಂಬಲ ನೀಡಬಹುದು ಎಂಬುದರ ಬಗ್ಗೆ ಅವಲೋಕಿಸಲಾಯಿತು. ಕಂಪನಿಯು ಬೆಂಗಳೂರು ಉತ್ತರ ಭಾಗದ ಬಗೆಗೆ ಹೆಚ್ಚಿನ ಗಮನ ನೀಡಲಿದೆ ಎಂದು ಚರ್ಚೆಯ ವೇಳೆ ಅದರ ಪ್ರತಿನಿಧಿಗಳು ತಿಳಿಸಿದರು.

ನಂತರ, ಸ್ಕ್ನೀಡರ್ ಎಲೆಕ್ಟ್ರಿಕ್ ಕಂಪನಿ ಜೊತೆ ನಡೆದ ಚರ್ಚೆಯ ವೇಳೆ, ಆ ಕಂಪನಿಯ ಉನ್ನತಾಧಿಕಾರಿಗಳು ಅತ್ತಿಬೆಲೆಯಲ್ಲಿ ನಿರ್ಮಾಣವಾಗಲಿರುವ 5 ಕಾರ್ಖಾನೆಗಳಿರುವ ಘಟಕಕ್ಕೆ ಹೆಚ್ಚಿನ ಹೂಡಿಕೆ ಮಾಡುತ್ತಿರುವುದಾಗಿ ಹೇಳಿದರು.

ಇದನ್ನೂ ಓದಿ | CM Siddaramaiah : ಎಲ್ಲರಲ್ಲೂ ಕೊಳ್ಳುವ ಶಕ್ತಿ ತುಂಬುವುದೇ ಧ್ಯೇಯ; ಗ್ಯಾರಂಟಿ ಸಮರ್ಥಿಸಿದ ಸಿಎಂ

ಎಲೆಕ್ಟ್ರೀಷಿಯನ್ ಗಳಿಗೆ ಸಿಎಸ್ಆರ್ ಕಾರ್ಯಕ್ರಮದಡಿ ಹೆಚ್ಚಿನ ತರಬೇತಿ ನೀಡುವ ಸಂಬಂಧವಾಗಿ ಆರು ಎನ್‌ಜಿಒಗಳ ಜೊತೆ ಮಾತುಕತೆ ನಡೆಸುತ್ತಿರುವುದಾಗಿಯೂ ಕಂಪನಿಯ ಪ್ರತಿನಿಧಿಗಳು ವಿವರಿಸಿದರು.

Exit mobile version