Site icon Vistara News

Journalism Day : ಸತ್ಯಾನ್ವೇಷಣೆ, ಸಾಮಾಜಿಕ ಕಾಳಜಿಯೇ ಪತ್ರಕರ್ತರ ಮೂಲ ಗುಣವಾಗಲಿ ಎಂದ ಹರಿಪ್ರಕಾಶ್‌ ಕೋಣೆಮನೆ

Journalism day Hariprakash Konemane

ಯಲ್ಲಾಪುರ: ಪತ್ರಕರ್ತ ಎಂದರೆ ಸತ್ಯದ ಶೋಧಕ (Fact Finder). ಪ್ರತ್ಯಕ್ಷವಾಗಿ ಕಂಡ ಪರೋಕ್ಷವಾಗಿ ಕೇಳಿದ ವಿಷಯಗಳ ಸತ್ಯಾನ್ವೇಷಣೆ ಮಾಡುವುದು (education news) ಪತ್ರಕರ್ತನ ಮೂಲಗುಣವಾಗಬೇಕು. ಸಾಮಾಜಿಕ ಕಾಳಜಿ (Social concern) ಮತ್ತು ಒಳಿತಿನ ಆಶಯಗಳು ಇರುವ ಪತ್ರಕರ್ತರು ವೃತ್ತಿ ಬದುಕಿನಲ್ಲಿ ಗೆಲ್ಲುತ್ತಾರೆ ಮತ್ತು ಸಮಾಜಕ್ಕೂ ಕೊಡುಗೆ ನೀಡುತ್ತಾರೆ ಎಂದು ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರು ಮತ್ತು ಸಿಇಒ ಆಗಿರುವ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಹೇಳಿದರು. ಅವರು ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ (Vishwadarshana Educational Institute) ಶ್ರೀ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ಸ್‌ ಯೂನಿಯನ್ ಯಲ್ಲಾಪುರ ಘಟಕದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ (Journalism Day) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಿಕಾ ದಿನಾಚರಣೆಯನ್ನು ಹರಿಪ್ರಕಾಶ್‌ ಕೋಣೆಮನೆ ಅವರು ಉದ್ಘಾಟಿಸಿಸಿದರು. ನಾಗರಾಜ ಇಳೆಗುಂಡಿ ಮತ್ತು ಶಂಕರ್‌ ಭಟ್‌ ತಾರಿಮಕ್ಕಿ ಉಪಸ್ಥಿತರಿದ್ದರು.

ಪತ್ರಕರ್ತರು ಯೋಧರಿದ್ದಂತೆ

ʻʻಪತ್ರಕರ್ತ ಒಬ್ಬ ಯೋಧನಂತೆ. ಎಲ್ಲಿಯೇ, ಯಾವುದೇ ಸನ್ನಿವೇಶದಲ್ಲೂ ಕಾರ್ಯ ನಿರ್ವಹಿಸುವ ಧೋರಣೆ, ಮಾನಸಿಕ ಕ್ಷಮತೆ ಹೊಂದಿರಬೇಕು. ಪತ್ರಕರ್ತರಿಗೆ ಮಣ್ಣಿನ ಸೊಗಡಿರಬೇಕು. ಕಷ್ಟಗಳನ್ನು ಎದುರಿಸುವ ಶಕ್ತಿ ಇರಬೇಕು. ಅಂದಾಗ ಮಾತ್ರ ಆತ ಯಶಸ್ಸು ಕಾಣಲು ಸಾಧ್ಯʼʼ ಎಂದು ಹೇಳಿದ ಹರಿಪ್ರಕಾಶ್‌ ಕೋಣೆಮನೆ ಅವರು, ನಮ್ಮ ಉತ್ತರ ಕನ್ನಡದ ಮಣ್ಣಿಗೆ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ವಿಶೇಷವಾದ ಗುಣವಿದೆ. ಇಲ್ಲಿನ ಅನೇಕರು ರಾಜ್ಯದ ಅನೇಕ ಪತ್ರಿಕೆಗಳ ಪ್ರಮುಖ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹರಿಪ್ರಕಾಶ್‌ ಕೋಣೆಮನೆ ಮಾತನಾಡಿದರು.

ಪ್ರವೃತ್ತಿಯಾಗಿದ್ದಾಗ ಉತ್ತಮ ಕೊಡುಗೆ

ʻʻನಮ್ಮ ಜೀವನದಲ್ಲಿ ವೃತ್ತಿಗಿಂತಲೂ ಪ್ರವೃತ್ತಿಗೆ ವಿಶೇಷ ಸ್ಥಾನವಿದೆ. ಮಾಡುವ ವೃತ್ತಿಯನ್ನು ಪ್ರೀತಿಸದೇ ಇದ್ದರೂ, ಪ್ರವೃತ್ತಿಯನ್ನು ಎಂದಿಗೂ ದ್ವೇಷಿಸುವುದಿಲ್ಲ. ಪತ್ರಿಕೋದ್ಯಮವನ್ನು ಯಾರೆಲ್ಲ ಪ್ರವೃತ್ತಿಯಾಗಿ ಸ್ವೀಕರಿಸುತ್ತಾರೋ ಅವರಿಂದ ಪತ್ರಿಕೋದ್ಯಮಕ್ಕೆ ಅಪಾರ ಕೊಡುಗೆ ದೊರೆತಿದೆʼʼ ಎಂದು ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಪ್ರಚಲಿತ ವಿದ್ಯಮಾನಗಳ ಅರಿವು ಇರಲಿ

ʻʻಪತ್ರಕರ್ತನಿಗೆ ಪ್ರಚಲಿತ ಆಗುಹೋಗುಗಳು, ನ್ಯಾಯಾಂಗ ವ್ಯವಸ್ಥೆ ಹಾಗೂ ರಾಜಕೀಯದ ಕುರಿತು ಕನಿಷ್ಠ ಮಾಹಿತಿ ಇರಬೇಕು. ಘಟನೆಗಳ ಒಳ ವಿಶ್ಲೇಷಣೆ ನೀಡಿದಾಗ ಮಾತ್ರ ಮಾಧ್ಯಮ ಜನರಿಗೆ ನಿಖರವಾದ ವಿಚಾರ ತಲುಪಿಸಿದಂತಾಗುತ್ತದೆʼʼ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ವಿಜಯವಾಣಿ ಪತ್ರಿಕೆಯ ಸುದ್ದಿ ಸಂಪಾದಕರು ಹಾಗೂ ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ನ ನಿಯೋಜಿತ ಪ್ರಾಂಶುಪಾಲರಾದ ನಾಗರಾಜ ಇಳೆಗುಂಡಿ ಅವರು.

ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ನಾಗರಾಜ ಇಳೆಗುಂಡಿ ಮಾತನಾಡಿದರು.

ವಿಶೇಷ ಉಪನ್ಯಾಸ ನೀಡಿದ ಅವರು, ಸಕಾರಾತ್ಮಕ ಪತ್ರಿಕೋದ್ಯಮದ ಮೂಲಕ ಜನರನ್ನು ತಲುಪುವ ಆಯಾಮಗಳನ್ನು ಪತ್ರಕರ್ತರು ರೂಢಿಸಿಕೊಳ್ಳಬೇಕು. ಜನಪರವಾದ ನಿಲುವನ್ನು ಎತ್ತಿಹಿಡಿಯುವ ವರದಿಗಳು ಮಾಧ್ಯಮಗಳ ಏಳ್ಗೆಗೆ ಸಹಕಾರಿಯಾಗಲಿವೆʼʼ ಎಂದರು. ಸ್ವಾತಂತ್ರ್ಯ ಹೋರಾಟದಲ್ಲೂ ಪತ್ರಿಕೆಗೆ ಮಹತ್ವದ ಸ್ಥಾನವಿದ್ದುದನ್ನು ಅವರು ಸ್ಮರಿಸಿದರು.

ಪತ್ರಿಕೋದ್ಯಮಕ್ಕೆ ದೊಡ್ಡ ಕೊಡುಗೆಗಳನ್ನು ನೀಡುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಲೂ ಹೊಸ ಉತ್ಸಾಹದ ಪೀಳಿಗೆಗಳು ಮುಂದುವರಿಯುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು ನಾಗರಾಜ ಇಳೆಗುಂಡಿ.

ಉತ್ತಮ ಸುದ್ದಿಯನ್ನು ಬಿತ್ತರಿಸೋಣ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಜೆಯು ತಾಲೂಕಾಧ್ಯಕ್ಷ ಶಂಕರ್ ಭಟ್ ತಾರಿಮಕ್ಕಿ ಅವರು ಜನರಿಗೆ ಉತ್ತಮ ಸುದ್ದಿ ಕೊಡುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ʻʻಪತ್ರಕರ್ತರಾದ ನಾವು ಈ ಹಿಂದೆ ಇದ್ದ ಉತ್ಸುಕತೆಯನ್ನು ಕಳೆದುಕೊಂಡಿದ್ದೇವೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಸುದ್ದಿಗಳನ್ನು ಹೆಚ್ಚಾಗಿ ಅವಲಂಬಿಸಿದ್ದೇವೆ. ಕಾರ್ಯಕ್ರಮಗಳ ಸಂದೇಶವನ್ನು ಸಮಾಜಕ್ಕೆ ಸಾರುವ ಕಾರ್ಯದಲ್ಲಿ ನಾವು ಹಿಂದೇಟು ಹಾಕುತ್ತಿದ್ದೇವೆ. ಉತ್ತಮ ಕಾರ್ಯಕ್ರಮಗಳ ಪೂರಕ ಸುದ್ದಿ ಬಿತ್ತರಿಸುವ ಕಾರ್ಯ ಮಾಡೋಣʼʼ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಜಯ ಭಾರತೀಯ, ಮುಖ್ಯ ಶಿಕ್ಷಕರು, ಶಿಕ್ಷಕರು, ಸಮಾಜದ ಪ್ರಮುಖರು ಇದ್ದರು. ಕೆಜೆಯು ಉಪಾಧ್ಯಕ್ಷ ವಿಶ್ವೇಶ್ವರ ಗಾಂವ್ಕರ್ ಸ್ವಾಗತಿಸಿದರು. ಕಾರ್ಯದರ್ಶಿ ಕೇಬಲ್ ನಾಗೇಶ ನಿರ್ವಹಿಸಿದರು. ರಾಜ್ಯ ಸಮಿತಿ ಸದಸ್ಯ ನಾಗರಾಜ ಮದ್ಗುಣಿ ವಂದಿಸಿದರು.

ಇದನ್ನೂ ಓದಿ : ಪುಸ್ತಕಗಳನ್ನು ಪ್ರೀತಿಸಿ, ಅವು ನಿಮ್ಮ ಬದುಕನ್ನು ಬೆಳಗಿಸುತ್ತವೆ: ಹರಿಪ್ರಕಾಶ್‌ ಕೋಣೆಮನೆ

Exit mobile version