Site icon Vistara News

Karnataka Election: ಎಲ್ಲ ಪಕ್ಷಗಳಲ್ಲಿ ಕುಟುಂಬ ರಾಜಕಾರಣವಿದೆ, ಆದ್ರೆ ಬಿಜೆಪಿಗೆ ಕಾರ್ಯಕರ್ತರೇ ಕುಟುಂಬ: ಜೆ.ಪಿ.ನಡ್ಡಾ

JP Nadda says All parties are doing family politics but BJP workers are the family

#image_title

ಉಡುಪಿ: ಎಲ್ಲಾ ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತಿವೆ. ಕಾಂಗ್ರೆಸ್‌ನಲ್ಲಿ ಕುಟುಂಬವೇ ರಾಜಕಾರಣ ಮಾಡುತ್ತಿದೆ. ಅಮ್ಮ, ಮಗ, ಮಗಳು ಎಲ್ಲರೂ ಕುಟುಂಬ ರಾಜಕಾರಣ ‌ಮಾಡುತ್ತಿದ್ದಾರೆ. ದೇಶದ ಬಹುತೇಕ ಎಲ್ಲಾ ಪಾರ್ಟಿಗಳು ಕುಟುಂಬ ರಾಜಕಾರಣ (Karnataka Election) ಮಾಡುತ್ತಿವೆ. ಆದರೆ, ಭಾರತೀಯ ಜನತಾ ಪಾರ್ಟಿಗೆ ಕಾರ್ಯಕರ್ತರೇ ಕುಟುಂಬ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ನಗರದ ಎಂ.ಜಿ.ಎಂ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಬೂತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಮಗೆ ಬಿಜೆಪಿ ಕಾರ್ಯಕರ್ತರಾಗುವ ಭಾಗ್ಯ ಸಿಕ್ಕಿದೆ, ಇದು ನಮ್ಮ ಪಾಲಿನ ಸೌಭಾಗ್ಯ. ಬಹಳ ದೊಡ್ಡ ಕಾರ್ಯಕರ್ತ ವರ್ಗ, ಕೇಡರ್‌ ವ್ಯವಸ್ಥೆ ಹಾಗೂ ವಿಚಾರಗಳಿರುವ ದೇಶದ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | D Roopa IPS : ಹಿರಿಯ ಅಧಿಕಾರಿಗಳನ್ನೂ ಬಿಡದೆ ಬೆನ್ನಟ್ಟುವ ಡಿ. ರೂಪಾ; ಯಾರಿವರು, ಇವರ ಹಿನ್ನೆಲೆ ಏನು?

ʻʻಭಾರತೀಯ ಜನತಾ ಪಕ್ಷದ ಇತಿಹಾಸದಲ್ಲಿ ಉಡುಪಿಗೆ ವಿಶೇಷ ಸ್ಥಾನವಿದೆ. ಕೃಷ್ಣ ಮಠಕ್ಕೆ ಭೇಟಿ ನೀಡಿ ಪಾವನನಾಗಿದ್ದೇನೆ. 1968ರಲ್ಲಿ ಉಡುಪಿಯಲ್ಲಿ ಬಿಜೆಪಿ ಮುನಿಸಿಪಾಲಿಟಿ ಅಧಿಕಾರ ಹಿಡಿಯುವುದರೊಂದಿಗೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿ ಗೆದ್ದಿತ್ತು. ಈ ಮೂಲಕ ಉಡುಪಿಯಲ್ಲಿ ಬಿಜೆಪಿಗೆ (BJP Meeting) ಯಶಸ್ಸು ‌ಮತ್ತು ಸಾರ್ವಜನಿಕ ಬೆಂಬಲ ಸಿಕ್ಕಿತ್ತು. ನನಗೆ ಮತ್ತು ವಿ.ಎಸ್.ಆಚಾರ್ಯರಿಗೆ 25-30 ವರ್ಷಗಳ ಅಂತರವಿತ್ತು. ಆದರೂ ಅವರ ಜತೆ ಹಲವು ಬಾರಿ ಪಕ್ಷದ ಕೆಲಸ ಮಾಡಿದ್ದೇನೆ. ವಿ.ಎಸ್.ಆಚಾರ್ಯ ಓರ್ವ ಪ್ರಮಾಣಿಕ ಮತ್ತು ಸರಳ, ಶುದ್ಧ ರಾಜಕಾರಣಿʼʼ ಎಂದು ಸ್ಮರಿಸಿದರು.

ಕೊರೊನಾ ಸಂಕಷ್ಟ ಪರಿಸ್ಥಿತಿಯನ್ನು ಮೋದಿ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಕೋವಿಡ್ ಹೊತ್ತಲ್ಲಿ ಮೋದಿ ಶೇ. 100 ವ್ಯಾಕ್ಸಿನೇಷನ್‌ ವ್ಯವಸ್ಥೆ ‌ಮಾಡಿದ್ದಾರೆ. ಯುಕ್ರೇನ್-ರಷ್ಯಾ ಯುದ್ಧದ ವೇಳೆ ಪ್ರಧಾನಿ ಮೋದಿ ದೇಶದ ಮಕ್ಕಳನ್ನು ಕರೆ ತರುವ ವ್ಯವಸ್ಥೆ ಮಾಡಿದ್ದರು. ಮೋದಿ ಅವರು ರಷ್ಯಾ ‌ಮತ್ತು ಉಕ್ರೇನ್ ಅಧ್ಯಕ್ಷರ ಜತೆ ಮಾತುಕತೆ ನಡೆಸಿ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆ ತಂದಿದ್ದರು. ಫೆ.6ರಂದು‌ ಮೋದಿ ತುಮಕೂರು ಜಿಲ್ಲೆಯಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟಿಸಿದ್ದರು. ಇದು ಕರ್ನಾಟಕದ ಇತಿಹಾಸದಲ್ಲಿ ಹೊಸ ಕ್ರಾಂತಿಯಾಗಲಿದೆ ಎಂದು ತಿಳಿಸಿದರು.

ಯಡಿಯೂರಪ್ಪ ‌ಮತ್ತು ಬೊಮ್ಮಾಯಿ ರಾಜ್ಯದ ಮೂಲೆ‌ಮೂಲೆ ತಲುಪಿದ್ದಾರೆ. ಎಲ್ಲಾ ಜಾತಿ-ಧರ್ಮಕ್ಕೆ ರಾಜ್ಯ ಮತ್ತು ಕೇಂದ್ರದ ಯೋಜನೆಗಳನ್ನು ತಲುಪಿಸಿದ್ದಾರೆ. ಬೂತ್‌ನ ಅಂತಿಮ ವ್ಯಕ್ತಿಯವರೆಗೆ ನೀವು ತಲುಪಬೇಕು. ಈ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ‌ಜನರಿಗೆ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಮನೆ ಮನೆಗೆ ತಲುಪಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಟ್ಟೆ ಹೊಲಿಸಿದವರು ನಿರುದ್ಯೋಗಿಗಳಾಗುತ್ತಾರೆ. ಬಿಜೆಪಿ ಮತ್ತೊಮ್ಮೆ 150 ಸ್ಥಾನಗಳಿಂದ ಗೆದ್ದು ಬರುತ್ತೆ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿಕಾರಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಕೆಲವರು ಎಲೆಕ್ಷನ್ ಹಿಂದುಗಳಿರುತ್ತಾರೆ. ಅವರಿಗೆ ಕುಂಕುಮ‌ ಕಂಡರೆ ಭಯ. ಕೇಸರಿ ಬರೀ ಬಾವುಟದಲ್ಲಿ ಇಲ್ಲ, ನಮ್ಮ ಹೃದಯದಲ್ಲಿದೆ. ಆದರೆ ಕೇಸರಿ ಕಂಡರೆ ಆಗದ ಮಾಜಿ ಸಿಎಂ ಒಬ್ಬರು ನಾನು ಹಿಂದು ಎನ್ನುತ್ತಾರೆ, ಆದರೆ ಹಿಂದುತ್ವವಾದಿಯಲ್ಲ ಎನ್ನುತ್ತಾರೆ. ಹಿಂದು ಎಂದರೆ ದೇಹ, ಹಿಂದುತ್ವ ಎಂಬುವುದು ಜೀವ. ದೇಹದಿಂದ ಜೀವ ಹೋದರೆ ಅವರು ಹೆಣಕ್ಕೆ ಸಮ ಎಂದರು.

ಜೀವ ಇಲ್ಲದ ಕಾಂಗ್ರೆಸ್ ಪಕ್ಷವನ್ನು ಬಹಳ ಹೊತ್ತು ಇಟ್ಟುಕೊಳ್ಳಬಾರದು. ಹಾಗಾಗಿ ಪೂಜಾ ಕಾರ್ಯ, ಸಂಸ್ಕಾರ ಮಾಡಿ ಸ್ಮಶಾನಕ್ಕೆ ‌ತೆಗೆದುಕೊಂಡು ಹೋಗಬೇಕು. ಅಂದರೆ ಕಾಂಗ್ರೆಸ್ ಅನ್ನು ರಾಜಕೀಯವಾಗಿ ಸ್ಮಶಾನಕ್ಕೆ ಕಳುಹಿಸಬೇಕು. ಹೂಳುವವರು ಹೂಳಲಿ, ಸುಡುವವರು ಸುಡಲಿ, ಹೂ ಹಾಕಿ ಸ್ಮಶಾನಕ್ಕೆ ಕಳುಹಿಸಿ. ಪಿಂಡ ಹಾಕುವ ಜವಾಬ್ದಾರಿ ‌ಇಲ್ಲ, ಆ ದಂಡ ಪಿಂಡಗಳು ಇದ್ದಾಗ ಸರಿಯಾಗಿ ತಿಂದಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ | Karnataka Election 2023 : ಸಮಾನ ನಾಗರಿಕ ಸಂಹಿತೆ ಜಾರಿ : ಕರಾವಳಿಯ ಸಂತರಿಂದ ಜೆ.ಪಿ. ನಡ್ಡಾ ಮುಂದೆ ಬೇಡಿಕೆ

ಕಲ್ಲಡ್ಕ ಶಾಲೆಯ ಅನ್ನ ಕಿತ್ತುಕೊಂಡಿದ್ದು ಕಾಂಗ್ರೆಸ್‌ನ ನೀತಿ. ದೇಶ ದ್ರೋಹಿ ಪಿಎಫ್ಐನವರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದು ಕಾಂಗ್ರೆಸ್ ನೀತಿ. ಇನ್ನು ಜೆಡಿಎಸ್‌ನವರಿಗೆ ನೀತಿಯೇ ಇಲ್ಲ. ಅವರದ್ದು‌ ಇವತ್ತು ಒಂದು, ನಾಳೆ ಒಂದು ನೀತಿ. ಆದರೆ ಬಿಜೆಪಿಯದ್ದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನೀತಿ. ಡಿಎನ್ಎ ಮೂಲಕ ಲೀಡರ್ ಶಿಪ್ ಪಡೆಯುವ ದೌರ್ಬಾಗ್ಯ ನಮ್ಮ ಪಕ್ಷಕ್ಕಿಲ್ಲ. ಇಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ನಾಯಕನೇ, ನೇತಾರನೇ ಆಗಿದ್ದಾರೆ. ಬಿಜೆಪಿಯ ಒಬ್ಬೊಬ್ಬ ಕಾರ್ಯಕರ್ತನೂ ಪಕ್ಷದ ಮಾಲೀಕ ಎಂದು ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲೆಯ ಬೂತ್‌ನ ಅಧ್ಯಕ್ಷರು, ಕಾರ್ಯಕರ್ತರು ಸೇರಿ ಸಾವಿರಾರು ಮಂದಿ ಭಾಗಿಯಾಗಿದ್ದರು.

Exit mobile version