Site icon Vistara News

Areca Growers Meeting: ಬಿಜೆಪಿ ಮಾತ್ರ ಅಡಿಕೆ ಬೆಳೆಗಾರರ ಬೆನ್ನಿಗೆ ನಿಂತಿದೆ: ಜೆ.ಪಿ.ನಡ್ಡಾ

JP Nadda says Only BJP is standing behind arecanut growers

#image_title

ಚಿಕ್ಕಮಗಳೂರು: ಅಡಿಕೆಗೆ ನಾವು ಏನು ಮಾಡಿದ್ದೇವೆ, ವಿರೋಧ ಪಕ್ಷಗಳು ಏನು ಮಾಡಿವೆ ಎಂಬುವುದರ ಬಗ್ಗೆ ಚರ್ಚೆಗೆ ಬರಲಿ, ನಾವು ಸಿದ್ಧ. ಬಿ.ಎಸ್.ವೈ, ಬೊಮ್ಮಾಯಿ ಅಡಿಕೆ ಬೆಳೆಗಾರರ (Areca Growers Meeting) ಪರವಾಗಿದ್ದಾರೆ. ಕೆಲವರು ರೈತ, ಕಿಸಾನ್ ಮುಖಂಡರು ಎಂದು ಹೇಳುತ್ತಾರೆ. ಅವರು ಅಡಿಕೆಗೆ ಏನೂ ಮಾಡಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾದ ರೈತ ಮುಖಂಡ. ಬಿಜೆಪಿ ಮಾತ್ರ ಅಡಿಕೆ ಬೆಳೆಗಾರರ ಬೆನ್ನಿಗೆ ನಿಂತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಕೊಪ್ಪ ಪಟ್ಟಣದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಅಡಿಕೆ ಬೆಳೆಗಾರರಿಗಾಗಿ ಪಾದಯಾತ್ರೆ ಮಾಡಿದ ಏಕೈಕ ನಾಯಕ ಯಡಿಯೂರಪ್ಪ. 1982ರಲ್ಲೇ ಯಡಿಯೂರಪ್ಪ 62 ಕಿ.ಮೀ. ಪಾದಯಾತ್ರೆ ಮಾಡಿದ್ದರು. ರಾಜ್ಯದಲ್ಲಿ 2014ರಲ್ಲಿ ಕೇವಲ 2 ಮೆಗಾ ಪಾರ್ಕ್‌ ಇತ್ತು. ಈಗ 22 ಮೆಗಾ ಪಾರ್ಕ್‌ಗಳಿವೆ. ಕರ್ನಾಟಕದಲ್ಲಿ 2017ರಲ್ಲಿ 2.79 ಲಕ್ಷ ಎಕರೆ ಅಡಿಕೆ ಬೆಳೆ ಇತ್ತು. ಈಗ 5.41 ಲಕ್ಷ ಎಕರೆಯಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಶೇ.78 ರಷ್ಟು ಅಡಿಕೆ ಬೆಳೆಗಾರರ ಸಂಖ್ಯೆ ಹೆಚ್ಚಾಗಿದೆ. ನಾವು ಏನೇ ಮಾತನಾಡಿದರೂ ಅಂಕಿ ಅಂಶಗಳ ಆಧಾರದ ಮೇಲೆ ಮಾತನಾಡುತ್ತೇವೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ಕಳ್ಳ‌ ಅಡಿಕೆ ಮಾರಾಟಕ್ಕೆ ಅವಕಾಶವಿಲ್ಲ. ಆಮದು ಸುಂಕ ಶೇ.3 ತೆರಿಗೆ ಜಾಸ್ತಿ ಮಾಡಿದ್ದೇವೆ. ಎಲೆ ಚುಕ್ಕಿ, ಹಳದಿ ರೋಗಕ್ಕೆ ಲ್ಯಾಬ್ ಪ್ರಾರಂಭಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ಬಜೆಟ್‌ನಲ್ಲಿ 25 ಕೋಟಿ ರೂಪಾಯಿ ತೆಗೆದಿಡಲಾಗಿದೆ. ತೀರ್ಥಹಳ್ಳಿ-ಶೃಂಗೇರಿಗೆ 10 ಕೋಟಿ ರೂಪಾಯಿ ಹಣ ನೀಡಿ ರೋಗದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿದ್ದೇವೆ. ಎಲ್ಲಾ‌ ಸಮಯದಲ್ಲೂ ಬಿಜೆಪಿ ಅಡಿಕೆ ಹಾಗೂ ಬೆಳೆಗಾರರ ರಕ್ಷಣೆಗೆ ಸದಾ ಇರುತ್ತದೆ ಎಂದು ಹೇಳಿದರು.

ಇದನ್ನೂ ಓದಿ | Karnataka Election: ಎಲ್ಲ ಪಕ್ಷಗಳಲ್ಲಿ ಕುಟುಂಬ ರಾಜಕಾರಣವಿದೆ, ಆದ್ರೆ ಬಿಜೆಪಿಗೆ ಕಾರ್ಯಕರ್ತರೇ ಕುಟುಂಬ: ಜೆ.ಪಿ.ನಡ್ಡಾ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಅಡಿಕೆ, ಎಲೆ ಬಾಂಡ್ ಪೇಪರ್‌ಗಿಂತ ಹೆಚ್ಚು ಶಕ್ತಿಯುತವಾದುದು. ಅಡಿಕೆ, ಎಲೆ ಕೊಟ್ಟು ಕೊಟ್ಟ ಮಾತು ಶತಮಾನಕ್ಕೂ ನಿಲ್ಲುತ್ತದೆ. ಆದರೆ, ಅಂತಹ ಅಡಿಕೆ ಮಾನ ಕಳೆದವರು ಕಾಂಗ್ರೆಸ್ಸಿಗರು. 2012ರಲ್ಲಿ ಇಂದಿರಾ ಜೈಸಿಂಗ್ ಅಡಿಕೆ ಹಾನಿಕಾರಕ ಎಂದು ವರದಿ ನೀಡಿದ್ದರು. ಕಾಂಗ್ರೆಸ್ ಸುಳ್ಳನ್ನು ಮನೆ ದೇವರು ಮಾಡಿಕೊಳ್ಳಬಹುದು ಅಷ್ಟೆ. ಸುಳ್ಳೇ ಮನೆದೇವರು ಮಾಡಿಕೊಂಡು ಸುಳ್ಳಿನ ಮೂಲಕ ಸತ್ಯ ಮುಚ್ಚಿಡಲು ಆಗಲ್ಲ ಎಂದು ಹೇಳಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, 2012ರಲ್ಲಿ ಅಡಿಕೆಗೆ ಕನಿಷ್ಠ ಆಮದು ದರ (MIP) 75 ರೂಪಾಯಿ ಇತ್ತು. ಮೋದಿ ಸರ್ಕಾರ ಬಂದಾಗ 161 ರೂಪಾಯಿ ಆಗಿತ್ತು. ಈಗ ಅಡಿಕೆಯ ಎಂಐಪಿ 251 ಇದೆ. ಮುಂದೆ ಅಡಿಕೆಯ ಎಂಐಪಿ 350 ರೂಪಾಯಿ ಆಗಲಿದೆ, ಇದಕ್ಕೆ ಕಾರಣ ನರೇಂದ್ರ ಮೋದಿ ಅವರು ಕೈಗೊಂಡ ಕ್ರಮಗಳು ಎಂದು ಹೇಳಿದರು.

ಇದನ್ನೂ ಓದಿ | Karnataka Election: ಹೇಳಿದ್ದನ್ನು ಮಾಡೋ ತಾಕತ್ತು ಇರುವುದು ಬಿಜೆಪಿ ಜನಪ್ರತಿನಿಧಿಗಳಿಗೆ ಮಾತ್ರ:‌ ಜೆ.ಪಿ.ನಡ್ಡಾ

ಇಂದು ಅಡಿಕೆ ದರ ಜಾಸ್ತಿಯಾಗಲು ಕಾರಣ ಬಿಜೆಪಿ ಸರ್ಕಾರ. ಎಲೆಚುಕ್ಕಿ ರೋಗದಿಂದ ತೋಟಗಳು ನಾಶವಾಗಿವೆ. 1946ರಿಂದಲೂ ಹಳದಿ ಎಲೆ ರೋಗ ಬೆಳಗಾರರ ಬದುಕನ್ನು ನಾಶ ಮಾಡಿದೆ. ಎಲೆಚುಕ್ಕಿ ರೋಗದ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರ ವಿಜ್ಞಾನಿಗಳನ್ನು ಕೂಡ ನೇಮಕ ಮಾಡಿದೆ ಎಂದು ಹೇಳಿದರು.

ಶೃಂಗೇರಿ ಮಠದ ವಸತಿ ಗೃಹದಲ್ಲಿ ಜೆ.ಪಿ. ನಡ್ಡಾ ವಾಸ್ತವ್ಯ

ಸಮಾವೇಶದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶೃಂಗೇರಿಗೆ ತೆರಳಿದರು. ಶೃಂಗೇರಿಯ ನರಸಿಂಹವನದಲ್ಲಿ ಗುರು ನಿವಾಸಕ್ಕೆ ಭೇಟಿ ನೀಡಿ ಜಗದ್ಗುರುಗಳ ಬಳಿ ಆಶೀರ್ವಾದ ಪಡೆದು ಮಾತುಕತೆ ನಡೆಸಿದರು. ದೇವಸ್ಥಾನದ ಒಳಭಾಗದ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿರುವ ನಡ್ಡಾ, ಮಂಗಳವಾರ ಬೆಳಗ್ಗೆ ಸುಪ್ರಬಾತ ಪೂಜೆ ವೇಳೆ ಶಾರದಾಂಬೆ ದರ್ಶನ ಪಡೆದ ನಂತರ ಹೆಲಿಕಾಪ್ಟರ್ ಮೂಲಕ ಚಿಕ್ಕಮಗಳೂರಿಗೆ ತೆರಳಲಿದ್ದಾರೆ.

Exit mobile version