Site icon Vistara News

Karnataka Election: ಹೇಳಿದ್ದನ್ನು ಮಾಡೋ ತಾಕತ್ತು ಇರುವುದು ಬಿಜೆಪಿ ಜನಪ್ರತಿನಿಧಿಗಳಿಗೆ ಮಾತ್ರ:‌ ಜೆ.ಪಿ.ನಡ್ಡಾ

JP Nadda says Only BJPs peoples representative has the ability to do what is said

#image_title

ಉಡುಪಿ: ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ವೇಳೆ ದೇಶದಲ್ಲಿ ಮೋದಿ ಸರ್ಕಾರವಿದೆ (Karnataka Election). ನಾವು ಅವರ ಜತೆಗಿದ್ದೇವೆ ಎಂಬುದು ಹೆಮ್ಮೆ. 2047 ಬಂದಾಗ ನಮ್ಮ ದೇಶ ಉನ್ನತ ಸ್ಥಾನದಲ್ಲಿರುತ್ತದೆ. ಕಾಂಗ್ರೆಸ್ ಕಾರಣಕ್ಕೆ ನಾವು ವಿಚಲಿತರಾಗುವುದು ಬೇಡ. ಬಿಜೆಪಿ ಈ ಭಾಗದಲ್ಲಿ ಮಾಡಿದ ಕೆಲಸವನ್ನು ಜನ ಮರೆಯಲ್ಲ. ಹೇಳಿದ್ದನ್ನು ಮಾಡುವ ತಾಕತ್ತು ಬಿಜೆಪಿಯ ಜನಪ್ರತಿನಿಧಿಗೆ ಮಾತ್ರ ಇದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ಜಿಲ್ಲೆಯ ಬೈಂದೂರಿನಲ್ಲಿ ಆಯೋಜಿಸಿದ್ದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಭಾರತ ವಿಶ್ವದ ಫಾರ್ಮಸಿ ಆಗಿ ಮಾರ್ಪಟ್ಟಿದ್ದು, 200 ದೇಶಗಳಿಗೆ ಔಷಧ ಸರಬರಾಜು ಮಾಡುತ್ತಿದೆ. ಶೇ.39 ಮನೆಗಳಲ್ಲಿ ಮಾತ್ರ ಶೌಚಾಲಯ ಇತ್ತು, ಈಗ ಅದರ ಪ್ರಮಾಣ ಶೇ.98ಕ್ಕೆ ತಲುಪಿದೆ. ನಲ್ಲಿ ನೀರು ಶೇ.58 ರಷ್ಟು ಮನೆಗಳಿಗೆ ತಲುಪಿದೆ ಎಂದ ಅವರು, ಸಿದ್ದರಾಮಯ್ಯ ಕಾಲದಲ್ಲಿ ವಿದ್ಯುತ್ ಕಡಿತ ಸಮಸ್ಯೆ ಇತ್ತು. ಈಗ ಕಾಂಗ್ರೆಸ್‌ನ ಪವರ್ ಕಟ್ಟಾಗಿದೆ ಎಂದರು.

ಪ್ರಪಂಚದಲ್ಲಿ ಭಾರತ ಇಂಧನ ಬಳಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಮರು ಬಳಕೆ ಮಾಡಬಹುದಾದ ಇಂಧನ ವಿಭಾಗದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಡಿಜಿಟಲ್ ವಹಿವಾಟು ಕೇವಲ ಶೇ.3 ಇತ್ತು. ಈಗ ಪ್ರಪಂಚದ ಶೇ. 40 ವಹಿವಾಟು ನಮ್ಮ ದೇಶದಲ್ಲಿ ಆಗುತ್ತಿದೆ. 25 ಲಕ್ಷ ಕೋಟಿ ರೂಪಾಯಿ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. 300ಕ್ಕೂ ಅಧಿಕ ಯೋಜನೆಗಳ ಹಣ ಫಲಾನುಭವಿಗಳಿಗೆ ಮಧ್ಯವರ್ತಿಗಳಿಲ್ಲದೆ ತಲುಪುತ್ತಿದೆ. ಮೋದಿ ಅವರು ಒಂದು ಬಟನ್ ಒತ್ತಿದ ತಕ್ಷಣ ರೈತ ಸಮ್ಮಾನ್‌ ನಿಧಿ ಮೂಲಕ ರೈತರ ಖಾತೆಗೆ 2,000 ಹಣ ಬೀಳುತ್ತಿದೆ ಎಂದರು.

ಇದನ್ನೂ ಓದಿ | Supreme Court: ಇಂದೇ ಬಿ ಎಸ್ ಯಡಿಯೂರಪ್ಪ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ವಿದೇಶಿ ಹೂಡಿಕೆಯಲ್ಲಿ ಕರ್ನಾಟಕ ನಂ. 1 ಆಗಿದೆ. ಸೈನ್ಯದ ಯುದ್ಧ ವಿಮಾನ ತಯಾರಿಕೆ ವಿಭಾಗದಲ್ಲಿ ಶೇ. 70 ಕರ್ನಾಟಕದ ಪಾಲಿದೆ. ದಲಿತರು ಬುಡಕಟ್ಟು ಜನ ರೈತರು ಪ್ರತಿವರ್ಗಕ್ಕೂ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರ ಅನುಕೂಲ ನೀಡಿದೆ. ಕರ್ನಾಟಕದ ಅಭಿವೃದ್ಧಿ ಬಿಜೆಪಿಯಿಂದಲೇ ಆಗಿದೆ ಎಂದ ಅವರು, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಗ್ಗೆ ವೈಯಕ್ತಿಕ ಟೀಕೆ ಮಾಡಲ್ಲ. ವಿಭಜನೆ, ಭ್ರಷ್ಟಾಚಾರ, ಮಾತು ತಪ್ಪುವುದು, ಒಡೆದು ಆಳುವುದು ಕಾಂಗ್ರೆಸ್‌ನ ಮೂಲ ಸ್ವಭಾವ ಎಂದು ಹರಿಹಾಯ್ದರು.

ಪಿಎಫ್‌ಐನ 1600 ಕಾರ್ಯಕರ್ತರನ್ನು ಕಾಂಗ್ರೆಸ್‌ ಸರ್ಕಾರ ಬಿಡುಗಡೆ ಮಾಡಿತ್ತು. ಸಮಾಜದಲ್ಲಿ ಅಶಾಂತಿ ಮೂಡಿಸಬೇಕೆಂಬುದು ಅವರ ಉದ್ದೇಶವಾಗಿತ್ತು. ಸಮಾಜದಲ್ಲಿ ವಿಭಜನೆ ಮಾಡಬೇಕು ಎಂಬುವುದು ಅವರ ಉದ್ದೇಶವಾಗಿತ್ತು. ಕರ್ನಾಟಕ ದುರ್ಬಲಗೊಳಿಸಲು ಇಂತಹ ಕೆಲಸ ಮಾಡಿದರು ಎಂದ ಅವರು, ಕರ್ನಾಟಕದಲ್ಲಿ ಲೋಕಾಯುಕ್ತ ರದ್ದು ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ನೀಡುತ್ತಾರಾ? ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಲೋಕಾಯುಕ್ತ ಸ್ಥಗಿತ ಮಾಡಿದರು ಇಂಥವರ ಸರ್ಕಾರ ನಮಗೆ ಬೇಕಾ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ಆಶೀರ್ವಾದ, ಯಡಿಯೂರಪ್ಪ, ಬೊಮ್ಮಾಯಿ ಕೆಲಸ ಮುಂದುವರಿಯಲು ಬಿಜೆಪಿ ಆಡಳಿತಕ್ಕೆ ಬರಬೇಕು. ಹೀಗಾಗಿ ರಾಜ್ಯದ ಜನ ಬೆಂಬಲ ನೀಡಬೇಕು ಎಂದು ಕೋರಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಬೈಂದೂರು ಕ್ಷೇತ್ರದಲ್ಲಿ 3.50 ಲಕ್ಷ ಜನಕ್ಕೆ ಸಿಹಿ ನೀರು ನೀಡಿದ್ದೇವೆ. ಗ್ರಾಮೀಣ ಭಾಗದಲ್ಲಿ ಐದು ವರ್ಷದಲ್ಲಿ ಹಿಂದೆಂದೂ ಆಗದ ಅಭಿವೃದ್ಧಿ ಆಗಿದೆ. ಕ್ಷೇತ್ರದ ಜನರ ಮುಂದೆ ನಮ್ಮ ಕೆಲಸದ ರಿಪೋರ್ಟ್ ಇಟ್ಟಿದ್ದೇವೆ ಎಂದು ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಇದು ಹಿಂದುತ್ವ ಹಾಗೂ ಅಭಿವೃದ್ಧಿಯ ಚುನಾವಣೆ. ಬಿಜೆಪಿ ಐದು ವರ್ಷಗಳಲ್ಲಿ ಕೊಟ್ಟಷ್ಟು ಅನುದಾನ ಕಾಂಗ್ರೆಸ್ ಐವತ್ತು ವರ್ಷದಲ್ಲಿ ನೀಡಿಲ್ಲ. ಮೀನುಗಾರರ ನೆರವಿಗೆ ಬಂದದ್ದು ಡಬಲ್ ಎಂಜಿನ್ ಸರ್ಕಾರ ಎಂದ ಅವರು, ನಾವು ಎಲೆಕ್ಷನ್ ಹಿಂದುಗಳಲ್ಲ ಪರ್ಮನೆಂಟ್ ಹಿಂದುಗಳು. ಕೆಲವರಿಗೆ ಅಧಿಕಾರದಲ್ಲಿದ್ದಾಗ ಕುಂಕುಮ ಅಂದರೆ ಅಲರ್ಜಿ. ನಾವು ಸಿಂಧೂರಕ್ಕಾಗಿ ಜೀವ ಕೊಡಲು ತಯಾರಿದ್ದೇವೆ. ನಮ್ಮ ದೇಶದ ರಾಷ್ಟ್ರಧ್ವಜದಲ್ಲೂ ಕೇಸರಿಯೇ ಮೇಲಿದೆ. ಕೇವಲ ಕೊರಳಲ್ಲಿ ಮಾತ್ರವಲ್ಲ, ಹೃದಯದಲ್ಲೂ ಹಿಂದುತ್ವ ಇದೆ ಎಂದರು ತಿಳಿಸಿದರು.

ಅಭಿವೃದ್ಧಿಯಷ್ಟೇ ಆದ್ಯತೆಯನ್ನು ಸಾಂಸ್ಕೃತಿಕ ಪುನರುತ್ಥಾನಕ್ಕೆ ನೀಡಿದ್ದೇವೆ.. ಗಂಗಾರತಿಗೆ ಮೋದಿ ರಾಷ್ಟ್ರೀಯ ಮಾನ್ಯತೆ ನೀಡಿದ್ದಾರೆ. ಭಾರತ ಗಂಗೆಗೂ ಒಂದು ದೈವತ್ವದ ಸ್ಥಾನ ನೀಡಿದೆ. ಕಾಶಿ ಕಾರಿಡಾರ್ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ. ಜನರಿಗೆ ಕೊಟ್ಟ ಯಾವ ಮಾತನ್ನೂ ಈಡೇರಿಸದೆ ಬಿಟ್ಟಿಲ್ಲ. ಮುಂದಿನ ವರ್ಷ ಫೆಬ್ರವರಿ ಒಳಗೆ ಭವ್ಯ ರಾಮಮಂದಿರವಾಗುತ್ತದೆ. ಕಾಂಗ್ರೆಸ್ ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಅಫಿಡವಿಟ್‌ ನೀಡಿದೆ. ರಾಮ ಸೇತು ಸುಳ್ಳು ಎಂದು ಅಫಿಡವಿಟ್ ನೀಡಿದೆ. ಈಗ ಚುನಾವಣೆಗಾಗಿ ಉದ್ದನಾಮ ಹಾಕುತ್ತೀರಿ ಎಂದು ಕಾಂಗ್ರೆಸ್‌ ನಾಯಕರ ವಿರುದ್ಧ ವ್ಯಂಗ್ಯವಾಡಿದರು.

ನಾನು ಹಿಂದು, ಹಿಂದುತ್ವವಾದಿ ಅಲ್ಲ. ಹಿಂದುತ್ವವಾದಿಗಳೆಲ್ಲಾ ಭಯೋತ್ಪಾದಕರು ಎನ್ನುತ್ತಾರೆ. ಡಿಜೆ ಹಳ್ಳಿ ಪೊಲೀಸ್‌ ಠಾಣೆಗೆ ಬೆಂಕಿ ಹಾಕಿದವರು ಹಿಂದುತ್ವವಾದಿಗಳಲ್ಲ. ನಿಮ್ಮದೇ ಪಕ್ಷದ ದಲಿತ ಶಾಸಕರ ಮನೆಗೆ ಬೆಂಕಿ ಹಾಕಿದರೂ ಖಂಡಿಸಲಿಲ್ಲ. ನಿಮ್ಮ ಹುಟ್ಟಿಗೆ ಬೆಲೆ ಇದೆಯೇ? ಕುಕ್ಕರ್‌ನಲ್ಲಿ ಬಾಂಬ್ ಇಟ್ಟ ಜನ ಅಮಾಯಕರು ಎನ್ನುತ್ತೀರಿ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ | Karnataka Election: ಎಲ್ಲ ಪಕ್ಷಗಳಲ್ಲಿ ಕುಟುಂಬ ರಾಜಕಾರಣವಿದೆ, ಆದ್ರೆ ಬಿಜೆಪಿಗೆ ಕಾರ್ಯಕರ್ತರೇ ಕುಟುಂಬ: ಜೆ.ಪಿ.ನಡ್ಡಾ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ದೇಶದಲ್ಲಿ 2014 ನಂತರ ಪರಿವರ್ತನೆಯ ಯುಗ ಆರಂಭವಾಗಿದೆ. ಜಗತ್ತಿನಲ್ಲಿ ಉಚಿತವಾಗಿ ಲಸಿಕೆ ಕೊಟ್ಟ ದೇಶ ಭಾರತ, ಬೊಮ್ಮಾಯಿ ಸರ್ಕಾರ 11 ಲಕ್ಷ ಮಕ್ಕಳಿಗೆ ವಿದ್ಯಾನಿದಿ ನೀಡಿದ್ದಾರೆ. ನಮ್ಮ ಸರ್ಕಾರ ಗೋಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಹಿಂದು ಕಾರ್ಯಕರ್ತರ ಕೊಲೆ ನಡೆದಾಗ ಮೊದಲ ಬಾರಿ ಪಿಎಸ್ಐ ನಿಷೇಧ ಮಾಡಿದ್ದು ಮೋದಿ ಸರ್ಕಾರ. ಸಿದ್ದರಾಮಯ್ಯ ನಿರುದ್ಯೋಗಿಯಾಗುವ ದಿನ ದೂರವಿಲ್ಲ ಎಂದು ಹೇಳಿದರು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಸಚಿವರಾದ ಎಸ್. ಅಂಗಾರ, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಭಾಗಿಯಾಗಿದ್ದರು.

Exit mobile version