ಉಡುಪಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಸಹ ಬಿರುಸುಗೊಂಡಿವೆ. ರಾಜಕೀಯ ಪಕ್ಷಗಳ ದೆಹಲಿ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಪ್ರಚಾರದಲ್ಲಿ ನಿರತರಾಗುತ್ತಿದ್ದಾರೆ. ಈ ನಡುವೆ ಸೋಮವಾರ (ಫೆ. ೨೦) ಕರಾವಳಿ ಭಾಗವಾದ ಉಡುಪಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಭೇಟಿ ಕೊಡಲಿದ್ದು, ಇವರ ಆಗಮನಕ್ಕೆ ಸ್ವಾಗತ ಕೋರಿ ಫ್ಲೆಕ್ಸ್ ಅನ್ನು ಹಾಕಲಾಗಿದ್ದು, ಅದನ್ನು ಕಿಡಿಗೇಡಿಗಳು ಹರಿದುಹಾಕಿದ್ದಾರೆ. ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.
ಜೆ.ಪಿ ನಡ್ಡಾ ಉಡುಪಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯಿಂದ ನಗರಾದ್ಯಂತ ಫ್ಲೆಕ್ಸ್, ಬಂಟಿಂಗ್ಸ್ ಅನ್ನು ಅಳವಡಿಕೆ ಮಾಡಲಾಗಿತ್ತು. ಇದೇ ವೇಳೆ ಉಡುಪಿಯ ಬನ್ನಂಜೆಯಲ್ಲಿ ಫ್ಲೆಕ್ಸ್‌ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಈ ಸಂಬಂಧ ಉಡುಪಿ ನಗರ ಠಾಣೆಗೆ ಜಿಲ್ಲಾ ಬಿಜೆಪಿ ದೂರು ನೀಡಿದೆ. ಕಳೆದ ತಡರಾತ್ರಿ ಈ ಘಟನೆ ನಡೆದಿದೆ. ಈಗ ಪೊಲೀಸರು ಕಿಡಿಗೇಡಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ನಡ್ಡಾ ಉಡುಪಿ ಪ್ರವಾಸದ ವಿವರ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ (ಫೆ. ೨೦) ಉಡುಪಿ ಪ್ರವಾಸ ಕೈಗೊಳ್ಳಲಿದ್ದಾರೆ. ಇದರ ಭಾಗವಾಗಿ ಭಾನುವಾರವೇ (ಫೆಬ್ರವರಿ 19) ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಫೆಬ್ರವರಿ 20ಕ್ಕೆ ಉಡುಪಿಗೆ ಆಗಮಿಸಲಿದ್ದು, ಉಡುಪಿಯ ಎಂಜಿಎಮ್ ಮೈದಾನದಲ್ಲಿ ಆಯೋಜಿಸಲಾಗಿರುವ ಉಡುಪಿ ಜಿಲ್ಲಾ 1111 ಬೂತ್ ಕಮಿಟಿಗಳ ಸಭೆಯಲ್ಲಿ ಮಾತನಾಡಲಿದ್ದಾರೆ. ಈ ಸಭೆಯಲ್ಲಿ ಸುಮಾರು 15 ಸಾವಿರ ಬಿಜೆಪಿ ಕಾರ್ಯಕರ್ತರಿಗೆ ನಡ್ಡಾ ಪೊಲಿಟಿಕಲ್ ಕ್ಲಾಸ್ ನೀಡಲಿದ್ದಾರೆ.
ಇದನ್ನೂ ಓದಿ: Karnataka Election 2023: ಮಾಜಿ ಶಾಸಕ ಕಿರಣ್ ಕುಮಾರ್ ಬಿಜೆಪಿಗೆ ಗುಡ್‌ಬೈ; ಫೆ.20ಕ್ಕೆ ಕಾಂಗ್ರೆಸ್ ಸೇರ್ಪಡೆ
ಇದೇ ಸಂದರ್ಭದಲ್ಲಿ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕಷ್ಣನ ದರ್ಶನ ಪಡೆದುಕೊಳ್ಳಲಿದ್ದಾರೆ. ಬಳಿಕ ಸ್ವಾಮೀಜಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಅಲ್ಲಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಮುಳ್ಳಿಕಟ್ಟೆಯಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾವೇಶ ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ 20,000 ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ. ಬೈಂದೂರಿನಿಂದ ಚಿಕ್ಕಮಗಳೂರಿನ ಹರಿಹರಪುರಕ್ಕೆ ಜೆಪಿ ನಡ್ಡಾ ತೆರಳಿದ್ದಾರೆ.