ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾನುವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮನೆಗೆ ಆಗಮಿಸಿದ ಜೆ.ಪಿ. ನಡ್ಡಾ ಅವರಿಗೆ ಹೂಗುಚ್ಛ ನೀಡಿ ಶಾಲು ಹೊದಿಸಿ ಪ್ರವೀಣ್ ನೆಟ್ಟಾರು ಪೋಷಕರು ಮತ್ತು ಪತ್ನಿ ಸ್ವಾಗತಿಸಿದರು. ಜೆ.ಪಿ.ನಡ್ಡಾ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು. ಮನೆಯ ಮುಂಭಾಗದ ಪ್ರವೀಣ್ ನೆಟ್ಟಾರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಒಳಗೆ ಹೋದ ಜೆ.ಪಿ.ನಡ್ಡಾ ಅವರು, ಪ್ರವೀಣ್ ಪೋಷಕರು ಮತ್ತು ಪತ್ನಿ ಜತೆ ಕೆಲ ಕಾಲ ಮಾತುಕತೆ ನಡೆಸಿ, ಯೋಗಕ್ಷೇಮ ವಿಚಾರಿಸಿದರು. ಇಡೀ ದೇಶ ಮತ್ತು ಪಕ್ಷ ನಿಮ್ಮ ಜತೆ ಇದೆ ಎಂದು ಪೋಷಕರಿಗೆ ಭರವಸೆ ನೀಡಿದರು. ಬಳಿಕ ಮನೆಯಲ್ಲಿ ಪಾನೀಯ ಸೇವಿಸಿ ನಿರ್ಗಮಿಸಿದರು.
ಇದನ್ನೂ ಓದಿ | Karnataka Election 2023: ಕಾಂಗ್ರೆಸ್, ಜೆಡಿಎಸ್‌ಗೆ ಕರ್ನಾಟಕ ಎಟಿಎಂ; ಬಿಜೆಪಿಗೆ ಅಭಿವೃದ್ಧಿ ಮುಖ್ಯ ಎಂದ ಪ್ರಧಾನಿ ಮೋದಿ
ಪ್ರವೀಣ್ ನೆಟ್ಟಾರು ಕೊಲೆಯಾದ ಹಿನ್ನೆಲೆಯಲ್ಲಿ ಅವರಿಗೆ ನೆರವಾಗಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ಕುಟುಂಬಸ್ಥರಿಗೆ ಮನೆ ನಿರ್ಮಿಸಿಕೊಡಲಾಗಿತ್ತು. ಏ. 27ರಂದು ಮನೆಯ ಗೃಹ ಪ್ರವೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವೀಣ್ ನೆಟ್ಟಾರು ಮನೆಗೆ ಜೆ.ಪಿ.ನಡ್ಡಾ ಅವರು ಭೇಟಿ ನೀಡಿದ್ದರು.
ಬೆಳ್ಳಾರೆಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು, ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ತುಂಬಾ ದುಃಖದಾಯಕ ಘಟನೆ ನಡೆದು ಹೋಗಿತ್ತು. ಎಸ್‌ಡಿಪಿಐ ಮತ್ತು ಪಿಎಫ್ಐ ಈ ಹತ್ಯೆಯ ಹಿಂದಿದ್ದು, ಇದು ಖಂಡನೀಯ. ಘಟನೆ ನಂತರ ಆ ಸಂಘಟನೆಯನ್ನು ನಿಷೇಧ ಮಾಡಲಾಯಿತು. ನಮ್ಮ ಸರ್ಕಾರ ಪಿಎಫ್‌ಐ ನಿಷೇಧ ಮಾಡಿ, ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆಗೆ ನ್ಯಾಯ ಸಿಗೋವರೆಗೂ ವಿರಮಿಸಲ್ಲ. ಅವರ ಬಲಿದಾನ ಎಂದಿಗೂ ವ್ಯರ್ಥ ಆಗಲ್ಲ ಎಂದು ಹೇಳಿದರು.
ಇದನ್ನೂ ಓದಿ | ಕಾಂಗ್ರೆಸ್, ಜೆಡಿಎಸ್‌ನದ್ದು ತುಷ್ಟೀಕರಣದ ನೀತಿ; ಬಿಜೆಪಿಯದ್ದು ಸಂತುಷ್ಟೀಕರಣದ ರಾಜನೀತಿ ಎಂದ ಮೋದಿ
ಪ್ರವೀಣ್ ಅವರ ಕುಟುಂಬಕ್ಕೆ ಸಂವೇದನಾಶೀಲ ಸರ್ಕಾರ ಎಲ್ಲವನ್ನೂ ಮಾಡಿದೆ. ಕಾರ್ಯಕರ್ತನನ್ನು ಕೊಂದ ಮಾನಸಿಕತೆ ವಿರುದ್ಧ ನಮ್ಮ ಹೋರಾಟ ನಿರ್ಣಾಯಕ ಘಟ್ಟದವರೆಗೂ ಮುಂದುವರಿಯಲಿದೆ. ಪ್ರವೀಣ್‌ಗೆ ನ್ಯಾಯ ಸಿಗೋವರೆಗೂ ಹೋರಾಟ ಇರಲಿದೆ. ಅವರ ಕುಟುಂಬ ಸದಸ್ಯರ ಜತೆ ನಮ್ಮ ಸರ್ಕಾರ ಇರಲಿದೆ ಎಂದು ತಿಳಿಸಿದರು.