ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯುವ ನ್ಯಾಯವಾದಿ ಕು. ವಿ.ಆರ್.ಅನುಷಾ ಅವರು ಸಿವಿಲ್ ನ್ಯಾಯಾಧೀಶರ ಆಯ್ಕೆಗಾಗಿ ನಡೆದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅತಿ ಸಣ್ಣ ವಯಸ್ಸಿನಲ್ಲೇ ಸಿವಿಲ್ ನ್ಯಾಯಾಧೀಶೆಯಾಗಿ (Judge appointment) ಆಯ್ಕೆಯಾದ ಸಾಧನೆ ಮಾಡಿದ್ದಾರೆ. ಅನುಷಾ ಅವರಿಗೆ ಈಗ ೨೪ ವರ್ಷ.
ಸಕಲೇಶಪುರ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾರ ವಿ.ಪಿ.ರಮೇಶ್-ಸೌಮ್ಯ ಎಲ್ ದಂಪತಿಯ ಪುತ್ರಿಯಾಗಿರುವ ಅನುಷಾ ಅವರು ಜನಿಸಿದ್ದು ೧೯೯೮ರ ಅಕ್ಟೋಬರ್ ೨೭ರಂದು. ಒಂದರಿಂದ ಎಂಟನೇ ತರಗತಿಯವರೆಗೆ ಸಕಲೇಶಪುರದ ಸಂತ ಜೋಸೆಫರ ಶಾಲೆ, ಎಂಟರಿಂದ ಹತ್ತನೇ ತರಗತಿಯವರೆಗೆ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದರು.
ಸಕಲೇಶಪುರದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಮುಗಿಸಿದ ಅನುಷಾ ಹಾಸನದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವೀತಿಯ ವರ್ಷ, ಬೆಂಗಳೂರಿನ ಕೆಎಲ್ಇ ಕಾಲೇಜಿನಲ್ಲಿ ಮೂರು, ನಾಲ್ಕು ಹಾಗೂ ಅಂತಿಮ ವರ್ಷ ಕಾನೂನು ವಿದ್ಯಾರ್ಥಿನಿಯಾಗಿ ವಿದ್ಯಾಭ್ಯಾಸ ಪಡೆದು 2021 ರಲ್ಲಿ ಕಾನೂನು ಪದವಿ ಪಡೆದಿದ್ದಾರೆ.
ನಂತರ ಸಕಲೇಶಪುರದ ಹಿರಿಯ ವಕೀಲರಾದ ಪೀತಾಂಬರಾಚಾರ್ ಅವರ ಬಳಿ ಕಿರಿಯ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. ೨೦೨೨ರ ಅಕ್ಟೋಬರ್ ೧೭ರಂದು ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಲಾ ಕ್ಲರ್ಕ್ ಮತ್ತು ರಿಸರ್ಚ್ ಸ್ಕಾಲರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನಂತರ ಸಿವಿಲ್ ನ್ಯಾಯಾಧೀಶರ ಆಯ್ಕೆಗಾಗಿ ನಡೆದ ಪರೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅವರ ಈ ಸಾಧನೆಗೆ ಸಕಲೇಶಪುರದ ವಕೀಲರು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ದೊಡ್ಡ ಪ್ರಶಸ್ತಿ ನಿರಾಕರಿಸಿ ದೊಡ್ಡವರಾದವರು; ಅವರದು ಪ್ರಶಸ್ತಿ ಮೀರಿದ ವ್ಯಕ್ತಿತ್ವ