ಉಡುಪಿ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ ಶಾಂತವೀರ ಶಿವಪ್ಪ ಅವರು ಇಂದು (ಶುಕ್ರವಾರ) ಉಡುಪಿ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ನ್ಯಾಯಮೂರ್ತಿಗಳು ಆಸ್ಪತ್ರೆಗೆ ಆಗಮಿಸಿದ್ದು, ಆಸ್ಪತ್ರೆಯನ್ನೆಲ್ಲಾ ಒಂದು ರೌಂಡ್ಸ್ ಹಾಕಿ ನಂತರ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಬಳಿಕ ರೋಗಿಗಳಿರುವ ವಾರ್ಡ್ ಹಾಗೂ ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ| ಮದ್ದೂರು ಆಸ್ಪತ್ರೆಯ ಅಧಿಕಾರಿಗಳಿಗೆ ಹೈಕೋರ್ಟ್ ನ್ಯಾಯಮೂರ್ತಿ ಕ್ಲಾಸ್
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾಯಮೂರ್ತಿ ಶಾಂತವೀರ ಶಿವಪ್ಪ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದೇನೆ. ಆಸ್ಪತ್ರೆಗಳಲ್ಲಿರುವ ಕುಂದುಕೊರತೆ ವೀಕ್ಷಣೆ ಮಾಡಿದ್ದೇನೆ. ಇದೇ ರೀತಿ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದೇನೆ. ಸರಕಾರಿ ಆಸ್ಪತ್ರೆಗಳಲ್ಲಿರುವ ಕುಂದುಕೊರತೆ ಮತ್ತು ಸಮಸ್ಯೆಗಳನ್ನು ಪಟ್ಟಿ ಮಾಡಿ ವರದಿ ನೀಡಲಿದ್ದೇನೆ,” ಎಂದರು.
ನ್ಯಾಯಮೂರ್ತಿಗಳ ಈ ಭೇಟಿ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಅಧ್ಯಕ್ಷರಾದ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.