Site icon Vistara News

ಎಸಿಬಿಗೆ ಚಳಿಬಿಡಿಸಿದ ಹೈಕೋರ್ಟ್‌ ನ್ಯಾಯಮೂರ್ತಿಗೆ ವರ್ಗಾವಣೆ ಬೆದರಿಕೆ, ಬಗ್ಗಲ್ಲವೆಂದ ಜಸ್ಟಿಸ್ ಸಂದೇಶ್‌!

ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಮೂರ್ತಿಗೆ‌ ವರ್ಗಾವಣೆ ಬೆದರಿಕೆ ಹಾಕಲಾಗಿದೆ! ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಭ್ರಷ್ಟಾಚಾರ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರೇ ತಮಗೆ ಬಂದ ಬೆದರಿಕೆ ಬಗ್ಗೆ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ನಾನು ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ, ಜನರ ಒಳಿತಿಗಾಗಿ ವರ್ಗಾವಣೆಯಾಗಲೂ ಸಿದ್ಧನಿದ್ದೇನೆ. ನಿಮ್ಮ ಎಸಿಬಿ ಎಡಿಜಿಪಿ ತುಂಬಾ ಪವರ್‌ಫುಲ್ ಆಗಿದ್ದಾರಂತೆ, ಒಬ್ಬ ವ್ಯಕ್ತಿ ಹೀಗೆ ಹೇಳಿರುವುದನ್ನು ನ್ಯಾಯಮೂರ್ತಿಯೊಬ್ಬರು ತಮಗೆ ತಿಳಿಸಿದ್ದಾರೆಂದು ಸೋಮವಾರ ನಡೆದ ಬೆಂಗಳೂರು ನಗರ ಡಿಸಿ ಲಂಚ ಪ್ರಕರಣದ ವಿಚಾರಣೆ ಸಮಯದಲ್ಲಿ ಎಸಿಬಿ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿ ಎಚ್‌.ಪಿ.ಸಂದೇಶ್‌ ಅವರು ಕಿಡಿಕಾರಿದ್ದಾರೆ.

ಯಾಕೆ ವರ್ಗಾವಣೆ ಬೆದರಿಕೆ?

ಬೆಂಗಳೂರು ನಗರ ಡಿಸಿ ಲಂಚ ಪ್ರಕರಣದಲ್ಲಿ 2ನೇ ಆರೋಪಿಯನ್ನು ಕಲೆಕ್ಷನ್‌ಗೋಸ್ಕರವೇ ನೇಮಿಸಲಾಗಿದೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದವರಿಗೂ ಬಿ ರಿಪೋರ್ಟ್ ಹಾಕುತ್ತೀರಿ. ನೀವು ಸಾರ್ವಜನಿಕರನ್ನು ರಕ್ಷಿಸುತ್ತಿದ್ದೀರಾ ಅಥವಾ ಕಳಂಕಿತರನ್ನಾ? ಕರಿ ಕೋಟ್ ಇರುವುದು ಆರೋಪಿಗಳನ್ನು ರಕ್ಷಿಸುವುದಕ್ಕಲ್ಲ. ಭ್ರಷ್ಟಾಚಾರ ಎಂಬುದು ಕ್ಯಾನ್ಸರ್ ರೂಪವನ್ನು ತಾಳಿದೆ. ಇದು ಕ್ಯಾನ್ಸರ್‌ನ 4ನೇ ಹಂತಕ್ಕೆ ಹೋಗಬಾರದು. ಬೇಲಿಯೇ ಎದ್ದು ಹೊಲ ಮೇಯ್ದರೆ ನಾವೇನು ಮಾಡುವುದು? ಸರ್ಚ್ ವಾರಂಟ್‌ ತೋರಿಸಿ ವಸೂಲಿ ಮಾಡುವುದು ನಡೆಯುತ್ತಿದೆ ಎಂದು ಇತ್ತೀಚೆಗೆ ಪ್ರಕರಣ ವಿಚಾರಣೆ ವೇಳೆ ನ್ಯಾಯಮೂರ್ತಿ ಸಂದೇಶ್‌ ಅವರು ಅಸಮಾಧಾನವನ್ನು ಹೊರಹಾಕಿದ್ದರು. ಈ ಸಂಬಂಧ ತಮಗೆ ಬೆದರಿಕೆ ಬಂದಿದೆ ಎಂದು ಸೋಮವಾರ ನಡೆಯುತ್ತಿದ್ದ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಬಹಿರಂಗಪಡಿಸಿದ್ದಾರೆ.

ಅಪ್ಪನ ಆಸ್ತಿ ಮಾರಿದ್ದೇನೆ, ಉಳುಮೆಗೂ ಸಿದ್ಧನಿದ್ದೇನೆ:

ಎಸಿಬಿಯ ಎಡಿಜಿಪಿ ಸರ್ವಿಸ್ ರೆಕಾರ್ಡ್ ಅನ್ನೂ ಹಾಜರುಪಡಿಸಿಲ್ಲ. ಅಲ್ಲದೆ, ವರ್ಗಾವಣೆ ಮಾಡಿಸುವ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ. ನನಗೆ ಯಾರ ಹೆದರಿಕೆಯೂ ಇಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧನಿದ್ದೇನೆ. ಜಡ್ಜ್ ಆದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನನ್ನ ಅಪ್ಪನ ೪ ಎಕರೆ ಭೂಮಿಯನ್ನೇ ಮಾರಿದ್ದೇನೆ, ನನ್ನ ಜಡ್ಜ್ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ, ಭೂಮಿ ಉಳುಮೆ ಮಾಡಲೂ ಸಿದ್ಧನಿದ್ದೇನೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ ಎಂದು ನ್ಯಾ.ಎಚ್.ಪಿ. ಸಂದೇಶ್ ಹೇಳಿದ್ದಾರೆ.

ಬಿ ರಿಪೋರ್ಟ್ ಮಾಹಿತಿ ಬಹಿರಂಗಪಡಿಸಲು ಎಸಿಬಿ ಅಧಿಕಾರಿಗಳಿಗೆ ಹಿಂಜರಿಕೆ ಏಕೆ? ವಿಟಮಿನ್ ಎಂ ಇದ್ದರೆ ಎಲ್ಲರನ್ನೂ ರಕ್ಷಿಸುತ್ತೀರಿ, ದುಡ್ಡು ತೆಗೆದುಕೊಂಡು ಪೋಸ್ಟಿಂಗ್ ಕೊಡೋದು ನಿಲ್ಲಿಸಿದರೆ ಎಲ್ಲವೂ ಸರಿಹೋಗುತ್ತದೆ. ಭ್ರಷ್ಟಾಚಾರದಲ್ಲಿ ರಾಜ್ಯವೇ ಹೊತ್ತಿ ಉರಿಯುತ್ತಿದ್ದರೂ ಎಸಿಬಿ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | ಬೆಳಗಾವಿಯಲ್ಲಿ ನಕಲಿ ಎಸಿಬಿ ಅಧಿಕಾರಿಗಳ ಬಂಧನ

Exit mobile version