ಬೆಂಗಳೂರು: ರಾಜ್ಯ ಮಾನವ ಹಕ್ಕುಗಳ ಆಯೋಗದ (Human Rights Commission) ನೂತನ ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರನ್ನು ನೇಮಿಸಲಾಗಿದೆ. ಕಳೆದ 8 ತಿಂಗಳಿಂದ ಖಾಲಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ನ್ಯಾ. ಎಲ್. ನಾರಾಯಣಸ್ವಾಮಿ (Justice L Narayanasamy) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಆಯೋಗದ ಅಧ್ಯಕ್ಷರ ಜತೆಗೆ ಇಬ್ಬರು ಸದಸ್ಯರನ್ನೂ ನೇಮಕ ಮಾಡಲಾಗಿದೆ. ನ್ಯಾಯಾಂಗ ಸದಸ್ಯರಾಗಿ ನಿವೃತ್ತ ಜಿಲ್ಲಾ ನ್ಯಾಯದೀಶ ಎಸ್. ಕೆ.ವಂಟಿಗೋಡಿ ಹಾಗೂ ಆಡಳಿತಾತ್ಮಕ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ಶ್ಯಾಮ್ ಭಟ್ ಅವರು ನೇಮಕವಾಗಿದ್ದಾರೆ. ನೂತನ ಅಧ್ಯಕ್ಷ ಹಾಗೂ ಸದಸ್ಯರು 5 ವರ್ಷ ಅಥವಾ 70 ವರ್ಷ ವಯಸ್ಸಾಗುವವರೆಗೆ ಈ ಎರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಧಿಕಾರವಧಿಯನ್ನು ಹೊಂದಿರುತ್ತಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನವರಾದ ಎಲ್. ನಾರಾಯಣಸ್ವಾಮಿ ಅವರು ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ, ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ | Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್ ಈಗ ಹೇಗಿದೆ?
ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಸುಮಾರು 4,800ಕ್ಕೂ ಅಧಿಕ ಪ್ರಕರಣಗಳು ತನಿಖೆಯಾಗದೆ ಬಾಕಿ ಉಳಿದಿದ್ದವು. ಆಯೋಗಕ್ಕೆ ಯಾಕೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿಲ್ಲ ಎಂದು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿತ್ತು. ಬಳಿಕ ಸರ್ಕಾರಕ್ಕೆ ನೋಟಿಸ್ ನೀಡಲಾಗಿತ್ತು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಮಿತಿ ಸಭೆ ನಡೆಸಿ, ಮೂವರನ್ನು ಆಯೋಗದ ಅಧ್ಯಕ್ಷ, ಸದಸ್ಯರ ಹುದ್ದೆಗಳಿಗೆ ನೇಮಿಸಲು ತೀರ್ಮಾನಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ