Site icon Vistara News

Suburban Rail: ಬೆಂಗಳೂರು ಉಪನಗರ ರೈಲು; ಜರ್ಮನಿಯ ಬ್ಯಾಂಕ್‌ ಜತೆ ಕೆ-ರೈಡ್‌ ಒಪ್ಪಂದ

suburban train

ಬೆಂಗಳೂರು: ಮಹತ್ವಾಕಾಂಕ್ಷಿ ಬೆಂಗಳೂರು ಉಪನಗರ ರೈಲು ಯೋಜನೆಯ ಸುಗಮ ಅನುಷ್ಠಾನದ ಉದ್ದೇಶದಿಂದ ಜರ್ಮನಿಯ ಕೆಎಫ್‌ಡಬ್ಲ್ಯು ಡೆವಲಪ್‌ಮೆಂಟ್‌ ಬ್ಯಾಂಕ್‌ ಜತೆ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತವು (ಕೆ-ರೈಡ್)‌ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ, ಯೋಜನೆಗೆ ₹4,500 ಕೋಟಿ (500 ಮಿಲಿಯನ್‌ ಯೂರೊ) ಸಾಲ ಮತ್ತು ₹45 ಕೋಟಿ (4.5 ಮಿಲಿಯನ್‌ ಯೂರೋ) ಅನುದಾನ ಸಿಗಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್‌ ತಿಳಿಸಿದ್ದಾರೆ.

ಶನಿವಾರ ಈ ವಿಷಯ ತಿಳಿಸಿರುವ ಅವರು, ʻದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡೂ ಕಡೆಯ ಉನ್ನತ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ. ಇದರಿಂದಾಗಿ, ಬೆಂಗಳೂರು ಉಪನಗರ ರೈಲು ಯೋಜನೆಯ ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗಲಿದೆʼ ಎಂದಿದ್ದಾರೆ.

ಬೆಂಗಳೂರು ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಗುರಿಯನ್ನುಳ್ಳ ಸಬರ್ಬನ್‌ ರೈಲು ಯೋಜನೆಗೆ ಒಟ್ಟು 15,767 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಈ ಪೈಕಿ ಹಲವು ಹಣಕಾಸು ಸಂಸ್ಥೆಗಳಿಂದ 7,438 ಕೋಟಿ ರೂ.ಗಳನ್ನು ಸಾಲವಾಗಿ ತೆಗೆದುಕೊಳ್ಳಲಾಗುತ್ತಿದೆ. ಯೋಜನೆಯು ಕೆ-ರೈಡ್‌ ಮತ್ತು ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯದ ಮೂಲಕ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | Free Power, Water: ಸರ್ಕಾರಿ ಶಾಲಾ- ಕಾಲೇಜುಗಳಿಗೆ ಉಚಿತ ವಿದ್ಯುತ್, ನೀರು; ರಾಜ್ಯ ಸರ್ಕಾರ ಆದೇಶ

ಒಪ್ಪಂದಕ್ಕೆ ಅಂಕಿತ ಹಾಕಲಾದ ಕಾರ್ಯಕ್ರಮದಲ್ಲಿ ಕೆಎಫ್‌ಡಬ್ಲ್ಯು ಡೆವಲಪ್‌ಮೆಂಟ್‌ ಬ್ಯಾಂಕ್‌ನ ಅಧಿಕಾರಿಗಳಾದ ಫಿಲಿಫ್‌ ವೈಶ್‌, ಉಪನಿರ್ದೇಶಕಿ ರುಕ್ಮಿಣಿ ಪಾರ್ಥಸಾರಥಿ, ಸ್ವಾತಿ ಖನ್ನಾ, ಕೇಂದ್ರ ಆರ್ಥಿಕ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮಾನಿಶಾ ಸಿನ್ಹಾ ಉಪಸ್ಥಿತರಿದ್ದರು. ರಾಜ್ಯ ಸರ್ಕಾರದ ಪರವಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರಮೂರ್ತಿ ಇದ್ದರು.

Exit mobile version