Site icon Vistara News

Actor K Shivaram: ಮಣ್ಣಲ್ಲಿ ಮಣ್ಣಾದ ನಟ ಕೆ.ಶಿವರಾಮ್; ಹುಟ್ಟೂರು ಉರಗಹಳ್ಳಿಯಲ್ಲಿ ಅಂತ್ಯ ಸಂಸ್ಕಾರ

K Shivaram

ರಾಮನಗರ: ಹೃದಯಾಘಾತದಿಂದ ನಿಧನರಾದ ನಿವೃತ್ತ ಐಎಎಸ್‌ ಅಧಿಕಾರಿ, ನಟ ಕೆ..ಶಿವರಾಮ್ (Actor K Shivaram) ಅವರ ಅಂತ್ಯ ಸಂಸ್ಕಾರವು ಹುಟ್ಟೂರಾದ ಜಿಲ್ಲೆಯ ಉರಗಹಳ್ಳಿ ತೋಟದಲ್ಲಿ ಶುಕ್ರವಾರ ನೆರವೇರಿತು. ಕುಟುಂಬಸ್ಥರು, ಛಲವಾದಿ ಮಹಾಸಭಾದ ಸದಸ್ಯರು ಹಾಗೂ ಅಭಿಮಾನಿಗಳ ಸೇರಿ ಸಾವಿರಾರು ಜನರ ಸಮ್ಮುಖದಲ್ಲಿ ಹಿಂದು ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು. ಶಿವರಾಮ್ ಅವರ ಅಳಿಯ, ನಟ ಪ್ರದೀಪ್ ಅವರು ಅಂತ್ಯಸಂಸ್ಕಾರದ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಶಿವರಾಮ್ ಅವರು ಹೃದಯಾಘಾತದಿಂದ​ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಶುಕ್ರವಾರ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಿತ್ರರಂಗ ಗಣ್ಯರು, ರಾಜಕೀಯ ನಾಯಕರು ಸೇರಿ ಹಲವರು ಅಂತಿಮ ದರ್ಶನ ಪಡೆದಿದ್ದರು.

ನಟ ಕೆ.‌ ಶಿವರಾಮ್

ಮೊದಲಿಗೆ ಕೆಂಗೇರಿಯಲ್ಲಿರುವ ಛಲವಾದಿ ಸಭಾಂಗಣದ ಆವರಣದಲ್ಲಿ ಸರ್ಕಾರಿ ಗೌರವಗಳೊಂದಿಗೆ ಶಿವರಾಮ್ ಅವರ ಅಂತ್ಯಕ್ರಿಯೆ ನೆರವೇರಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಇದಕ್ಕೆ ಅನುಮತಿ ಸಿಗದ ಹಿನ್ನೆಲೆ ಸರ್ಕಾರದ ವಿರುದ್ಧ ಛಲವಾದಿ ಸಮುದಾಯ ಮುಖಂಡರು, ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಅಂತ್ಯ ಸಂಸ್ಕಾರದ ಸ್ಥಳದ ಕುರಿತು ರಾಜಕಾರಣಿಗಳಿಗೆ ಗುರುವಾರವೇ ಮನವಿ ಪತ್ರ ನೀಡಲಾಗಿತ್ತು. ಆದರೆ, ಸರ್ಕಾರದ ವತಿಯಿಂದ ಯಾವುದೇ ಸ್ಪಂದನೆ ಇಲ್ಲ ಎಂದು ರಾಜ್ಯ ಛಲವಾದಿ ಸಂಘಟನೆಯ ಮುಖಂಡ ಹಂಸರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Actor K Shivaram : ನಟ ಶಿವರಾಮ್‌ ಅಂತ್ಯಕ್ರಿಯೆ ವಿಚಾರದಲ್ಲಿ ಸಂಘರ್ಷ; ಸಿಡಿದೆದ್ದ ವಾಣಿ ಶಿವರಾಮ್‌, ಸಚಿವ ಖರ್ಗೆಗೇ ಘೇರಾವ್‌

ರಾಜ್ಯ ಸರ್ಕಾರ ವಿರುದ್ಧ ಮಾಜಿ ಸಚಿವ ಎನ್. ಮಹೇಶ್ ಆಕ್ರೋಶ

ಕೆ.ಶಿವರಾಮ್‌ ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಚಿವ ಎನ್. ಮಹೇಶ್ ಆಕ್ರೋಶ ಹೊರಹಾಕಿದ್ದಾರೆ. ಕೆ.ಶಿವರಾಮ್‌ ಅವರ ನಿಧನವನ್ನು ವಿಶೇಷ ಪ್ರಕರಣ ಎಂದು ಭಾವಿಸಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಬೇಕಿತ್ತು. ಆದರೆ, ಇದು ಶಿಷ್ಟಾಚಾರ ಉಲ್ಲಂಘನೆಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, 2017‌ರಲ್ಲಿ ಗೌರಿ ಲಂಕೇಶ್ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಮಾಡಿದ್ದಾರೆ. ಅವರೇನು ಪ್ರೋಟೋಕಾಲ್ ವ್ಯಾಪ್ತಿಗೆ ಬರುತ್ತಾರೆಯೇ ಎಂದು ಕಿಡಿಕಾರಿದ್ದಾರೆ.

ದಲಿತರ ಆಶಾಕಿರಣ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಛಲವಾದಿ ಸಮುದಾಯದಿಂದ ಬಹಳ ಗೌರವ ಪೂರ್ಣವಾಗಿ ಅಂತ್ಯಕ್ರಿಯೆ ಮಾಡಿದ್ದೇವೆ. ಅಂತ್ಯಕ್ರಿಯೆಯನ್ನು ಸರ್ಕಾರ ಮಾಡಬೇಕಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಹಾಗೂ ಸಮಾಜ ಕಲ್ಯಾಣ ಇಲಾಖೆಗೂ ಮನವಿ ಮಾಡಿದ್ದೆವು. ಛಲವಾದಿ ಮಹಾಸಭಾದ ಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಬೇಕಿತ್ತು. ತಾಂತ್ರಿಕ ತೊಂದರೆಯಿಂದ ತೋಟದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ನಾವೆಲ್ಲರೂ ಮನಸ್ಸು ಮಾಡಿದ್ದರೆ ಅಲ್ಲೇ ಅಂತ್ಯಕ್ರಿಯೆ ಮಾಡಬಹದಿತ್ತು. ಆದರೆ, ನಾವು ಅಂಬೇಡ್ಕರ್‌ವಾದಿಗಳು, ಅಶಿಸ್ತು ತೋರುವುದು ಬೇಡವೆಂದು ಶಿವರಾಮ್‌ ಅವರ ತೋಟಕ್ಕೆ ಬಂದಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ | Organ donors: ಅಂಗಾಂಗ ದಾನಿ ಕುಟುಂಬಗಳ ಕಣ್ಣೀರ ಕಥೆ ಕೇಳಿದ ಸಿಎಂ ಸಿದ್ದರಾಮಯ್ಯ

ಗೌರಿ ಲಂಕೇಶ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಿದ್ದಾರೆ, ಅವರೇನು‌ ಪ್ರೋಟೋಕಾಲ್ ವ್ಯಾಪ್ತಿಯಲ್ಲಿ ಬರುತ್ತಾರಾ? ಮಳವಳ್ಳಿ ತಾಲೂಕು ಕಾಮೇಗೌಡ್ರು ಕೆರೆಗಳ ಸಂರಕ್ಷಣೆ ಮಾಡಿದ್ದಾರೆ ಎಂದು ಅವರಿಗೂ ಸರ್ಕಾರಿ ಗೌರವ ನೀಡಲಾಗಿತ್ತು. ಅದೇ‌ ರೀತಿ ಇದೊಂದು ವಿಶೇಷ ಪ್ರಕರಣವೆಂದು ಗೌರವಿಸಬೇಕಿತ್ತು. ಕನ್ನಡದಲ್ಲಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಕೆ.ಶಿವರಾಮ್ ಅವರೇನು ಶ್ರೀಮಂತ‌ ಕುಟುಂಬದಿಂದ ಬಂದವರಾ? ಅತ್ಯಂತ ಕಡುಬಡತನದಲ್ಲಿ ಓದಿ, ಐಎಎಸ್ ಅಧಿಕಾರಿಯಾಗಿ ಕನ್ನಡಿಗರಿಗೆ ಪ್ರೇರಕ ಶಕ್ತಿಯಾಗಿದ್ದರು. ಬೇರೆ ಜಿಲ್ಲಾಧಿಕಾರಿಗಳು ಮಾಡದ ದೊಡ್ಡ ಸಾಧನೆ ಮಾಡಿದ್ದಾರೆ. ಚಲನಚಿತ್ರ ನಟರಾಗಿ ಕೆಲಸ ಮಾಡಿದ್ದಾರೆ. ಇಷ್ಟೆಲ್ಲಾ ಇದ್ದರೂ ಅವರು ಬಿಜೆಪಿ ನಾಯಕರು ಎಂಬ ಕಾರಣಕ್ಕೆ ಸರ್ಕಾರಿ ಗೌರವ ನೀಡಿಲ್ಲ ಎಂದು ಆರೋಪಿಸಿದ ಮಾಜಿ ಸಚಿವರು, ರಾಜ್ಯ ಸರ್ಕಾರ ಕೇವಲ ಕೆ . ಶಿವರಾಮ್ ಅವರಿಗಲ್ಲ, ಇಡೀ ಛಲವಾದಿ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.

Exit mobile version