ಕೋಲಾರ: ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ಕ್ಷೇತ್ರ ತ್ಯಾಗ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟರೆ ತಮಗೆ ಆಗುವ ರಾಜಕೀಯ ಲಾಭಗಳ ಬಗ್ಗೆ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿರುವ ಆಡಿಯೊ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಶಾಸಕ ಕೆ.ಶ್ರೀನಿವಾಸ ಗೌಡ ಅವರು ಆಪ್ತರೊಬ್ಬರ ಜತೆ ಮಾತನಾಡಿರುವ ಆಡಿಯೊ ವೈರಲ್ ಆಗಿದೆ. ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗೆದ್ದರೆ ಕ್ಷೇತ್ರದಲ್ಲಿ ನಾನೇ ಓಡಾಡುವುದು, ಸಿದ್ದರಾಮಯ್ಯ ಗೆದ್ದು ಸಿಎಂ ಆದರೆ ನಾನೇ ಕ್ಷೇತ್ರ ನೋಡಿಕೊಳ್ಳುವುದು ಎಂದು ಆಡಿಯೊದಲ್ಲಿ ಶ್ರೀನಿವಾಸಗೌಡ ಮಾತನಾಡಿದ್ದಾರೆ.
ನೀವೇ ಕ್ಷೇತ್ರದಲ್ಲಿ ಮತ್ತೊಮ್ಮೆ ಸ್ಪರ್ಧಿಸಬೇಕು ಎಂದು ಆಪ್ತ ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಶ್ರೀನಿವಾಸಗೌಡ, ನಾನು ಕಳೆದ ಚುನಾವಣೆಗೆ ೧೭ ಕೋಟಿ ರೂಪಾಯಿ ಖರ್ಚು ಮಾಡಿ ಸಾಲಗಾರನಾಗಿದ್ದೇನೆ. ಇನ್ನೂ ಸಾಲ ಹಾಗೆಯೇ ಇದೆ.…ನಾನು ಈ ಕ್ಷೇತ್ರ ಸಿದ್ಧರಾಮಯ್ಯಗೆ ಬಿಟ್ಟು ಗೆಲ್ಲಿಸಿದರೆ, ನನ್ನನ್ನು ಎಂಎಲ್‌ಸಿ ಮಾಡಿ ಮಂತ್ರಿ ಮಾಡುತ್ತಾರೆ. ಅದಕ್ಕೆ ನಾನು ಕ್ಷೇತ್ರ ತ್ಯಾಗ ಮಾಡಲು ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ.
ನನಗೆ ಅಧಿಕಾರದ ಆಸೆಯಿಲ್ಲ: ಕೆ.ಶ್ರೀನಿವಾಸಗೌಡ
ಆಡಿಯೊ ವೈರಲ್ ಬಗ್ಗೆ ಶಾಸಕ ಕೆ.ಶ್ರೀನಿವಾಸಗೌಡ ಪ್ರತಿಕ್ರಿಯಿಸಿ, ಹೌದು, ಆಡಿಯೊದಲ್ಲಿರುವ ಮಾತುಗಳು ನಿಜ. ಆದರೆ, ನಾನು ಪದವಿಗೆ ಆಸೆ ಪಟ್ಟಿಲ್ಲ. ಜೀವನದಲ್ಲಿ ಸಾಕಷ್ಟು ಪದವಿ ಪಡೆದಿದ್ದೇನೆ, ಹೀಗಾಗಿ ಆಧಿಕಾರದ ಆಸೆಯಿಲ್ಲ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಒಳ್ಳೆಯದು ಆಗುತ್ತದೆ ಎಂದು ಸಿದ್ದರಾಮಯ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ಕೋಲಾರದಲ್ಲಿ ಸಿದ್ದರಾಮಯ್ಯ ಗೆದ್ದು ಮುಖ್ಯಮಂತ್ರಿಯಾಗುತ್ತಾರೆ. ಹೀಗಾಗಿ ಅವರು 24 ಗಂಟೆಯೂ ಕ್ಷೇತ್ರದಲ್ಲಿ ಓಡಾಡಲು ಸಾಧ್ಯವಿಲ್ಲ. ಕೆಲವು ವಿಷಯಗಳಲ್ಲಿ ನನ್ನ ಇತಿಮಿತಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂಬರ್ಥದಲ್ಲಿ ಹೇಳಿರಬಹುದು ಎಂದ ಅವರು, ನಾನು ಕಳೆದ ಚುನಾವಣೆಗೆ ೧೭ ಕೋಟಿ ರೂಪಾಯಿ ಖರ್ಚು ಮಾಡಿ ಸಾಲಗಾರನಾಗಿದ್ದೆ. ಆದರೆ ಈಗ ಸಾಲಮುಕ್ತನಾಗಿದ್ದೇನೆ. ಈಗ ನನಗೆ ಅಧಿಕಾರದ ಆಸೆ ಇಲ್ಲ, ಜಿಲ್ಲೆಯಿಂದ ಎರಡನೇ ಮುಖ್ಯಮಂತ್ರಿ ಆಯ್ಕೆಯಾಗಲಿ ಎಂದು ಸಿದ್ದರಾಮಯ್ಯ ಅವರನ್ನು ಕ್ಷೇತ್ರಕ್ಕೆ ಆಹ್ವಾನಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ | Prajadhwani Yatre | ಬಿಜೆಪಿಯವರು ಕಂಸ, ದುರ್ಯೋಧನಗಿಂತ ನಿರ್ದಯಿಗಳು: ರಣದೀಪ್ ಸಿಂಗ್ ಸುರ್ಜೆವಾಲ ವಾಗ್ದಾಳಿ