ಬೆಳಗಾವಿ: ಅದು ಕಬಡ್ಡಿ (Kabaddi Fight) ಫೈನಲ್ ಪಂದ್ಯ ನಡೆಯುತ್ತಿತ್ತು. ರೋಚಕವಾಗಿ ಆಟ ಸಾಗುತ್ತಿತ್ತು. ಎರಡೂ ಕಡೆಯ ಗುಂಪುಗಳಿಂದ ಪ್ರೋತ್ಸಾಹ, ಶಿಳ್ಳೆ, ಮೆಚ್ಚುಗೆಗಳು ವ್ಯಕ್ತವಾಗುತ್ತಲಿದ್ದವು. ಆದರೆ, ನಿರ್ಣಾಯಕರ ಒಂದು ತೀರ್ಪಿನ ಬಗ್ಗೆ ಗಲಾಟೆ ಆರಂಭವಾಗಿ ಕೊನೆಗೆ ಅದು ಬಡಿದಾಟದ ಹಂತವನ್ನು ತಲುಪಿತು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಂದರಗಿ ಗ್ರಾಮದ ಕ್ರೀಡಾ ಶಾಲಾ ಆವರಣದಲ್ಲಿ ಈ ಪ್ರಕರಣ ನಡೆದಿದೆ. ಕಬಡ್ಡಿ ಆಡುತ್ತಿದ್ದ ಎರಡು ತಂಡಗಳ ಬೆಂಬಲಿಗರ ನಡುವೆ ಆರಂಭವಾದ ಗಲಾಟೆ ಕೈ ಮೀರಿದ್ದರಿಂದ ಮಾರಾಮಾರಿ ಹಂತಕ್ಕೆ ತಲುಪಿತು.
ಏನಿದು ಗಲಾಟೆ?
ಚಂದರಗಿ ಹಾಗೂ ಕಟಕೋಳ ಶಾಲಾ ತಂಡಗಳ ಫೈನಲ್ ಪಂದ್ಯ ನಡೆಯುತ್ತಿದ್ದ ವೇಳೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಈ ವೇಳೆ ನಿರ್ಣಾಯಕರು ತೀರ್ಪು ನೀಡುವಾಗ ತಾರತಮ್ಯ ಮಾಡಿದ್ದಾರೆಂದು ಆರೋಪಿಸಿ ಗಲಾಟೆ ನಡೆದಿದೆ. ಇದು ಮಾತಿಗೆ ಮಾತು ಬೆಳೆದು ಬಡಿಗೆ ಹಿಡಿದು ಬಡಿದಾಡುವಷ್ಟರ ಮಟ್ಟಿಗೆ ಹೋಗಿದೆ. ಕೆಲವು ಯುವಕರು ಹೊಡೆದಾಟವನ್ನೂ ಮಾಡಿಕೊಂಡಿದ್ದಾರೆ.
ಯುವಕರ ಬಡಿದಾಟ ನೋಡಿ ಚಂದರಗಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ಮಧ್ಯ ಪ್ರವೇಶ ಮಾಡಿದರೂ ಗಲಾಟೆ ನಿಂತಿಲ್ಲ. ಎರಡು ಗ್ರಾಮಗಳ ಯುವಕರ ಬಡಿದಾಟದಿಂದ ಬೆದರಿದ ಸ್ಥಳೀಯ ವಿದ್ಯಾರ್ಥಿಗಳು ಓಡಿದ್ದಾರೆ. ನಂತರ ಕಟಕೋಳ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಇದನ್ನೂ ಓದಿ | ಪವಾಡ ಪುರುಷ | ಬೆಳಗಾವಿಯ ಕುರಿ ಕಾಯುವ ಹುಡುಗ ನಾಡಿಗೆ ಆರಾಧ್ಯದೈವವಾದ ಜೀವನಗಾಥೆ!