Site icon Vistara News

13 ವರ್ಷಗಳ ಬಳಿಕ ಬಿಜೆಪಿಗೆ ಒಲಿದ ಕಲಬುರಗಿ ಪಾಲಿಕೆ ಗದ್ದುಗೆ; ಖರ್ಗೆಗೆ ತವರಲ್ಲಿ ಹಿನ್ನಡೆ, ಫಲ ನೀಡಿದ ರೇವೂರ ಪ್ರಯತ್ನ

Kalaburagi municipal corporation to be elected to BJP after 13 years Kharges efforts backfire

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ (Kalaburagi municipal corporation) ಆಡಳಿತ ಅವಧಿಯಲ್ಲಿಯೇ ಈ ಬಾರಿ ಬಿಜೆಪಿ ಇತಿಹಾಸ ಬರೆದಿದೆ. ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ವಿಶಾಲ್ ದರ್ಗಿ ಹಾಗೂ ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಿನಲ್ಲಿ 13 ವರ್ಷದ ಬಳಿಕ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನು ಹಿಡಿದಿದೆ.

ಮೇಯರ್‌-ಉಪ ಮೇಯರ್‌ ಚುನಾವಣೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಬೆಂಬಲಿಗನಿಗೆ ಮೇಯರ್ ಗಾದಿ ಒಲಿದಂತೆ ಆಗಿದೆ. ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದಂತಾಗಿದೆ.

ವಿಜಯೋತ್ಸವ ಆಚರಿಸಿದ ಬಿಜೆಪಿ ಬೆಂಬಲಿಗರು

ಇದನ್ನೂ ಓದಿ: Next CM: ಮುಂದಿನ ಸಿಎಂ ನಾನೇ ಎಂದು ಬೊಮ್ಮಾಯಿ ಹೇಳಿದ್ದರಲ್ಲಿ ತಪ್ಪೇನಿದೆ: ಬಿ.ಎಸ್‌. ಯಡಿಯೂರಪ್ಪ ಹೀಗೆ ಹೇಳಿದ್ದು ಯಾಕೆ?

ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೆಯ ಪಾಟೀಲ್ ರೇವೂರ ಪ್ರಯತ್ನಕ್ಕೆ ಕಡೆಗೂ ಜಯ ಸಿಕ್ಕಿದೆ. ಗುರುವಾರ (ಮಾ. 23) ನಡೆದ ಚುನಾವಣೆಯಲ್ಲಿ 65 ಸದಸ್ಯರಲ್ಲಿ 33 ಮತ ಬಿಜೆಪಿಗೆ ಬಂದಿದೆ. ಕಾಂಗ್ರೆಸ್‌ಗೆ ಜೆಡಿಎಸ್ ಬೆಂಬಲ ಸಿಕ್ಕರೂ 32 ಮತ ಗಳಿಸಿ ಸೋಲನುಭವಿಸಿದೆ.

ಕಳೆದ 2010ರಲ್ಲಿ ಅಂದಿನ ಶಾಸಕ ಚಂದ್ರಶೇಖರ ರೇವೂರ ನೇತೃತ್ವದಲ್ಲಿ ಬಿಜೆಪಿ ಮೊದಲ ಬಾರಿಗೆ ಮೇಯರ್ ಗಾದಿ ಏರಿತ್ತು. ಚಹಾ ಮಾರುವ ಮಹಿಳೆ ಸುನಂದಾ ಮೊದಲ ಬಾರಿಗೆ ಕೇಸರಿ ಪಕ್ಷದಿಂದ ಅಧಿಕಾರಕ್ಕೇರಿದ್ದರು. ಆಗ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಈಗ 13 ವರ್ಷಗಳ ನಂತರ ಮತ್ತೆ ಸ್ವಂತ ಶಕ್ತಿಯ ಮೇಲೆ ಬಿಜೆಪಿ ಆಡಳಿತ ಚುಕ್ಕಾಣಿಯನ್ನು ಹಿಡಿದಿದೆ.

ಆಗ ಶಾಸಕ ಚಂದ್ರಶೇಖರ್ ಪಾಟೀಲ್ ರೇವೂರ ಪ್ರಯತ್ನಕ್ಕೆ ಫಲ ಸಿಕ್ಕಿತ್ತು. ಈಗ ಅವರ ಪುತ್ರ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಯಶಸ್ಸು ಸಿಕ್ಕಿದೆ. ಈ ಮೂಲಕ ಅಪ್ಪ-ಮಗ ತಮ್ಮ ಪ್ರಾಬಲ್ಯವನ್ನು ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: Karnataka Election: ಅಜ್ಜಂಪೀರ್ ಖಾದ್ರಿ ಬಂಡಾಯ ವಾಪಸ್‌; ವಿನಯ್‌ ಕುಲಕರ್ಣಿಗೆ ಶಿಗ್ಗಾಂವಿ ಟಿಕೆಟ್‌ ಕೊಟ್ಟರೆ ಬೆಂಬಲಿಸುವೆ

ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ- ರೇವೂರ

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, 13 ವರ್ಷಗಳ ಬಳಿಕ ಬಿಜೆಪಿಯು ಮಹಾನಗರ ಪಾಲಿಕೆಯ ಗದ್ದುಗೆಯನ್ನು ಹಿಡಿದಿದೆ. ನಗರದಲ್ಲಿ ಇನ್ನೂ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಎಲ್ಲರೂ ಒಟ್ಟಾಗಿ ಅಭಿವೃದ್ಧಿಯೆಡೆಗೆ ಸಾಗಬೇಕು. ಇದಕ್ಕಾಗಿ ನಮಗೆ ಕಾಂಗ್ರೆಸ್ ಕಾರ್ಪೋರೇಟ್‌ ಸದಸ್ಯರು ಸಹ ಸಹಕಾರ ನೀಡಬೇಕು. ಒಂದು ವೇಳೆ ಅಡ್ಡಗಾಲು ಹಾಕಿದರೆ ಜನರೇ ಪಾಠ ಕಲಿಸಲಿದ್ದಾರೆ ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದರು.

Exit mobile version