ಅಫಜಲಪುರ: ಈ ಬಾರಿಯ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ (Karnataka election 2023) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ರಾಷ್ಟ್ರೀಯ ಪಕ್ಷಗಳಿಗೆ (National parties) ಪೈಪೋಟಿ ನೀಡಿ, ಕೆಲವೇ ಮತಗಳ ಅಂತರದಿಂದ ಸೋತಿರಬಹುದು. ಆದರೆ 52 ಸಾವಿರ ಮತಗಳನ್ನು ಪಡೆಯುವ ಮೂಲಕ ಮತದಾರರ ಹೃದಯ ಗೆದ್ದಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ನಿನಿನ್ ಗುತ್ತೇದಾರ್ ತಿಳಿಸಿದರು.
ಪಟ್ಟಣದ ಶ್ರೀ ಗುರು ಮಳೇಂದ್ರ ಶಿವಾಚಾರ್ಯ ಕಲ್ಯಾಣ ಮಂಟಪ ಏರ್ಪಡಿಸಿದ್ದ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭದಲ್ಲಿ ಅವರು ಮಾತನಾಡಿ, ಚುನಾವಣೆಯಲ್ಲಿ ಸಾಕಷ್ಟು ಹಿರಿಯರು ನನ್ನನ್ನು ನಂಬಿ, ರಾಷ್ಟ್ರೀಯ ಪಕ್ಷಗಳ ಬಿಟ್ಟು ಬೆಂಬಲಿಸಿದಾಗಲಾದರೂ ದೇವರು ನಮ್ಮ ಮೇಲೆ ಕರುಣೆ ತೋರಬೇಕಿತ್ತು. ಆದರೂ ಸ್ವಲ್ಪ ಮತಗಳಿಂದ ನಮಗೆ ಹಿನ್ನಡೆಯಾಗಿದೆ. ಅದಕ್ಕಾಗಿ ಯಾವುದೇ ನಮ್ಮ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಧೈರ್ಯ ಕಳೆದುಕೊಳ್ಳದೇ ಗಟ್ಟಿಯಾಗಿ ನನ್ನ ಜತೆ ನಿಲ್ಲುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಇದೆಂಥ ಅನ್ಯಾಯ! ಹುಟ್ಟುಹಬ್ಬದ ಕೇಕ್ ಕತ್ತರಿಸಲು ರೆಡಿಯಾಗಿದ್ದ ಬಾಲಕ ಕಾಂಪೌಂಡ್ ಕುಸಿದು ದುರ್ಮರಣ
ಚುನಾವಣೆಯಲ್ಲಿ ಸಂದರ್ಭದಲ್ಲಿ ಪ್ರಚಾರಕ್ಕೆ ಪ್ರತಿಯೊಂದು ಹಳ್ಳಿಗೆ ಹೋದಾಗ ನಿಮ್ಮ ಮನೆಯ ಮಗನಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದೆ ಅದರಂತೆ ನಿಮ್ಮ ಯಾವುದೇ ಕೆಲಸ ಕಾರ್ಯಗಳು ಇದ್ದರೆ ನೇರವಾಗಿ ಫೋನ್ ಮಾಡಿ ಹೇಳಿದರೆ ಸಾಕು ನಿಮ್ಮ ಮನೆಯ ಮುಂದೆ ಬಂದು ನಿಲ್ಲುತ್ತೇನೆ. ಶೀಘ್ರದಲ್ಲೇ ಜಿಪಂ ಮತ್ತು ತಾಪಂ ಚುನಾವಣೆ ಇರುವುದರಿಂದ ಕಾರ್ಯಕರ್ತರಿಗೆ ಶಕ್ತಿ ತುಂಬಲು ಯಾವ ರೀತಿ ಅನುಕೂಲವಾಗುತ್ತದೆಯೋ ಹಾಗೆ ಮಾಡುತ್ತೇನೆ. ಅದೇ ರೀತಿ ಕಾರ್ಯಕರ್ತರ ಒಪ್ಪಿಗೆ ಮೇರೆಗೆ ನಡೆದುಕೊಳ್ಳುತ್ತೇನೆ. ಪಕ್ಷೇತರ ಅಭ್ಯರ್ಥಿಯಾದರೂ ಕೂಡ ನನಗೆ ಬೆಂಬಲಿಸಿದ ರೀತಿ ಇಡೀ ರಾಜ್ಯವೇ ನಮ್ಮ ಕಡೆ ನೋಡುವಂತೆ ಮಾಡಿದ್ದೀರಿ. ಅದಲ್ಲದೆ, ಎರಡು ರಾಷ್ಟ್ರೀಯ ಪಕ್ಷಗಳು ನೇರ ನೇರವಾಗಿ ಟೀಕಿಸುವುದನ್ನು ಬಿಟ್ಟು ನಮಗೆ ಟಾರ್ಗೆಟ್ ಮಾಡಿ ಸುಮ್ಮನೆ ಅಪಪ್ರಚಾರ ಮಾಡಿದ್ದಾರೆ. ಚುನಾವಣೆಯಲ್ಲಿ ನನಗೆ ಬೆಂಬಲಿಸಿ ಮತ ಹಾಕಿದ ಎಲ್ಲರಿಗೂ ಕೂಡ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದರು.
ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಮಾತನಾಡಿ, ರಾಷ್ಟ್ರೀಯ ಪಕ್ಷಗಳ ಪೈಪೋಟಿ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನಿತಿನ್ ಗುತ್ತೇದಾರ್ ಅವರಿಗೆ 52 ಸಾವಿರ ಮತಗಳನ್ನು ನೀಡಿ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಪಕ್ಷವನ್ನು ಹಿಂದಿಕ್ಕಿ ಗೆಲುವಿನ ಸಮೀಪ ಬಂದು ಕೆಲವೇ ಮತಗಳ ಅಂತರದಿಂದ ಸೋಲಾದರೂ ನಮಗೆ ಸೋಲಿನಲ್ಲಿ ಗೆಲುವು ತಂದಿದೆ. ಯಾರೂ ಕೂಡಾ ಧೈರ್ಯ ಕಳೆದುಕೊಳ್ಳದೇ ಗಟ್ಟಿಯಾಗಿ ನಿಂತು ಮುಂದಿನ ಹೋರಾಟಕ್ಕೆ ಸಜ್ಜಾಗಿ, ನಾವು ನಿಮ್ಮೆಲ್ಲರ ಬೆನ್ನಿಗೆ ಇರುತ್ತೇವೆ. ಜಾತ್ಯತೀತ ನಾಯಕರಾಗಿರುವ ನಿತಿನ್ ಗುತ್ತೇದಾರ್ ಅವರು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಾರೆಂಬ ಸಂಪೂರ್ಣ ಭರವಸೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: world Environment Day: ಸೋಮೇಶ್ವರ ಕಡಲ ಕಿನಾರೆ ಸ್ವಚ್ಛತಾ ಯಾನ; ಸ್ವಚ್ಛ-ಸಮೃದ್ಧ ಬೈಂದೂರಿಗೆ ಮುಂದಾದ ಬರಿಗಾಲ ಸಂತ
ಈ ಸಂದರ್ಭದಲ್ಲಿ ಮುಖಂಡರಾದ ಸತೀಶ್ ಗುತ್ತೇದಾರ್, ತುಕಾರಾಮಗೌಡ ಪಾಟೀಲ್, ಮಹಾದೇವ ಗುತ್ತೇದಾರ್, ರಮೇಶ ಬಾಕೆ, ವಿಶ್ವನಾಥ ರೇವೂರ, ಜ್ಯೋತಿ ಪ್ರಕಾಶ್ ಪಾಟೀಲ್, ಗುರು ಸಾಲಿಮಠ, ರಾಜಶೇಖರ್ ಜಿಡ್ಡಗಿ, ವಿಶ್ವನಾಥ ಕಾರ್ನಾಡ್,ರಮೇಶ ನೀಲಗಾರ, ಶಿವಪುತ್ರಪ್ಪ ಕೇರೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.