ಕಲಬುರಗಿ: ಕಲಬುರಗಿಯ (Kalaburagi News) ರಾಜಾಪೂರ ಜಿಡಿಎ ಉದ್ಯಾನವನದ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಗಣಪತಿ ಶ್ಯಾಮರಾವ್ ಕೊಳ್ಳಿ (35) ಮೃತ ದುರ್ದೈವಿ.
ಮೂಲತಃ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಗಣಪತಿ ಕಲಬುರಗಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಶನಿವಾರ ಪಾರ್ಕ್‌ವೊಂದರ ಮರಕ್ಕೆ ವೇಲ್‌ನಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ವಾಯುವಿಹಾರಕ್ಕೆ ಬಂದವರು ಮರದಲ್ಲಿ ಶವ ನೇತಾಡುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವಿ.ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.
ಸಾಲದ ಕಂತು ಕಟ್ಟಿಲ್ಲ ಎಂದು ಫೈನಾನ್ಸ್‌ನಲ್ಲೇ ದಿಗ್ಬಂಧನ; ನೊಂದ ಮಹಿಳೆ ಆತ್ಮಹತ್ಯೆ
ಚಿಕ್ಕಮಗಳೂರು: ಸಾಲ ಮರುವಸೂಲಿ ಎನ್ನುವುದು ಈಗ ಪಕ್ಕಾ ರೌಡಿಸಂ ಚಟುವಟಿಕೆಯಾಗಿದೆ. ಸಾಲದ ಕಂತು ಒಂದು ಮಿಸ್ ಅದರೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ (Harassment Case) ನೀಡುವ ಕೃತ್ಯಗಳು ಅಲ್ಲಲ್ಲಿ ನಡೆಯುತ್ತಿವೆ. ಆದರೆ, ಅವೆಲ್ಲವೂ ಮುಚ್ಚಿ ಹೋಗುತ್ತಿವೆ. ಆದರೆ, ಇದೀಗ ಒಬ್ಬ ಮಹಿಳೆ ಈ ಕೃತ್ಯಗಳಿಂದ ನೊಂದು ಪ್ರಾಣವನ್ನೇ ಕಳೆದುಕೊಂಡಿರುವುದರಿಂದ (woman ends life) ಈ ಫೈನಾನ್ಸ್‌ಗಳ (Finance Loan recovery) ಆಟಾಟೋಪ ಮತ್ತೊಮ್ಮೆ ಬಟಾಬಯಲಾಗಿದೆ.
ಇದು ಚಿಕ್ಕಮಗಳೂರಿನ ಕಡೂರು ತಾಲೂಕಿನಲ್ಲಿ ನಡೆದ ಭಯಾನಕ ಘಟನೆ. ಇಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಕಿರುಕುಳಕ್ಕೆ ನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಡೂರು ತಾಲೂಕಿನ ತಂಗಲಿ ಗ್ರಾಮದ ದೇವೀರಮ್ಮ (64) ಪ್ರಾಣ ಕಳೆದುಕೊಂಡವರು.
ಇದನ್ನೂ ಓದಿ : Self Harming : ಅಕ್ರಮ ಸಂಬಂಧಕ್ಕೆ ಯುವಕನ ಕೊಂದ ವಾಚ್‌ಮ್ಯಾನ್ ನೇಣಿಗೆ ಶರಣು
ದೇವೀರಮ್ಮ ಅವರು ಕೃಷಿಕ ಮಹಿಳೆ. ಕಡೂರಿನ ಗ್ರಾಮೀಣ ಕೂಟ ಫೈನಾನ್ಸ್ ನಲ್ಲಿ 78 ಸಾವಿರ ರೂ. ಸಾಲ ಪಡೆದಿದ್ದರು. ಅವರು ವಾರಕ್ಕೊಮ್ಮೆ ಕಂತು ಕಟ್ಟಬೇಕಾಗಿತ್ತು. ಆರಂಭದ ಕೆಲವು ತಿಂಗಳು ಅವರು ವಾರ ವಾರ ಹಣ ಮರುಪಾವತಿ ಮಾಡಿದ್ದರು. ಆದರೆ, ಕಳೆದ ಒಂದು ತಿಂಗಳಲ್ಲಿ ಅವರು ಪ್ರತಿ ವಾರದ ಕಂತು ಕಟ್ಟಿರಲಿಲ್ಲ.
ಮಳೆ ಕೈಕೊಟ್ಟ ಹಿನ್ನೆಲೆ ಹಣ ಇಲ್ಲದೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಕಂತು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಅವರಿಗೆ ಪ್ರತಿ ದಿನ ಎನ್ನುವ ಹಾಗೆ ಫೋನ್ ಮಾಡಿ, ಮನೆಗೆ ಭೇಟಿ ನೀಡಿ ಕಿರುಕುಳ ನೀಡಲಾಗುತ್ತಿತ್ತು. ಕೊನೆಗೆ ಅವರನ್ನು ಫೈನಾನ್ಸ್‌ಗೆ ಬಂದು ಮಾತನಾಡಿ ಎಂದು ಸೂಚಿಸಲಾಗಿತ್ತು.
ಫೈನಾನ್ಸ್‌ಗೆ ಹೋಗಿ ಅಲ್ಲಿ ಸಮಸ್ಯೆ ವಿವರಿಸಿ, ಸ್ವಲ್ಪ ಸಮಯಾವಕಾಶ ಕೇಳುವುದು ಎಂದು ತೀರ್ಮಾನಿಸಿ ದೇವೀರಮ್ಮ ಅಲ್ಲಿಗೆ ಭೇಟಿ ನೀಡಿದ್ದರು. ಆದರೆ, ಅಲ್ಲಿ ಅವರಿಗೆ ವಿಪರೀತ ಕಿರುಕುಳ ನೀಡಲಾಗಿದೆ. ಒಮ್ಮೆ ಫೈನಾನ್ಸ್‌ಗೆ ಪ್ರವೇಶಿಸಿದವರನ್ನು ಹೊರಗೆ ಹೋಗಲು ಬಿಟ್ಟಿಲ್ಲ. ಯಾರಿಗಾದರೂ ಹೇಳಿ, ಏನಾದರೂ ಮಾಡಿ ಹಣ ಕೊಟ್ಟೇ ಹೊರಗೆ ಹೋಗಬೇಕು ಎಂದು ತಿಳಿಸಲಾಗಿತ್ತು. ಪರಿಪರಿಯಾಗಿ ವಿನಂತಿಸಿದರೂ ಅಲ್ಲಿನ ಸಿಬ್ಬಂದಿ ಮನಸು ಕರಗಿರಲಿಲ್ಲ. ಕೊನೆಗೆ ಸಂಜೆಯ ಹೊತ್ತಿಗೆ ಹೇಗೋ ಕಚೇರಿಯಿಂದ ಹೊರಬಿಡಲಾಯಿತು.
ಹೀಗೆ ಅಪಮಾನಿತರಾಗಿ ಮನೆಗೆ ಹೋದ ದೇವೀರಮ್ಮ ಮನನೊಂದು ನೇಣು ಬಿಗಿದುಕೊಂಡು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯ ಪ್ರಾಣ ಹೋಗಲು ಕಾರಣವಾದ ಫೈನಾನ್ಸ್ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ