ಕಲಬುರಗಿ: ಕೊಲೆ ನಡೆದಿರುವುದು 1997ರಲ್ಲಿ. ಪ್ರಕರಣಕ್ಕೆ ಸಂಬಂಧಿಸಿ ೧೨ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದರೂ ಈತ ೨೫ ವರ್ಷಗಳಿಂದ ಮಹಾರಾಷ್ಟ್ರದ ಸೋಲಾಪುರದಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಪೊಲೀಸರು ಕೇಸನ್ನು ಮರೆತಿದ್ದಾರೆ, ಎಲ್ಲವೂ ಮುಗಿದು ಹೋಗಿದೆ ಎಂದು ಆತ ಆರಾಮವಾಗಿ ಓಡಾಡುತ್ತಿದ್ದ. ಕೊನೆಗೂ ಆತನ ಸುಳಿವು ಪತ್ತೆ ಹಚ್ಚಿದ ಪೊಲೀಸರು ಹೆಡೆಮುರಿ ಕಟ್ಟಿ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಇದರೊಂದಿಗೆ 1997ರಲ್ಲಿ ಇಲ್ಲಿನ ಹಡಗಿಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಕರಿಮ್‌ಸಾಬ್ ಎಂಬ ಆರೋಪಿ ಬಂಧನಕ್ಕೆ ಒಳಗಾಗಿದ್ದಾನೆ. ಜತೆಗೆ, ಬರೋಬ್ಬರಿ 25 ವರ್ಷಗಳಿಂದ ತಮಗೆ ಚಳ್ಳೆ ಹಣ್ಣು ತಿನ್ನಿಸಿಕೊಂಡು ತಲೆ ಮರೆಸಿಕೊಂಡು ಓಡಾಡ್ತಿದ್ದ ಆರೋಪಿಯನ್ನು ಸೆರೆ ಹಿಡಿದ ನೆಮ್ಮದಿ ನಿಂಬರ್ಗಾ ಪೊಲೀಸರಿಗೆ. ಆರೋಪಿಯು ಕೃತ್ಯ ನಡೆಸಿದ ದಿನದಿಂದ ತನ್ನೂರು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ್‌ನಲ್ಲಿ ತಲೆಮರೆಸಿಕೊಂಡಿದ್ದ.
ಇದನ್ನೂ ಓದಿ| ಒಂದೇ ಮನೆಯ 9 ಮಂದಿಯ ಸಾಮೂಹಿಕ ಸಾವು ಆತ್ಮಹತ್ಯೆಯಲ್ಲ, ಮಂತ್ರವಾದಿ ಮಾಡಿದ ಕೊಲೆ!
1997ರಲ್ಲಿ ಹಡಗಿಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ದತ್ತಪ್ಪ ದೊಡ್ಡಮನಿ ಎಂಬುವರು ವಿರುದ್ಧ ರಾಜಕೀಯ ವೈಷಮ್ಯ ಬೆಳೆಸಿಕೊಂಡಿದ್ದ ಮಹಾರಾಷ್ಟ್ರದ ಉದ್ಯಮಿಯೊಬ್ಬರು ಅವರ ಕೊಲೆ ಸಂಚು ರೂಪಿಸಿ ಸುಪಾರಿ ನೀಡಿದ್ದರು. ಅದರಂತೆ
ಸುಪಾರಿ ಪಡೆದ ಕರ್ನಾಟಕ ಮತ್ತು ಮಹಾರಾಷ್ಟ್ರದ ಹಂತಕರು ಕಲಬುರಗಿಯಿಂದ ಆಳಂದ ಕಡೆಗೆ ಪ್ರಯಾಣಿಸುತ್ತಿದ್ದ ದತ್ತಪ್ಪ ದೊಡ್ಡಮನಿಯನ್ನ ಬೆನ್ನಟ್ಟಿ ಬಂದು ವೈಜಾಪುರ ಕ್ರಾಸ್ ಬಳಿ ಕೊಲೆ ಮಾಡಿ ತಪ್ಪಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 12 ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕರೀಮ್‌ಸಾಬ್ ತಲೆಮರೆಸಿಕೊಂಡಿದ್ದ. ಕೊಲೆಯಾಗಿ 25 ವರ್ಷಗಳೇ ಕಳೆದಿದ್ದು,ಪೊಲೀಸರು ಪ್ರಕರಣ ಮುಚ್ಚಿ ಹಾಕಿದ್ದಾರೆ ಅಂತಾ ಬಿಂದಾಸ್ ಆಗಿ ಓಡಾಡಿಕೊಂಡಿದ್ದ.
ಪೊಲೀಸರು ಕರೀಮ್‌ಸಾಬ್‌ಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸಿದ್ದರು. ಇತ್ತೀಚೆಗೆ ಆತ ಮಹಾರಾಷ್ಟ್ರದ ಸೋಲಾಪುರದಿಂದ ಅಕ್ಕಲಕೋಟ್ ಕಡೆ ಹೋಗುವ ಮಾಹಿತಿ ಪಡೆದ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ| ನಟಿ ಅನುಷ್ಕಾ ಶೆಟ್ಟಿ ಸೋದರನ ಕೊಲೆ ಯತ್ನ, ಮಾಹಿತಿ ಸಂಗ್ರಹಿಸಿದ ಮಂಗಳೂರು ಪೊಲೀಸ್