ಕಲಬುರಗಿ : ಕಳೆದ ಜನವರಿಯಲ್ಲಿ ಕಲಬುರಗಿ ನಗರದ (Kalaburagi News) ಕೊಟನೂರ (ಡಿ) ಬಡಾವಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ (Ambedkar statue) ಅಪಮಾನ ಮಾಡಲಾಗಿತ್ತು. ಪ್ರತಿಮೆಗೆ ಅಪಮಾನ ಮಾಡಿದ ಆರೋಪಿ ಸಂಗಮೇಶ್ ಎಂಬಾತನಿಗೆ ಏ.30ರ ಮಂಗಳವಾರ ಕೋರ್ಟ್‌ನಿಂದ ಜಾಮೀನು ಮಂಜೂರು ಆಗಿತ್ತು. ಜಾಮೀನಿನ ಮೇಲೆ ಹೊರ ಬಂದಿದ್ದ ಸಂಗಮೇಶ್ ಮನೆ ಮೇಲೆ ಮಂಗಳವಾರ ರಾತ್ರಿ 12 ಗಂಟೆಗೆ ಸುಮಾರು 50 ರಿಂದ 60 ಜನರ ತಂಡವೊಂದು ದಿಢೀರ್ ದಾಳಿ ಮಾಡಿತ್ತು. ಇದೀಗ ಈ ಪ್ರಕರಣವನ್ನು ಸಿಐಡಿಗೆ ವಹಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕಳೆದ ಮೂರು ತಿಂಗಳ ಹಿಂದೆ ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ್ದ ಆರೋಪಿ ಬಿಡುಗಡೆಯಾಗಿ ಬಂದಿದ್ದ. ಆದರೆ ಕೆಲವರು ಆತನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಸದ್ಯ ಈ ಪ್ರಕರಣವನ್ನು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಲಾಗುತ್ತಿದೆ. ಹಲ್ಲೆಗೊಳಗಾದ ಸಂಗಮೇಶ್ ಮೇಲೆ ಹಲ್ಲೆ ಮಾಡಿದ್ದು ತಪ್ಪು, ಈ ಪ್ರಕರಣ ಸಿಐಡಿಗೆ ವಹಿಸುತ್ತೆವೆ ಎಂದರು.
ಮುಂದುವರಿದ ವೀರಶೈವ ಲಿಂಗಾಯಿತ ಸಮಾಜದ ಪ್ರತಿಭಟನೆ
ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಆರೋಪಿ ಮನೆ ಮೇಲೆ ದಾಳಿ ಮಾಡಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರವು ಪ್ರತಿಭಟನೆಗಳು ಮುಂದುವರಿದಿದೆ. ಲಿಂಗಾಯಿತ ಸಮುದಾಯದವರು ಕಲಬುರಗಿಯ ವಿವಿಧಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕಲಬುರಗಿ ನಗರದ ಆಳಂದ ಚೆಕ್‌ಪೋಸ್ಟ್‌ನಲ್ಲಿ ಟೈಯರ್‌ಗೆ ಬೆಂಕಿ ಹಾಕಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನೂ ಓದಿ: Ambedkar Statue: ತಲೆ ತಿರುಗಿ ಬಿದ್ದ ಕಲಬುರಗಿ ಸಂಸದ ಉಮೇಶ್ ಜಾಧವ್
ಜಾಮೀನು ಪಡೆದು ಹೊರಬಂದ ಆರೋಪಿ ಮನೆಗೆ ಕಲ್ಲು ತೂರಾಟ
ಪ್ರತಿಮೆಗೆ ಅಪಮಾನ ಮಾಡಿದ ಆರೋಪಿ ಸಂಗಮೇಶ್ ಎಂಬಾತನಿಗೆ ಮಂಗಳವಾರ ಕೋರ್ಟ್‌ನಿಂದ ಜಾಮೀನು ಮಂಜೂರು ಆಗಿತ್ತು. ಜಾಮೀನಿನ ಮೇಲೆ ಹೊರ ಬಂದಿದ್ದ ಸಂಗಮೇಶ್ ಮನೆ ಮೇಲೆ ಮಂಗಳವಾರ ರಾತ್ರಿ 12 ಗಂಟೆಗೆ ಸುಮಾರು 50 ರಿಂದ 60 ಜನರ ತಂಡವೊಂದು ದಿಢೀರ್ ದಾಳಿ ಮಾಡಿತ್ತು.
ಆರೋಪಿ ಕುಟುಂಬಸ್ಥರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದರು. ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಬೈಕ್ ಜಖಂಗೊಳಿಸಿದ್ದರು. ಆರೋಪಿ ಸಂಗಮೇಶ್ ಮನೆಯಲ್ಲದೇ ಬಡಾವಣೆಯಲ್ಲಿರುವ ಇತರೆ ಮನೆಗಳ ಮೇಲೂ ದಾಳಿ ಮಾಡಿದ್ದರು. ಹಲವು ಬೈಕ್‌ಗಳ ಜಖಂಗೊಳಿಸಿ, ಕಾರುಗಳ ಗಾಜು ಪುಡಿ ಪುಡಿ ಮಾಡಿದ್ದರು. ಇನ್ನೂ ಕಿಡಿಗೇಡಿಗಳ ದಾಳಿಗೆ ವೀರಶೈವ-ಲಿಂಗಾಯತ ಜನರು ತೀವ್ರ ಆಕ್ರೋಶವನ್ನು ಹೊರಹಾಕಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಕಲಬುರಗಿ ಬಂದ್‌ಗೆ ಕರೆ ಕೊಡಲಾಗುವುದು ಎಂದು ಎಚ್ಚರಿಸಿದ್ದರು. ಸದ್ಯ ಕಲಬುರಗಿ ವಿವಿ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: Suspicious Death : ಗೃಹಿಣಿಯ ಕುತ್ತಿಗೆಯಲ್ಲಿತ್ತು ರಕ್ತ ಹೆಪ್ಪುಗಟ್ಟಿರುವ ಕಲೆ; ಈ ಸಾವು ಕೊಲೆಯೋ, ಆತ್ಮಹತ್ಯೆಯೋ
ಏನಿದು ಪ್ರಕರಣ
ಕಳೆದ ಜನವರಿ 22ರ ರಾತ್ರಿ ಕಲಬುರಗಿಯ ಕೋಟನೂರ ಬಡಾವಣೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ (Ambedkar Statue) ಯಾರೋ ದುಷ್ಕರ್ಮಿಗಳು ಅಪಮಾನ (Desecration of Ambedkar statue) ಮಾಡಿದ್ದರಿಂದ ಈ ಭಾಗದಲ್ಲಿ ಆಕ್ರೋಶ ಭುಗಿಲೆದಿತ್ತು. ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ್ದರಿಂದ ಆಕ್ರೋಶಗೊಂಡಿದ್ದ ದಲಿತ ಸಮುದಾಯದವರು ರಸ್ತೆ ತಡೆ (Road block in kalaburagi) ನಡೆಸಿ ಪ್ರತಿಭಟನೆ ನಡೆಸಿದ್ದರು. ಕಲಬುರಗಿಯ ಒಂದು ಪೆಟ್ರೋಲ್ ಪಂಪ್‌ಗೆ ಹಾನಿ ಮಾಡಲಾಗಿತ್ತು.
ಕೋಟನೂರ ಬಡಾವಣೆಯಲ್ಲಿರುವ ಪ್ರತಿಮೆಗೆ ಚಪ್ಪಲಿ ಹಾರ ಹಾಕಿರುವುದು ಮರುದಿನ ಬೆಳಗ್ಗೆ ಗಮನಕ್ಕೆ ಬಂದಿತ್ತು. ಇದನ್ನು ನೋಡಿ ಆಕ್ರೋಶಿತರಾದ ಜನರು ಪ್ರತಿಭಟನೆಗೆ ಇಳಿದರು. ರಸ್ತೆ ತಡೆಯ ವಿಷಯ ತಿಳಿಯುತ್ತಲೇ ಪೊಲೀಸರು ಆಗಮಿಸಿದರು. ಸ್ಥಳಕ್ಕೆ ಆಗಮಿಸಿದ ಡಿಸಿಪಿ ಕನ್ನಿಕಾ ಸಿಕ್ರಿವಾಲ್ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯನ್ನು ನಿಯಂತ್ರಿಸಲು ಪೊಲೀಸರು ಒಂದು ಹಂತಕ್ಕೆ ಸಫಲರಾದರೂ ಅದು ಬೇರೆ ಬೇರೆ ಭಾಗಗಳಿಗೆ ಹರಡಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ