Site icon Vistara News

Toor dal growers : ನೆಟೆ ರೋಗದಿಂದ ನಷ್ಟ ಅನುಭವಿಸಿದ್ದ ರೈತರಿಗೆ Good News : ಸರಕಾರದಿಂದ ಬಾಕಿ ಪರಿಹಾರ ಬಿಡುಗಡೆ

toor dal Chaluvaraya swamy

ಬೆಂಗಳೂರು: ಕಳೆದ ವರ್ಷ ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನೆಟೆ ರೋಗದಿಂದ (Starch disease) ತೊಗರಿ ಬೆಳೆಗೆ (Toor dal) ಭಾರಿ ಹಾನಿ ಆಗಿತ್ತು. ಆಗ ನಷ್ಟ ಅನುಭವಿಸಿದ್ದ ರೈತರಿಗೆ (Toor dal growers) ಸರ್ಕಾರ ಪರಿಹಾರ (Compensation from government) ಘೋಷಿಸಿತ್ತು. ಅದರಲ್ಲಿ ಬಾಕಿ ಇದ್ದ ಪರಿಹಾರ ಹಣವನ್ನು ರಾಜ್ಯ ಸರ್ಕಾರ ಈಗ ಬಿಡುಗಡೆ ಮಾಡುವ ಮೂಲಕ ಒಂದಿಷ್ಟು ನೆಮ್ಮದಿ ನೀಡಿದೆ.

ಕಳೆದ ಸಾಲಿನಲ್ಲಿ ತೊಗರಿ ಬೆಳೆಗಾರರಿಗೆ ಭಾರಿ ನಷ್ಟ ಉಂಟಾಗಿತ್ತು. ಒಂದು ಕಡೆ ಅತಿವೃಷ್ಟಿಯಿಂದ ಆರಂಭದಲ್ಲೇ ತೊಗರಿ ಬೆಳೆ ನಾಶವಾಗಿತ್ತು. ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ್ದ ತೊಗರಿ ನೀರುಪಾಲಾಗಿತ್ತು.

ಅತಿವೃಷ್ಟಿಯಿಂದ ಆರಂಭದಲ್ಲಿಯೇ ತೊಗರಿ ಹಾಳಾಗಿದ್ದರಿಂದ ರೈತರು ಮತ್ತೆ ಭೂಮಿ ಹಸನು ಮಾಡಿ ತೊಗರಿ ಬಿತ್ತನೆ ಮಾಡಿದ್ದರು. ತೊಗರಿ ಬೆಳೆ ಕೂಡಾ ಚೆನ್ನಾಗಿ ಬಂದಿತ್ತು. ಆದರೆ ತೊಗರಿ ಕಾಳಾಗುವ ಹಂತದಲ್ಲಿ, ನಟೆ ರೋಗ ಒಕ್ಕರಿಸಿಕೊಂಡಿತ್ತು. ನಟೆ ರೋಗದಿಂದ ತೊಗರಿ ಗೊಡ್ಡಾಗಿದ್ದು, ಕಾಳಾಗುವ ಮುನ್ನವೇ ಒಣಗಲು ಶುರುವಾಗಿತ್ತು.

ನಟೆರೋಗದಿಂದ ಸಂತ್ರಸ್ತರಾದ ರೈತರು ಪರಿಹಾರಕ್ಕಾಗಿ ಸರ್ಕಾರದ ಮೊರೆ ಹೋಗಿದ್ದರು. ಕಳೆದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಬಂದಾಗಲೂ ಜನರು ಪ್ರತಿಭಟನೆಯ ಮೂಲಕ ಅವರ ಗಮನ ಸೆಳೆಯಲು ಪ್ರಯತ್ನ ಮಾಡಿದ್ದರು.

ಮೂರು ಜಿಲ್ಲೆಗಳಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. ಇದು ರೈತರಿಗೆ ಭಾರಿ ಸಂಕಷ್ಟವನ್ನು ತಂದಿತ್ತು.

ಇದನ್ನೂ ಓದಿ: Rain News : ಮೋಡ ಬಿತ್ತನೆ ಇಲ್ಲ; 100ಕ್ಕೂ ಹೆಚ್ಚು ಬರಪೀಡಿತ ತಾಲೂಕು ಘೋಷಣೆಗೆ ಕೇಂದ್ರಕ್ಕೆ ಮನವಿ: ಚಲುವರಾಯಸ್ವಾಮಿ

ಇದೀಗ ಬಾಕಿ ಪರಿಹಾರ ಬಿಡುಗಡೆ

ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಮನವಿ ಮೇರೆಗೆ ನೆಟೆ ರೋಗ ಸಂತ್ರಸ್ತರಿಗೆ ಬಾಕಿ ಇದ್ದ 223 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿ, ಅದರಲ್ಲಿ 74 ಕೊಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಇದೀಗ 2ನೇ ಕಂತಿನಲ್ಲಿ 74 ಕೋಟಿ ರೂ ಬಿಡುಗಡೆಗೊಳಿಸಲಾಗಿದೆ.

ಬಾಕಿ ಉಳಿದ ರೂ 75 ಕೋಟಿ ಹಣವನ್ನು ಸಹ ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಣೆ ಮೂಲಕ ತಿಳಿಸಿರುವ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಹಣ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

Exit mobile version